ಕುಸಿಯುತ್ತಿರುವ ವಿವಾಹ ಪ್ರಮಾಣ: ಮದುವೆ ಹೆಚ್ಚಿಸಲು ಬ್ಯಾಂಕ್, ನೈಟ್ ಕ್ಲಬ್‌ಗಳಲ್ಲೂ ನೋಂದಣಿಗೆ ಸರ್ಕಾರದ ಕ್ರಮ
ಒಂದು ಕಾಲದಲ್ಲಿ ಚೀನಾ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನ ಸಂಖ್ಯೆಯನ್ನು ಹೊಂದಿರುವ ದೇಶವಾಗಿತ್ತು. ಆಗ ಜನಸಂಖ್ಯೆಯನ್ನು ನಿಯಂತ್ರಿಸುವುದು ಹೇಗೆ ಎನ್ನುವುದೇ ಸರ್ಕಾರ ಚಿಂತೆಯಾಗಿತ್ತು. ಆದರೆ ಇದೀಗ ದೇಶದಲ್ಲಿ ಜನನ ಪ್ರಮಾಣ ಗಣನೀಯವಾಗಿ ಕಡಿಮೆಯಾಗ್ತಾ ಇದೆ. ಹಾಗಾಗಿ ಕಡಿಮೆಯಾಗುವ ಜನನ ಪ್ರಮಾಣ ಮತ್ತು ವಿವಾಹ ದರವನ್ನು ಮತ್ತೆ ಸರಿದಾರಿಗೆ ತರಲು ಚೀನಾ ಸರ್ಕಾರ ಪ್ರಮುಖ ಹೆಜ್ಜೆ ಇಟ್ಟಿದೆ. ಮದುವೆಯತ್ತ ಯುವಕ, ಯುವತಿಯರನ್ನು ಆಕರ್ಷಿಸಲು ವಿವಾಹ ನೊಂದಣಿ ಪ್ರಕ್ರಿಯೆಯನ್ನು ಸುಲಭ ಮಾಡಲು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ವಿವಾಹ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಬೇಗ ಮತ್ತು ಸುಲಭವಾಗಿ ಆಗುವಂತೆ ಮಾಡಲು ಹೆರಿಗೆ ಆಸ್ಪತ್ರೆಗಳು, ಬ್ಯಾಂಕ್‌ಗಳು ಮತ್ತು ನೈಟ್‌ಕ್ಲಬ್‌ಗಳಲ್ಲಿ ವಿವಾಹ ನೋಂದಣಿ ಕೌಂಟರ್‌ಗಳನ್ನು ತೆರೆಯುತ್ತಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಒಂದೇ ಸೂರಿನಡಿ ಮೂರು ಸೇವೆ:
ಈ ನಿಟ್ಟಿನಲ್ಲಿ ಇತ್ತೀಚಿನ ಎಂದರೆ ಕಿಕ್ಸಿ ಉತ್ಸವದ ಸಂದರ್ಭದಲ್ಲಿ ಶಾಂಡೊಂಗ್ ಪ್ರಾಂತ್ಯದ ಲಿಂಜಿ ಜಿಲ್ಲೆಯ ಮಾತೃ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆಯಲ್ಲಿ ಕೂಡಾ ವಿವಾಹ ನೋಂದಣಿ ಕೇಂದ್ರವನ್ನು ತೆರೆಯಲಾಗಿದೆ. ಅಲ್ಲದೆ, ದಂಪತಿಗಳು ಈಗ ಕಾನೂನುಬದ್ಧವಾಗಿ ಸ್ಥಳದಲ್ಲೇ ವಿವಾಹವಾಗಬಹುದು ಎಂದು ಕೂಡಾ ಘೋಷಿಸಿದೆ. ಆಸ್ಪತ್ರೆಯ ಆಡಳಿತಾಧಿಕಾರಿಗಳ ಪ್ರಕಾರ, ಈ ವ್ಯವಸ್ಥೆಯಲ್ಲಿ ಒಂದೇ ಸೂರಿನಡಿಯಲ್ಲಿ ನವವಿವಾಹಿತರು ತಮ್ಮ ಮದುವೆಯನ್ನು ನೋಂದಾಯಿಸಿಕೊಳ್ಳಬಹುದು, ವಿವಾಹಪೂರ್ವ ಆರೋಗ್ಯ ತಪಾಸಣೆಗೆ ಒಳಗಾಗಬಹುದು. ಜೊತೆಗೆ ಗರ್ಭಧಾರಣೆಯ ಪೂರ್ವ ಸಮಾಲೋಚನೆಯನ್ನು ಕೂಡಾ ಪಡೆಯಬಹುದು.
