Manipur violence: ಮಣಿಪುರ ಹಿಂಸಾಚಾರ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ
ಲಂಡನ್, ಜುಲೈ 28: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಲಂಡನ್‌ನಲ್ಲಿ ಪ್ರತಿಭಟನೆ ನಡೆದಿದೆ. ಯುಕೆಯಲ್ಲಿರುವ ಭಾರತ ಮೂಲದ ಮಹಿಳೆಯರ ಗುಂಪೊಂದು ಮೌನ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ದಿ ವುಮನ್ ಆಫ್ ನಾರ್ತ್ ಈಸ್ಟ್ ಇಂಡಿಯಾ ಸಪೋರ್ಟ್ ನೆಟ್‌ವರ್ಕ್ (WNESN) ಎಂಬ ಮಹಿಳೆಯರ ಗುಂಪು ಈ ಮೌನ ಪ್ರತಿಭಟನೆಯನ್ನು ಆಯೋಜಿಸಿತ್ತು. ಮುಖವಾಡಗಳನ್ನು ಧರಿಸಿದ ಪುರುಷರು ಮತ್ತು ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಹೊರಗೆ ಫಲಕಗಳನ್ನು ಹಿಡಿದುಕೊಂಡು ನಿಂತಿರುವುದು ಕಂಡುಬಂದಿತು.

ಬುಧವಾರ ಸಂಜೆ ಸಂಸತ್ತಿನ ಸಂಕೀರ್ಣದ ಎದುರಿಗೆ ಇರುವ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ನೆರೆಯಿತು. ಅಲ್ಲಿಂದ ತಮ್ಮ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಹಾತ್ಮ ಗಾಂಧಿ ಪ್ರತಿಮೆ ಇರುವ ಸ್ಥಳದಿಂದ ಸಂಸತ್ತಿನ ಚೌಕದ ಕಡೆಗೆ ಮೆರವಣಿಗೆ ಸಾಗಿತು.
'ಮಣಿಪುರದ ನಮ್ಮ ಇಬ್ಬರು ಕುಕಿ-ಜೋ ಸಹೋದರಿಯರನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಲಾಗಿದೆ. ಆ ನಂತರ ಅವರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದೆ. ಅವರ ನೋವು ಮತ್ತು ದುಃಖವನ್ನು ಹಂಚಿಕೊಳ್ಳಲು ನಾವು ಒಗ್ಗಟ್ಟಿನಿಂದ ಮೆರವಣಿಗೆ ನಡೆಸಿದ್ದೇವೆ' ಎಂದು WNESN ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ವಾರ ಮಣಿಪುರದಿಂದ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೊ ಜಗತ್ತಿನಾದ್ಯಂತ ವೈರಲ್ ಆಗಿದೆ. ಇದು ದೇಶಾದ್ಯಂತ ಆಘಾತ ಮತ್ತು ಆಕ್ರೋಶವನ್ನು ಹುಟ್ಟುಹಾಕಿದೆ.
ಇಬ್ಬರು ಮಣಿಪುರಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲಿದೆ. ಜನಾಂಗೀಯ ಹಿಂಸಾಚಾರದಲ್ಲಿ ತೊಡಗಿರುವ ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ. ಈ ಕುರಿತು ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಈ ಕುರಿತು ಸಂಸತ್ತಿನಲ್ಲಿ ಚರ್ಚೆ ಆಗಬೇಕೆಂದು ಹೇಳುತ್ತಿವೆ. ಪ್ರಧಾನಿ ಮೋದಿ ವಿರುದ್ಧ ಅವಿಶ್ವಾಸ ನಿರ್ಣಯವನ್ನೂ ಮಂಡಿಸಲು ವಿರೋಧ ಪಕ್ಷಗಳು ಮುಂದಾಗಿವೆ.
ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಸಂಘರ್ಷಗಳು ಭುಗಿಲೆದ್ದಿವೆ. ಈ ವರೆಗೆ ಸುಮಾರು 160 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿವೆ. ಏಳಕ್ಕೂ ಹೆಚ್ಚು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ವರದಿಯಾಗಿದೆ. ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ರಾಜೀನಾಮೆ ವಿರೋಧ ಪಕ್ಷಗಳು ಒತ್ತಾಯಿಸಿವೆ.












Click it and Unblock the Notifications