ಓಮಿಕ್ರಾನ್ ನಂತರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಅಂತ್ಯ!?
ನವದೆಹಲಿ, ಜನವರಿ 4: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಶರವೇಗದಲ್ಲಿ ಹರಡುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯು ಏರಿಕೆಯಾಗಿಲ್ಲ. ಇದರ ಮಧ್ಯೆ ಕೊರೊನಾವೈರಸ್‌ನ ಓಮಿಕ್ರಾನ್ ರೂಪಾಂತರ ಪತ್ತೆಯಾದಾಗಿನಿಂದ, ಪರಿಸ್ಥಿತಿ ಬದಲಾಗಲು ಇನ್ನೂ ಸಾಕಷ್ಟು ಸಮಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
"ನಾವು ಈಗ ಸಂಪೂರ್ಣ ವಿಭಿನ್ನ ಹಂತದಲ್ಲಿದ್ದೇವೆ. ವೈರಸ್ ಯಾವಾಗಲೂ ನಮ್ಮೊಂದಿಗೆ ಇರುತ್ತದೆ, ಆದರೆ ಈ ರೂಪಾಂತರವು ತುಂಬಾ ರೋಗನಿರೋಧಕ ಶಕ್ತಿಯನ್ನು ಉಂಟುಮಾಡುತ್ತದೆ, ಅದರಿಂದ ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ ಎಂಬುದು ನನ್ನ ಭರವಸೆ ಆಗಿದೆ," ಎಂದು ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ರೋಗನಿರೋಧಕ ತಜ್ಞೆ ಮೋನಿಕಾ ಗಾಂಧಿ ಹೇಳಿದ್ದಾರೆ.
ಕಳೆದ ವಾರಗಳ ಡೇಟಾವನ್ನು ಉಲ್ಲೇಖಿಸಿ ವರದಿ ಮಾಡಿರುವ ಬ್ಲೂಮ್‌ಬರ್ಗ್, "ಬಹು ರೂಪಾಂತರಗಳು ಮತ್ತು ಗಣನೀಯ ರೋಗನಿರೋಧಕ ಶಕ್ತಿಯ ಸಂಯೋಜನೆಯು ಕಡಿಮೆ ತೀವ್ರತೆ ರೋಗವನ್ನು ಉಂಟುಮಾಡುವ ವೈರಸ್ ಅನ್ನು ಪ್ರಚೋದಿಸಿದೆ ಎಂದು ತಿಳಿಸಿದೆ.

ಓಮಿಕ್ರಾನ್ ಅಂಟಿದವರಲ್ಲಿ ಆಸ್ಪತ್ರೆಗೆ ದಾಖಲಾದವರು ಕಡಿಮೆ
ಇದರ ಮಧಧ್ಯೆ, ಒರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿಯ ಹಿರಿಯ ಸಂವಹನ ತಜ್ಞ ಎರಿಕ್ ರಾಬಿನ್ಸನ್ ನೀಡಿರುವ ಮುನ್ಸೂಚನೆಯು "ಓಮಿಕ್ರಾನ್ ಸೋಂಕು ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಊಹಿಸಲಾಗುತ್ತಿದೆ." ಯುರೋಪಿನಲ್ಲಿ ಈ ಹಿಂದಿನ ತಳಿಗಳ ಹರಡುವಿಕೆ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯನ್ನು ಅವಲೋಕಿಸಿದಾಗ, ಓಮಿಕ್ರಾನ್ ಕಾಲದಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ತೀರಾ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ.

