ಕಾರ್ಗಿಲ್ ಯುದ್ಧ ನಡೆಯಲು ಇದೇ ಕಾರಣ: ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ತಪ್ಪೊಪ್ಪಿಗೆ
ಇಷ್ಟು ದಿನ ತಾನು ಮಾಡಿದ ತಪ್ಪುಗಳನ್ನೇ ಬೇರೆಯವರತ್ತ ಬೊಟ್ಟು ಮಾಡಿ ತೋರಿಸುತ್ತಿದ್ದ ಪಾಕಿಸ್ತಾನ, ಕೊನೆಗೂ ಸತ್ಯವನ್ನು ಅರ್ಥ ಮಾಡಿಕೊಂಡು ಜಗತ್ತಿನ ಮುಂದೆ ತೆರೆದಿಟ್ಟಿದೆ. ಅಲ್ಲದೆ ಕಾರ್ಗಿಲ್ ಯುದ್ಧ ನಡೆಯಲು ಸಹ ಇದೇ ತಪ್ಪು ಕಾರಣ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ.
ಕಾರ್ಗಿಲ್ ಯುದ್ಧವೂ ಮುಗಿದು 25 ವರ್ಷಗಳೇ ಕಳೆದಿವೆ. ಅಷ್ಟೇ ಏಕೆ ಮಾಜಿ ಪ್ರಧಾನಿ ನವಾಜ್ ಶರೀಫ್ ಹೇಳುತ್ತಿರುವ ಒಪ್ಪಂದ ಆಗಿ 26 ವರ್ಷಗಳೇ ಸಂದಿವೆ. ಈ ಸಮಯದಲ್ಲಿ ನವಾಜ್ ಶರೀಪ್ ಆ ಒಂದು ತಪ್ಪನ್ನು ಪಾಕಿಸ್ತಾನ ಮಾಡಿದೆ ಎಂದು ಶರೀಫ್ ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದೊಂದಿಗೆ ಸಹಿ ಮಾಡಿದ್ದ 1999ರ ಒಪ್ಪಂದವನ್ನು ಪಾಕ್ ಉಲ್ಲಂಘಿಸಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮಂಗಳವಾರ ಒಪ್ಪಿಕೊಂಡಿದ್ದಾರೆ. ಕಾರ್ಗಿಲ್‌ನಲ್ಲಿ ಜನರಲ್ ಪರ್ವೇಜ್ ಮುಷರಫ್ ನಡೆಸಿದ ದಾಳಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ಅವರು ಹೀಗೆ ಹೇಳಿದ್ದಾರೆ.
ಶರೀಫ್ ಹೇಳಿದ್ದೇನು?
ಆಡಳಿತಾರೂಢ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಪಕ್ಷದ ಸಾಮಾನ್ಯ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಹಿಂದಿನ ಘಟನೆಯನ್ನು ಮೆಲಕು ಹಾಕಿದ್ದಾರೆ. ಮೇ 28, 1998 ರಂದು ಪಾಕಿಸ್ತಾನ ಐದು ಪರಮಾಣು ಪರೀಕ್ಷೆಗಳನ್ನು ನಡೆಸಿತು. ಆ ನಂತರ ವಾಜಪೇಯಿ ಸಾಹೇಬರು ಇಲ್ಲಿಗೆ ಬಂದು ನಮ್ಮೊಂದಿಗೆ ರಾಜಿ ಮಾಡಿಕೊಂಡರು. ಆದರೆ, ನಾವು ಆ ಒಪ್ಪಂದವನ್ನು ಉಲ್ಲಂಘಿಸಿದ್ದೇವೆ. ಅದು ನಮ್ಮ ತಪ್ಪು ಎಂದು ಶರೀಫ್ ಹೇಳಿದ್ದಾರೆ.
ಕ್ಲಿಂಟನ್ ಆಫರ್ ನಿರಾಕರಣೆ
ಪಾಕಿಸ್ತಾನದ ಪರಮಾಣು ಪರೀಕ್ಷೆಗಳ 26 ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ವೇಳೆ ಮಾತನಾಡಿದ ನವಾಜ್ ಷರೀಫ್, ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಪಾಕಿಸ್ತಾನವನ್ನು ಪರಮಾಣು ಪರೀಕ್ಷೆಗಳನ್ನು ನಡೆಸದಂತೆ ಐದು ಬಿಲಿಯನ್ ಯುಎಸ್ ಡಾಲರ್‌ಗಳನ್ನು ನೀಡುವುದಾಗಿ ತಿಳಿಸಿದ್ದರು. ಆದರೆ ನಾನು ನಿರಾಕರಿಸಿದೆ. ಇಮ್ರಾನ್ ಖಾನ್ ಅವರಂತಹ ವ್ಯಕ್ತಿ ನನ್ನ ಸ್ಥಾನದಲ್ಲಿದ್ದರೆ, ಅವರು ಕ್ಲಿಂಟನ್ ಅವರ ಪ್ರಸ್ತಾಪವನ್ನು ಸ್ವೀಕರಿಸುತ್ತಿದ್ದರು ಎಂದು ಹೇಳಿದ್ದಾರೆ.

ಒಪ್ಪಂದ ಏನು?
ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಫೆಬ್ರವರಿ 21, 1999 ರಂದು ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಉಭಯ ದೇಶಗಳ ನಡುವಿನ ಶಾಂತಿ ಮತ್ತು ಸ್ಥಿರತೆಯ ದೃಷ್ಟಿಯ ಬಗ್ಗೆ ಮಾತನಾಡಿದ ಈ ಒಪ್ಪಂದವು ಪ್ರಮುಖ ಯಶಸ್ಸನ್ನು ಸೂಚಿಸಿತ್ತು. ಆದರೆ ಕೆಲವು ತಿಂಗಳ ನಂತರ, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನಲ್ಲಿ ಪಾಕಿಸ್ತಾನದ ಒಳನುಸುಳುವಿಕೆಯಿಂದಾಗಿ ಕಾರ್ಗಿಲ್ ಯುದ್ಧ ಪ್ರಾರಂಭವಾಯಿತು.
ಆರು ವರ್ಷಗಳ ಬಳಿಕ ಅಧ್ಯಕ್ಷ
ಪಾಕ್ ಮಾಜಿ ಪ್ರಧಾನಿ ಆರು ವರ್ಷಗಳ ಬಳಿಕ ಪಿಎಂಎಲ್‌ಎನ್ ಅಧ್ಯಕ್ಷರಾಗಿ ಅವಿರೋಧವಾಗಿ ಮಂಗಳವಾರ ಆಯ್ಕೆ ಆದರು. ಕಳೆದ ವರ್ಷ ಅವರು ತಮ್ಮ ಮೇಲಿನ ಎಲ್ಲ ಭ್ರಷ್ಟಾಚಾರ ಪ್ರಕರಣದಿಂದ ಖುಲಾಸೆ ಗೊಂಡಿದ್ದಾರೆ. ಪನಾಮ ಪೇಪರ್ಸ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡ ಆರು ವರ್ಷಗಳ ನಂತರ ಪಿಎಂಎಲ್-ಎನ್ ಮುಖ್ಯಸ್ಥರು ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ.












Click it and Unblock the Notifications