Donald Trump: ಬಾಂಗ್ಲಾದೇಶವನ್ನು ಪ್ರಧಾನಿ ಮೋದಿ ನೋಡಿಕೊಳ್ತಾರೆ; ಡೊನಾಲ್ಡ್ ಟ್ರಂಪ್
ಪ್ರಧಾನ ನರೇಂದ್ರ ಮೋದಿ ಅಮೆರಿಕ ಪ್ರವಾಸದಲ್ಲಿದ್ದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿ ಮಾಡಿದ್ದಾರೆ. ವಾಷಿಂಗ್ಟನ್ ಡಿಸಿಯಲ್ಲಿ ಉಭಯ ರಾಷ್ಟ್ರಗಳ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಬಾಂಗ್ಲಾದೇಶ ಆಂತರಿಕ ಕಲಹದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, ಅದನ್ನು ಪ್ರಧಾನಿ ಮೋದಿಗೆ ಬಿಡುತ್ತೇನೆ ಎಂದು ಹೇಳಿದ್ದಾರೆ.
ಅಮೆರಿಕ ಮಾಜಿ ಅಧ್ಯಕ್ಷ ಜೋ ಬಿಡೆನ್ ನೇತೃತ್ವದ ಡೆಮಾಕ್ರಟಿಕ್ ಸರ್ಕಾರ, ಬಾಂಗ್ಲಾದೇಶದಲ್ಲಿ ಆಡಳಿತ ಪಕ್ಷವನ್ನು ಪದಚ್ಯುತಗೊಳಿಸಿ ಮುಹಮ್ಮದ್ ಯೂನಸ್ ಅವರನ್ನು ಮುಖ್ಯ ಸಲಹೆಗಾರರನ್ನಾಗಿ ನೇಮಿಸಿದೆಯಾ ಎನ್ನುವ ಬಗ್ಗೆ ವರದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್ ಮೇಲಿನ ಉತ್ತರ ಕೊಟ್ಟಿದ್ದಾರೆ.

ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿರುವುರದಲ್ಲಿ ಅಮೆರಿಕ ಸರ್ಕಾರದ ಪಾತ್ರವಿಲ್ಲ ಎಂದು ಟ್ರಂಪ್ ಸ್ಪಷ್ಟನೆ ನೀಡಿದ್ದಾರೆ. "ನಮ್ಮ ಸರ್ಕಾರಕ್ಕೂ ಬಾಂಗ್ಲಾದೇಶದಲ್ಲಿ ನಡೆದಿರುವ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ. ದೀರ್ಘಕಾಲದಿಂದ ಪ್ರಧಾನಿಯವರು ಕೆಲಸ ಮಾಡುತ್ತಿರುವ ವಿಚಾರ. ನಾನು ಅದರ ಬಗ್ಗೆ ಓದುತ್ತಿದ್ದೇನೆ. ಬಾಂಗ್ಲಾದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಡುತ್ತೇನೆ" ಎಂದು ಟ್ರಂಪ್ ಹೇಳಿದರು.
2024ರ ಆಗಸ್ಟ್ ತಿಂಗಳಿನಲ್ಲಿ ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಭುಗಿಲೆದ್ದ ನಂತರ ಪ್ರಧಾನಿ ಶೇಖ್ ಹಸೀನಾ ಢಾಕಾದಿಂದ ಪಲಾಯನ ಮಾಡಿದ್ದರು. ರಕ್ಷಣೆ ಅರಸಿ ಬಂದ ಅವರಿಗೆ ಭಾರತ ಆಶ್ರು ನೀಡಿದ್ದು, ಬಾಂಗ್ಲಾದೇಶದ ಅಸಮಾಧಾನಕ್ಕೆ ಕಾರಣವಾಗಿದೆ. ಎರಡೂ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ.
ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಿದ ಬಳಿಕ ಅಮೆರಿಕದಿಂದ ಹಿಂದಿರುಗಿದ ನೊಬೆಲ್ ಪ್ರಶಸ್ತಿ ವಿಜೇಯ ಮೊಹಮ್ಮದ್ ಯೂನಸ್ ಬಾಂಗ್ಲಾದೇಶದ ಉಸ್ತುವಾರಿ ವಹಿಸಿಕೊಂಡಿದ್ದರು. ಬಾಂಗ್ಲಾದೇಶದಲ್ಲಿ ಹಿಂದೂ, ಬೌದ್ಧ ಸೇರಿದಂತೆ ಅಲ್ಪ ಸಂಖ್ಯಾತರ ಧಾರ್ಮಿಕ ಸ್ಥಳಗಳು, ಮನೆಗಳನ್ನು ಗುರಿಯಾಗಿಸಿ ದಾಳಿಯನ್ನು ತಡೆಯುವಲ್ಲಿ ಬಾಂಗ್ಲಾದೇಶ ಸರ್ಕಾರ ವಿಫಲವಾಗಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಚರ್ಚೆ ನಡೆಸಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಭಾರತ ಅಲ್ಲಿನ ಪರಿಸ್ಥಿತಿಯನ್ನು ಹೇಗೆ ನೋಡುತ್ತದೆ ಎನ್ನುವುದರ ಬಗ್ಗೆ ಮೋದಿ ಟ್ರಂಪ್ ಬಳಿ ಚರ್ಚಿಸಿದ್ದಾರೆ. ಟ್ರಂಪ್ ಜೊತೆ ಭೇಟಿಗೆ ಮುನ್ನ ನರೇಂದ್ರ ಮೋದಿ ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಅವರನ್ನು ಸಹ ಭೇಟಿಯಾದರು.












Click it and Unblock the Notifications