ಹೆತ್ತವರ ಜತೆ ಮೋದಿ 'ಪುತ್ರ' ನ ಪುನರ್ಮಿಲನ
ಕಠ್ಮಂಡು, ಆ.3: ಸುಮಾರು 17 ವರ್ಷಗಳ ನಂತರ ಹಿಮಾಲಯದ ತಪ್ಪಲಿನ ದೇಶದ ನೇಪಾಳದಲ್ಲಿ ಎರಡು ದಿನಗಳ ಪ್ರವಾಸಕ್ಕೆ ಆಗಮಿಸಿರುವ ನರೇಂದ್ರ ಮೋದಿ ಅವರು ಮೊದಲ ದಿನವೇ ಜನಮನ ಗೆದ್ದಿದ್ದಾರೆ.
ಸದಾ ಕಾಲ ರಾಜಕೀಯ ಅಸ್ಥಿರತೆ, ಪ್ರತಿಭಟನೆಗಳನ್ನು ಕಾಣುವ ನೇಪಾಳಿಗಳು ಮೋದಿ ಅವರ ಸ್ವಾಗತಕ್ಕೆ ಸಾಲುಗಟ್ಟಿ ನಿಂತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ನೇಪಾಳಕ್ಕೆ ಬಂದಿರುವ ಮೋದಿ ತಮ್ಮ ಜೊತೆ 'ಜೀತ್' ಕರೆ ತಂದಿದ್ದು, ಜನರ ಸಂತಸ ಇಮ್ಮಡಿಗೊಳಿಸಿದೆ.
ಅದೊಂದು ಅಪರೂಪದ ಕ್ಷಣ. 16 ವರ್ಷಗಳ ನಂತರ ಮನೆ ಬಿಟ್ಟು ಹೋಗಿದ್ದ ಪುತ್ರನನ್ನು ಕಂಡು ಭಾವುಕರಾದ ನೇಪಾಳಿ ತಂದೆ-ತಾಯಿಗಳು ಹಾಗೂ ಅವರ ಕುಟುಂಬ. ಹೆತ್ತವರನ್ನು ಕಂಡು ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂತೆ ಕುಣಿದು ಕುಪ್ಪಳಿಸಿದ ಮಗ. ಇಂಥ ಅಪರೂಪದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಕಾರಣರಾಗಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ. [ಕಾಂತಿಪುರದಲ್ಲಿ ನರೇಂದ್ರಮೋದಿ 'ಕಾಂತಿ' ಆರಂಭ ]
ಮೋದಿ ಅವರು ತಮ್ಮ ಸಾಕು ಪುತ್ರ, ಧರ್ಮಪುತ್ರ ಜೀತ್ ಬಹದ್ದೂರ್ ನನ್ನು ಆತನ ಹೆತ್ತವರೊಡನೆ ಸೇರಿಸಿ ಧನ್ಯತೆ ಅನುಭವಿಸಿದ್ದಾರೆ. ಜೀತ್ ಕುಟುಂಬಕ್ಕೆ ಉಡುಗೊರೆಗಳನ್ನು ನೀಡಿ ಮನ ಗೆದ್ದಿದ್ದಾರೆ. ನೇಪಾಳಿಗಳು ಮೋದಿ ಅವರು ತುಂಬು ಹೃದಯದಿಂದ ಹಾರೈಸಿದ್ದಾರೆ.

ಮೋದಿಗೆ ಜೀತ್ ಕಂಡರೆ ಎಲ್ಲಿಲ್ಲದ ಅಕ್ಕರೆ
1998ರಲ್ಲಿ ನೇಪಾಳದಿಂದ ಉದ್ಯೊಗ ಅರಸಿ ಭಾರತಕ್ಕೆ ಬಂದಿದ್ದು ಜೀತ್ ಬಹದ್ದೂರ್. ದೆಹಲಿ ಸೇರಿದಂತೆ ಅನೇಕ ಕಡೆ ಸುತ್ತಾಡಿದ್ದ ಕೊನೆಗೆ ಅಹಮದಾಬಾದ್‌ನಲ್ಲಿ ಮೋದಿ ಅವರ ಕಣ್ಣಿಗೆ ಈತ ಬಿದ್ದ. ಅದೇಕೋ ಏನೋ ಜೀತ್ ಬಹದ್ದೂರ್ ಬಗ್ಗೆ ಮೋದಿಗೆ ಎಲ್ಲಿಲ್ಲದ ಪ್ರೀತಿ-ಮಮಕಾರ ಹುಟ್ಟಿ ಬಂದಿತು. ಕೆಲಸಕ್ಕಿಂತ ಹೆಚ್ಚಾಗಿ ವಿದ್ಯಾಭ್ಯಾಸ ಮುಂದುವರಿಸುವಂತೆ ಸಲಹೆ ಮಾಡಿದರು.

ಮೋದಿ ಅವರಿಗೆ ನಾನು ಚಿರಋಣಿ
ನಾನು ಚಿಕ್ಕವನಿದ್ದಾಗ ನನ್ನನ್ನು ಹೆತ್ತರಿಗಿಂತ ಚೆನ್ನಾಗಿ ಮೋದಿ ಅವರು ನೋಡಿಕೊಂಡಿದ್ದಾರೆ. ಉತ್ತಮ ವಿದ್ಯೆ, ಸಂಸ್ಕಾರ ನೀಡಿದ್ದಾರೆ. ಅವರಿಗೆ ನಾನು ಚಿರಋಣಿ ಎಂದು ಜೀತ್ ಬಹದ್ದೂರ್ ಹೇಳಿಕೆ

ಬಹದ್ದೂರ್ ಈಗ ಬಿಬಿಎಂ ಪದವೀಧರ
ಮೋದಿ ಅವರ ಆಸರೆ ಪಡೆದು ವಿದ್ಯೆ ಮುಂದುವರೆಸಿದ ಬಹದ್ದೂರ್ ಅಹಮದಾಬಾದ್‌ನಲ್ಲಿ ಬಿಬಿಎಂ ಪದವೀಧರನಾದ. ಇದೀಗ ಮೋದಿ ಅವರ ಜತೆ ನೇಪಾಳ ಬಂದಿದ್ದಾನೆ. ತಮ್ಮ ವಿಶೇಷ ವಿಮಾನದಲ್ಲಿ ಜೀತ್ ಬಹದ್ದೂರ್‌ನನ್ನು ದೆಹಲಿಯಿಂದ ಕಠ್ಮಂಡುಗೆ ಕರೆದೊಯ್ದಿದ್ದಾರೆ.

ಜೀತ್ ಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು
ನೇಪಾಳದ ಪೂರ್ವ ಭಾಗದಲ್ಲಿರುವ ನವಲ್ ಪರಾಸಯ್ ಜಿಲ್ಲೆಯ ಕವಸೋಟಿ ಗ್ರಾಮದಲ್ಲಿ ಬಹದ್ದೂರ್ ಜನಿಸಿದ್ದ ಜೀತ್ ನೋಡಲು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಗನ ಬರುವಿಕೆಗಾಗಿ ತಂದೆ-ತಾಯಿಗಳು, ಸಹೋದರ-ಸಹೋದರಿಯರು ಚಾತಕ ಪಕ್ಷಿಯಂತೆ ಕಾಯುತ್ತಿದ್ದರು.

ಒಂದು ಕ್ಷಣ ಎಲ್ಲರೂ ಭಾವುಕರಾದರು
ಬೆಳಿಗ್ಗೆ ಆತನನ್ನು ಬರಮಾಡಿಕೊಳ್ಳಲು ತಾಯಿ ಕಾಗಿಸರ, ಹಿರಿಯ ಸಹೋದರ ದಶರಥ್, ಕಿರಿಯ ಸಹೋದರಿ ಪ್ರೇಮಕುಮಾರಿ ಸೇರಿದಂತೆ ಮತ್ತಿತರರು ಕಾದು ಕುಳಿತಿದ್ದರು. ಬಹದ್ದೂರ್ ಜೀತ್ ವಿಮಾನ ಇಳಿದು ಜನ್ಮಭೂಮಿಯನ್ನು ಸ್ಪರ್ಶ ಮಾಡಿದ ನಂತರ ತಾಯಿಯನ್ನು ತಬ್ಬಿಕೊಂಡಾಗ ಒಂದು ಕ್ಷಣ ಎಲ್ಲರೂ ಭಾವುಕರಾದರು. ಈ ಘಟನೆಗೆ ಮೋದಿ, ನೇಪಾಳ ಪ್ರಧಾನಿ ಸೇರಿದಂತೆ ಅನೇಕರು ಸಾಕ್ಷಿಯಾದರು.












Click it and Unblock the Notifications