ಬ್ಯಾಂಕ್‌ನಲ್ಲೂ ವಿವಾಹ ನೋಂದಣಿ:
ಇನ್ನೊಂದು ವರದಿಯ ಪ್ರಕಾರ, ಕಳೆದ ತಿಂಗಳು ಟಿಯಾಂಜಿನ್‌ನಲ್ಲಿರುವ ಚೀನಾದ ಅಂಚೆ ಉಳಿತಾಯ ಬ್ಯಾಂಕಿನ ಶಾಖೆಯಲ್ಲಿ ಕೂಡಾ ವಿವಾಹ ನೋಂದಣಿ ಸೇವೆಗಳನ್ನು ಒದಗಿಸಲಾಗುತ್ತಿದೆ.ಈ ಸೇವೆಯನ್ನು ಒದಗಿಸುವ ದೇಶದ ಮೊದಲ ಬ್ಯಾಂಕ್ ಇದಾಗಿದೆ.
ಈ ಜಾಗದಲ್ಲಿ ಇನ್ನು ಮುಂದೆ ವಿವಾಗ ಆಗಬಹುದು:
ಇನ್ನು ಗುವಾಂಗ್‌ಝೌ ಬೈಯುನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುಂದರವಾದ ವಿಮಾನ ವೀಕ್ಷಣೆ ಸೌಲಭ್ಯಗಳೊಂದಿಗೆ ವಿವಾಹ ಪ್ರಮಾಣಪತ್ರಗಳನ್ನು ಕೂಡಾ ನೀಡುತ್ತಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಾಂಘೈನಲ್ಲಿರುವ ಒಂದು ನೈಟ್‌ಕ್ಲಬ್ ಸ್ಥಳೀಯ ನಾಗರಿಕ ವ್ಯವಹಾರಗಳ ಅಧಿಕಾರಿಗಳೊಂದಿಗೆ ಸೇರಿ ಎಲೆಕ್ಟ್ರಾನಿಕ್ ಸಂಗೀತ ಉತ್ಸವ ಕೊಡುಗೆಗಳೊಂದಿಗೆ ನೋಂದಣೀ ಸಮಾರಂಭಗಳನ್ನು ಆಯೋಜಿಸಿದೆ. ಈಗ ಜೋಡಿಗಳು ಮೆಟ್ರೋ ನಿಲ್ದಾಣಗಳು, ಸಾರ್ವಜನಿಕ ಉದ್ಯಾನವನಗಳು ಮತ್ತು ಐತಿಹಾಸಿಕ ದೇವಾಲಯಗಳಲ್ಲಿಯೂ ವಿವಾಹವಾಗಬಹುದು.
ಜನನ ಪ್ರಮಾಣ ಹೆಚ್ಚಿಸುವುದೇ ಗುರಿ:
ದೇಶದಲ್ಲಿ ಎದುರಾಗಿರುವ ಗಂಭೀರ ಜನಸಂಖ್ಯಾ ಬಿಕ್ಕಟ್ಟಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಇಂತಹ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಜನನ ಪ್ರಮಾಣ ಕಡಿಮೆಯಾಗುತ್ತಲೇ ಇದೆ. ಹಾಗಾಗಿ ಚೀನಾದ ಅಧಿಕಾರಿಗಳು ಯುವಜನರು ಕುಟುಂಬಗಳನ್ನು ರೂಪಿಸಲು ಪ್ರೋತ್ಸಾಹಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.
ದಾಖಲೆಗಳ ಪ್ರಕಾರ, ಕಳೆದ ವರ್ಷದ ಕೊನೆಯಲ್ಲಿ ವಿವಾಹ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡುಬಂದಿತ್ತು. ಆದರೆ ಇತ್ತೀಚಿನ ಡೇಟಾ ಪ್ರಕಾರ ಈ ವರ್ಷದ ಮೊದಲಾರ್ಧದಲ್ಲಿ ವಿವಾಹ ನೋಂದಣಿಗಳು (Marriage Registration in China) ಇನ್ನೂ 7.5% ರಷ್ಟು ಕಡಿಮೆಯಾಗಿದೆ ಎನ್ನುವುದನ್ನು ತೋರಿಸುತ್ತದೆ.ಈ ವಿಷಯ ಸಾಮಾಜಿಕ ಮಾಧ್ಯಮದಲ್ಲಿಯೂ ಚರ್ಚೆಯ ವಿಷಯವಾಗಿದೆ. ಇದೀಗ ಜನರು ಚೀನಾ ಸರ್ಕಾರದ ಈ ಪ್ರಯತ್ನದ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, ಜನರು ನೋಂದಾಯಿಸಲು ಸ್ಥಳ ಸಿಗದ ಕಾರಣ ಮದುವೆಯಾಗುವುದಿಲ್ಲವೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಮತ್ತೊಬ್ಬರು ಮೌಂಟ್ ಎವರೆಸ್ಟ್ ಶಿಖರದಲ್ಲಿ ವಿಚ್ಛೇದನ ಸೇವೆಗಳನ್ನು ಸ್ಥಾಪಿಸುವಂತೆ ಸಲಹೆ ನೀಡಿದ್ದಾರೆ.


Click it and Unblock the Notifications