ಕೊರೊನಾವೈರಸ್ ಲಸಿಕೆ ಪಡೆದರೆ ಸೋಂಕಿನಿಂದ ಸುರಕ್ಷತೆ
"ಜನರು ವೈರಸ್ ಹರಡುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೊರೊನಾವೈರಸ್ ಲಸಿಕೆ ಪಡೆಯುವುದನ್ನು ಹೆಚ್ಚಿಸಿಕೊಳ್ಳಬೇಕು. ಕಳೆದ ಬಾರಿ ಡೆಲ್ಟಾ ರೂಪಾಂತರದ ಸೋಂಕು ಹರಡುವಿಕೆ ಸಂದರ್ಭದಲ್ಲಿ ಆಸ್ಪತ್ರೆದೆ ದಾಖಲಾದವರ ಸಂಖ್ಯೆಯು ಶೇ.1,187ರಷ್ಟಿತ್ತು," ಎಂದು ಒರೆಗಾನ್ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾನಿಲಯದ ವಿಜ್ಞಾನಿ ಪೀಟರ್ ಗ್ರಾವೆನ್ ಹೇಳಿದ್ದಾರೆ.

ಶೇ.88ರಷ್ಟು ಜನರಿಗೆ ಓಮಿಕ್ರಾನ್ ಸೋಂಕಿನಿಂದ ಸುರಕ್ಷತೆ
ಕೊರೊನಾವೈರಸ್ ಲಸಿಕೆಯ ಮೂರನೇ ಡೋಸ್ ಪಡೆದುಕೊಳ್ಳುವುದರಿಂದ ಹೊಸ ತಳಿ ಓಮಿಕ್ರಾನ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಇಳಿಮುಖವಾಗಲಿದೆ. ಮೂರನೇ ಡೋಸ್ ಲಸಿಕೆ ಓಮಿಕ್ರಾನ್ ಸೋಂಕಿನಿಂದ ಶೇ.88ರಷ್ಟು ರಕ್ಷಣೆ ನೀಡುತ್ತದೆ ಎಂದು ಯುಕೆ ಅಧ್ಯಯನವೊಂದು ತಿಳಿಸುತ್ತದೆ. ಯುಕೆ ಆರೋಗ್ಯ ಭದ್ರತಾ ಏಜೆನ್ಸಿ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ ತಿಂಗಳಿನಲ್ಲಿ ಮೊದಲು ಪತ್ತೆಯಾಗಿರುವ ಓಮಿಕ್ರಾನ್ ಸೋಂಕಿನ ವಿರುದ್ಧ ಮೊದಲ ಎರಡು ಡೋಸ್ ಲಸಿಕೆಗಳಿಗೆ ಹೋಲಿಸಿದರೆ, ಮೂರನೇ ಡೋಸ್ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಶೇ.52ರಷ್ಟು ಆಗಲಿದೆ 2ನೇ ಡೋಸ್ ಲಸಿಕೆ ಪರಿಣಾಮ
"ಕೊರೊನಾವೈರಸ್ ಲಸಿಕೆಯ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡ ಆರು ತಿಂಗಳ ನಂತರದಲ್ಲಿ ಓಮಿಕ್ರಾನ್ ವಿರುದ್ಧ ಲಸಿಕೆಯ ಪ್ರಭಾವ ಶೇ.52ಕ್ಕೆ ಇಳಿಕೆಯಾಗಲಿದೆ," ಎಂದು ಆಣ್ವಿಕ ಔಷಧದ ಪ್ರಾಧ್ಯಾಪಕ ಮತ್ತು ಯುಎಸ್‌ನ ಸ್ಕ್ರಿಪ್ಸ್ ರಿಸರ್ಚ್ ಟ್ರಾನ್ಸ್‌ಲೇಶನಲ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಎರಿಕ್ ಟೋಪೋಲ್ ಹೇಳಿದ್ದಾರೆ. ಅದಾಗ್ಯೂ, ಬೂಸ್ಟರ್ ಡೋಸ್ ಲಸಿಕೆಯು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರ ಜೊತೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯನ್ನು ಕಡಿತಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಒಂದೇ ದಿನ 37,000ಕ್ಕೂ ಹೆಚ್ಚು ಮಂದಿಗೆ ಕೊವಿಡ್-19:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ನಡುವೆ ಭಾರತದಲ್ಲಿ ಒಂದೇ ದಿನ 37,000ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 37,379 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 124 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 11,007 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಈವರೆಗೂ 3,43,06,414 ಸೋಂಕಿತರು ಗುಣಮುಖರಾಗಿದ್ದರೆ, 4,82,017 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 1,71,830 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications