ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: 160 ಸಾವು, ನೂರಾರು ಮಂದಿ ನಾಪತ್ತೆ; 133 ಭಾರತೀಯರಿಗಾಗಿ ಶೋಧ

ನೇಪಾಳ: ನೇಪಾಳ-ಟಿಬೆಟ್ ಗಡಿ ಭಾಗದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹ ಹಾಗೂ ಭೂಕುಸಿತ ದುರಂತದಲ್ಲಿ 160 ಮಂದಿ ಮೃತಪಟ್ಟಿದ್ದಾರೆ. ಸುಮಾರು 750 ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ 133 ಭಾರತೀಯರೂ ಸೇರಿದ್ದಾರೆ. ನಾಪತ್ತೆಯಾದವರಲ್ಲಿ ವಿದೇಶಿ ಪ್ರವಾಸಿಗರೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹದ ರಭಸಕ್ಕೆ ಹಲವು ಗ್ರಾಮಗಳು ಮತ್ತು ಮಾರುಕಟ್ಟೆ ಪ್ರದೇಶಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ. ಬಹುಮಹಡಿ ಕಟ್ಟಡಗಳ ಕೆಳ ಮಹಡಿಗಳು ಮಣ್ಣು ಮತ್ತು ಕೆಸರಿನಿಂದ ಮುಚ್ಚಿಹೋಗಿದ್ದು, ರಕ್ಷಣಾ ಸಿಬ್ಬಂದಿ ಬದುಕುಳಿದವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Nepal-Tibet Border Flood 160 Dead Hundreds Missing At Least 133 Indians Unaccounted For

ನೇಪಾಳ ಪ್ರವಾಸೋದ್ಯಮ ಸಚಿವಾಲಯದ ಮಾಹಿತಿ ಪ್ರಕಾರ, ದುರಂತ ಸಂಭವಿಸಿದ ಕೆಲ ಸಮಯದವರೆಗೆ 403 ಪ್ರವಾಸಿಗರ ಬಗ್ಗೆ ಮಾಹಿತಿ ಲಭ್ಯವಾಗಿರಲಿಲ್ಲ. ಇವರಲ್ಲಿ 341 ಮಂದಿ ವಿದೇಶಿಯರು ಎನ್ನಲಾಗಿದೆ.ನಾಪತ್ತೆಯಾದ ವಿದೇಶಿ ಪ್ರವಾಸಿಗರಲ್ಲಿ ಕನಿಷ್ಠ 133 ಮಂದಿ ಭಾರತೀಯರು ಸೇರಿದ್ದಾರೆ. ಆಸ್ಟ್ರೇಲಿಯಾ, ಬ್ರಿಟನ್, ಮಲೇಷ್ಯಾ, ನೆದರ್ಲ್ಯಾಂಡ್ಸ್, ಪೋರ್ಚುಗಲ್, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಪ್ರಜೆಗಳೂ ನಾಪತ್ತೆಯಾಗಿರುವವರ ಪಟ್ಟಿಯಲ್ಲಿದ್ದಾರೆ.

ಪ್ರವಾಹಕ್ಕೆ ಕಾರಣವೇನು?

ಪ್ರವಾಹಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಭೂಕಂಪದಿಂದ ಭೂಕುಸಿತ ಸಂಭವಿಸಿ ನದಿಯ ಹರಿವಿಗೆ ತಡೆ ಉಂಟಾಗಿರಬಹುದು ಎಂದು ನೇಪಾಳದ ವಿದೇಶಾಂಗ ಸಚಿವರು ತಿಳಿಸಿದ್ದಾರೆ. ನೇಪಾಳದ ವಿಪತ್ತು ನಿರ್ವಹಣಾ ಸಂಸ್ಥೆಯು ಉಪಗ್ರಹ ಮಾಹಿತಿಯ ಆಧಾರದ ಮೇಲೆ, ನೇಪಾಳ-ಚೀನಾ ಗಡಿ ಭಾಗದಲ್ಲಿ ಸಂಭವಿಸಿದ ಹಿಮ ಮತ್ತು ಬಂಡೆಗಳ ಭೂಕುಸಿತ ಪ್ರವಾಹಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ತಿಳಿಸಿದೆ. ತಜ್ಞರ ಪ್ರಕಾರ, ಬೃಹತ್ ಪ್ರಮಾಣದ ಬಂಡೆ-ಹಿಮದ ಕುಸಿತದಿಂದ ನದಿಯ ಹರಿವು ತಡೆಗೊಳ್ಳುವ ಮೂಲಕ ನೀರು ಸಂಗ್ರಹವಾಗಿ, ನಂತರ ಭಾರೀ ಪ್ರಮಾಣದಲ್ಲಿ ಕೆಳಭಾಗಕ್ಕೆ ಹರಿದು ಈ ದುರಂತ ಸಂಭವಿಸಿರಬಹುದು.

