Donald Trump: ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡಿದ ಪ್ರಧಾನಿ ಮೋದಿ
ಅಮೆರಿಕ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡೊನಾಲ್ಡ್ ಟ್ರಂಪ್ ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್‌ಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಅಮೆರಿಕ ಜೊತೆಗಿನ ಪರಸ್ಪರ ಪ್ರಯೋಜನಕಾರ ಮತ್ತು ವಿಶ್ವಾಸಾರ್ಹ ಸಂಬಂಧಕ್ಕೆ ಭಾರತ ಬದ್ದವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ರಂಪ್‌ಗೆ ಹೇಳಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ರಂಪ್ ಜೊತೆಗಿನ ಸಂಭಾಷಣೆ ಬಗ್ಗೆ ಹಂಚಿಕೊಂಡಿರುವ ಅವರು, ನನ್ನ ಆತ್ಮೀಯ ಸ್ನೇಹಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ಮಾತನಾಡಿದ್ದು ಸಂತೋಷವಾಗಿದೆ. ಎರಡನೇ ಬಾರಿ ಯುಎಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಅವರಿಗೆ ಅಭಿನಂದನೆ ತಿಳಿಸಿದ್ದೇನೆ. ನಾವು ಪರಸ್ಪರ ಪ್ರಯೋಜನಕಾರಿ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಗೆ ಬದ್ಧರಾಗಿದ್ದೇವೆ. ಜನರ ಅಭಿವೃದ್ಧಿ ಮತ್ತು ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಭದ್ರತೆಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ" ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇಬ್ಬರು ನಾಯಕರ ನಡುವೆ ನಡೆದ ಮೊದಲ ಮಾತುಕತೆ ಇದಾಗಿದೆ. ಡೊನಾಲ್ಡ್ ಟ್ರಂಪ್ ವಲಸಿಗರ ವಿಚಾರದಲ್ಲಿ ತೆಗೆದುಕೊಳ್ಳುತ್ತಿರುವ ಕಠಿಣ ನಿಲುವುಗಳು ಅಮೆರಿಕದಲ್ಲಿರುವ ಭಾರತೀಯರ ಮೇಲೂ ಪರಿಣಾಮ ಬೀರುತ್ತಿದೆ. ಆದರೆ ಈ ಬಗ್ಗೆ ನರೇಂದ್ರ ಮೋದಿ ಪ್ರಸ್ತಾಪಿಸಿಲ್ಲ.
ವಲಸಿಗರಿಗೆ ಕಡಿವಾಣ ಹಾಕಲು ಟ್ರಂಪ್ ಬದ್ಧ
ಅಮರಿಕದ ಡೆಮಾಗ್ರಾಫಿಕ್ ಬದಲಾವಣೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಡೊನಾಲ್ಡ್ ಟ್ರಂಪ್ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ದೇಶದಿಂದ ಹೊರಕಳಿಸಲು ಆರಂಭಿಸಿದ್ದಾರೆ. ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರುವ ವಿದೇಶಿಯರನ್ನು ಅಮೆರಿಕಕ್ಕೆ ಕರೆತರಲು ಕಂಪನಿಗಳಿಗೆ ಅವಕಾಶ ನೀಡುವ ಎಚ್1-ಬಿ ವೀಸಾಗಳನ್ನು ಪರಿಶೀಲನೆ ಮಾಡಲು ಟ್ರಂಪ್ ಸರ್ಕಾರ ಮುಂದಾಗಿದ್ದು, ಇದೀಗ ಮತ್ತಷ್ಟು ವಲಸಿಗರಿಗೆ ಆತಂಕ ಶುರುವಾಗಿದೆ.
ಅಮೆರಿಕದಲ್ಲಿ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾನೂನು ಬದ್ದ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ಭಾರತೀಯರು ಕೆನಡಿಯನ್ ಮತ್ತು ಮೆಕ್ಸಿಕನ್ ಗಡಿಗಳನ್ನು ದಾಟಿ ಅಕ್ರಮವಾಗಿ ಯುಎಸ್‌ಗೆ ಪ್ರವೇಶಿಸಿದ್ದಾರೆ.
ಟ್ರಂಪ್ ಅಧಿಕಾರ ಸ್ವೀಕರಿಸಿದ ಒಂದು ದಿನದ ಬಳಿಕ ಮಂಗಳವಾರ ವಾಷಿಂಗ್ಟನ್‌ನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭೇಟಿ ಮಾಡಿದ್ದರು. ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಭಾರತೀಯರನ್ನು ಮರಳಿ ಸ್ವೀಕರಿಸಲು ಸಿದ್ಧವಾಗಿದೆ ಎಂದು ಹೇಳಿದರು.
ಭಾರತೀಯ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಅವಕಾಶ ಪಡೆಯಬೇಕು. ಆದರೆ ಅಕ್ರಮ ವಲಸೆಯನ್ನು ನಾವು ವಿರೋಧಿಸುತ್ತೇವೆ. ದಾಖಲೆರಹಿತ ಸುಮಾರು 18,000 ಭಾರತೀಯರನ್ನು ಟ್ರಂಪ್ ಸರ್ಕಾರ ಗಡೀಪಾರು ಮಾಡಲು ಕೆಲಸ ಮಾಡುತ್ತಿದ್ದು ಅವರೆಲ್ಲರೂ ಭಾರತಕ್ಕೆ ಮರಳಲಿದ್ದಾರೆ.












Click it and Unblock the Notifications