Gaza War: ಗಾಜಾ ಪಟ್ಟಿಯಲ್ಲಿ ಕೆಲವೇ ದಿನದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರ ಬಾಳು ಬೀದಿಗೆ
ಇಸ್ರೇಲ್ & ಗಾಜಾ ಪಟ್ಟಿ ನಡುವೆ ಹಿಂಸಾಚಾರ ಸ್ಫೋಟಗೊಂಡ ನಂತರ ಇಡೀ ಜಗತ್ತು ಈ ಬಗ್ಗೆ ಚಿಂತೆ ಮಾಡುವಂತೆ ಆಗಿದೆ. ನಿಂತು ಹೋಗಿದ್ದ ಯುದ್ಧವು ಮತ್ತೆ ಭುಗಿಲೆದ್ದು ಇದೀಗ ಇಸ್ರೇಲಿ ಪಡೆಗಳು ತಮ್ಮ ದಾಳಿಯನ್ನು ಹೆಚ್ಚು ಮಾಡಿವೆ. ಇದರ ಪರಿಣಾಮ ಗಾಜಾ ಪಟ್ಟಿ ನರಕವಾಗಿ ಬದಲಾಗಿದ್ದು, ಜನರು ಮತ್ತೆ ಓಡಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲೇ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಹೊರಬಿದ್ದಿದೆ.
1.5 ವರ್ಷ ಮುಗಿಸಿದರೂ ಇಸ್ರೇಲ್ & ಹಮಾಸ್ ಯುದ್ಧ ನಿಲ್ಲುತ್ತಿಲ್ಲ. ಇದೇ ಕಾರಣ ಪರಿಸ್ಥಿತಿ ಕೈಮೀರಿ ಹೋಗಿದ್ದು, ಅದ್ರಲ್ಲೂ ಇಸ್ರೇಲ್ ಸೇನೆ ಈಗ ಗಾಜಾ ಪಟ್ಟಿ ಮೂಲೆ, ಮೂಲೆಯಲ್ಲೂ ಭೀಕರ ಅಟ್ಯಾಕ್ ಮುಂದುವರಿಸಿದೆ. ಇಸ್ರೇಲ್ ನಡೆಸಿದ ದಾಳಿಯಿಂದ ಸಾವಿನ ಸಂಖ್ಯೆ ಹೆಚ್ಚಾಗಿ ಜನರು ಮನೆ & ಸೂರು ಕಳೆದುಕೊಂಡು ನರಳುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಇಂತಹ ಸಮಯದಲ್ಲೇ ಮತ್ತೆ ಯುದ್ಧ ಭುಗಿಲೆದ್ದ ಕೆಲವೇ ದಿನದಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಜನರ ಬಾಳು ಬೀದಿಗೆ ಬಿದ್ದಿದೆ ಎಂದು ಆರೋಪ ಮಾಡಲಾಗಿದೆ.

ದಿಢೀರ್ ಭುಗಿಲೆದ್ದ ಯುದ್ಧ ಜ್ವಾಲೆ!
ಹಮಾಸ್ ಹಿಡಿತದಲ್ಲಿರುವ ಗಾಜಾದ ಉತ್ತರ & ದಕ್ಷಿಣ ಭಾಗದ ಮೇಲೆ ಇಸ್ರೇಲ್ ಅಟ್ಯಾಕ್ ಮಾಡಿ ಹಿಡಿತಕ್ಕೆ ಪ್ರಯತ್ನಿಸುತ್ತಿದೆ. ಹಮಾಸ್ ಸುರಂಗಗಳ ಜೊತೆಗೆ ಪ್ರತಿಯೊಂದು ಜಾಗವನ್ನೂ ಈಗ ಹುಡುಕಿ ಹುಡುಕಿ ದಾಳಿ ಮಾಡಲಾಗುತ್ತಿದೆ. ಇದರ ಪರಿಣಾಮ ಸಾವಿನ ಸಂಖ್ಯೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಮತ್ತೊಂದು ಕಡೆ ಜನರು ಅನ್ನ & ನೀರು ಇಲ್ಲದೆ ನರಳಿ ಹೋಗುವ ವಾತಾವರಣ ಸೃಷ್ಟಿಯಾಗಿದೆ. ಒತ್ತೆಯಾಳುಗಳ ಬಿಡುಗಡೆ ಮಾಡುವ ವಿಚಾರದಲ್ಲಿ ಹಮಾಸ್ & ಇಸ್ರೇಲ್ ನಡುವೆ ತಿಕ್ಕಾಟ ಶುರುವಾಗಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.
2023ರ ಅಕ್ಟೋಬರ್ 7 ರಂದು...
ಹಮಾಸ್ ಎಸಗಿದ ಕೃತ್ಯಕ್ಕೆ ಗಾಜಾಪಟ್ಟಿ ಸಾಮಾನ್ಯ ಜನ ನಲುಗಿದ್ದು, ಅಕ್ಟೋಬರ್ 7ರ ಶನಿವಾರ ಹಮಾಸ್ ದಾಳಿ ನಡೆಸಿತ್ತು. 2023ರ ಅಕ್ಟೋಬರ್ 7 ರಂದು ಯುದ್ಧ ಶುರುವಾಗಿತ್ತು. ಇಸ್ರೇಲ್ ವಿರುದ್ಧ 5000 ರಾಕೆಟ್ ಉಡಾಯಿಸಿದ್ದ ಹಮಾಸ್, ಭಾರಿ ಶಸ್ತ್ರಾಸ್ತ್ರ & ಬಾಂಬ್ ಹಿಡಿದು ಇಸ್ರೇಲ್ ಒಳ ನುಗ್ಗಿ ನೂರಾರು ಜನರನ್ನ ಅಪಹರಣ ಮಾಡಿ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರೋಪ ಕೇಳಿ ಬಂದಿತ್ತು. ಆದರೆ ಈ ವರ್ಷದ ಆರಂಭದಲ್ಲಿ ಕದನ ವಿರಾಮ ಘೋಷಣೆ ಮಾಡಿದ್ದರು, ಹೀಗಿದ್ದಾಗ ಮತ್ತೆ ಯುದ್ಧದ ಬೆಂಕಿ ಸ್ಫೋಟಗೊಂಡು ಹಿಂಸಾಚಾರ ಆರಂಭವಾಗಿದೆ. ಹೀಗಾಗಿ ಜನರು ಕೂಡ ಜೀವ ಉಳಿಸಿಕೊಳ್ಳಲು ಓಡಿ ಹೋಗುವ ವಾತಾವರಣ ನಿರ್ಮಾಣವಾಗಿದೆ.












Click it and Unblock the Notifications