ಎರಡನೇ ಪ್ರವಾಹದ ಭೀತಿ

ಗಡಿ ಭಾಗದ ನದಿಯ ಮೇಲ್ಭಾಗದಲ್ಲಿ ಇನ್ನೂ ತಡೆ ಉಂಟಾಗಿರುವ ಹಿನ್ನೆಲೆಯಲ್ಲಿ ಮತ್ತೊಂದು ಪ್ರವಾಹ ಸಂಭವಿಸುವ ಅಪಾಯ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ನದಿ ತೀರದ ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ನೇಪಾಳ ಸೇನೆ ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಹಲವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಪ್ರವಾಹ ಮತ್ತು ಭೂಕುಸಿತದಿಂದ ವಿದ್ಯುತ್ ಮೂಲಸೌಕರ್ಯಕ್ಕೂ ಭಾರಿ ಹಾನಿಯಾಗಿದ್ದು, ಸುಮಾರು 430 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯಕ್ಕೆ ಹಾನಿ ಉಂಟಾಗಿದೆ ಎಂದು ನೇಪಾಳ ವಿದ್ಯುತ್ ಪ್ರಾಧಿಕಾರ ತಿಳಿಸಿದೆ. ನೇಪಾಳ ಪ್ರಧಾನಿ ಬಲೆಂದ್ರ ಶಾ ಅವರು ಸಂತ್ರಸ್ತರಿಗೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪ್ರಧಾನಿ ಮೋದಿ ಅಭಯ

ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರೊಂದಿಗೆ ಮಾತನಾಡಿ ಭಾರತದ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ. ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂತ್ರಸ್ತ ಭಾರತೀಯರಿಗಾಗಿ +977 9851316807 ಮತ್ತು +977 9709107500 ತುರ್ತು ಸಹಾಯವಾಣಿಗಳನ್ನು ಆರಂಭಿಸಿದೆ.

ಟಿಬೆಟ್ ಕಡೆಯಿಂದ ಚೀನಾದ ಪೀಪಲ್ಸ್ ಆರ್ಮ್ಡ್ ಪೊಲೀಸ್ ಮತ್ತು ನೇಪಾಳ ಕಡೆಯಿಂದ ಸೇನಾ ಹೆಲಿಕಾಪ್ಟರ್‌ಗಳು ಸಂವಹನ ಸಂಪೂರ್ಣ ಸ್ಥಗಿತಗೊಂಡಿರುವ ಕಣಿವೆ ಪ್ರದೇಶಗಳಲ್ಲಿ ಯಾತ್ರಿಕರ ಪತ್ತೆಗೆ ತೀವ್ರ ಶೋಧ ನಡೆಸುತ್ತಿವೆ. ಹಠಾತ್ ಪ್ರವಾಹವು ಹಲವಾರು ವಸಾಹತುಗಳು, ರಸ್ತೆಗಳು, ಸೇತುವೆಗಳು, ಭದ್ರತಾ ಕಂಬಗಳು ಮತ್ತು ಜಲವಿದ್ಯುತ್ ಯೋಜನೆಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ. ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರ ತಂಡಗಳು ನಿರಂತರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+