2,000 ವರ್ಷ ಬಳಿಕ ಸಮುದ್ರದಾಳದಿಂದ ಎದ್ದ ನಗರ! ಹೊರ ಬಂತು ರಾಶಿ ರಾಶಿ ಚಿನ್ನ, ಬೆಳ್ಳಿಯ ಖಜಾನೆ!
ಮೊಹಂಜೊದಾರೊ, ಹರಪ್ಪ ಮೊದಲಾದ ನಗರಗಳು ಉತ್ಖನನದ ಮೂಲಕ ಹೊರಬಂದುದನ್ನು ನೀವು ಕಂಡಿದ್ದೀರಿ. ಶ್ರೀಕೃಷ್ಣನ ಕಾಲದ ದ್ವಾರಕೆ ನಗರ ಸಮುದ್ರದ ಆಳದಲ್ಲಿ ಮುಳುಗಿರುವುದನ್ನೂ ಕೇಳಿದ್ದೀರಿ. ಹಾಗೇ ಈಜಿಪ್ಟ್‌ನಲ್ಲೂ ಸಮುದ್ರದ ಆಳದಲ್ಲಿ ಮುಳುಗಿದ ಒಂದು ಮಹಾನಗರ, ಇದೀಗ ರಾಶಿ ರಾಶಿ ಚಿನ್ನ ಬೆಳ್ಳಿಯ ಖಜಾನೆಗಳು, ಪ್ರಾಚೀನ ದೇವಾಲಯಗಳೊಂದಿಗೆ ಮೇಲೆದ್ದು ಬರುತ್ತಿದೆ.
ಈಜಿಪ್ಟ್‌ನ ಆಧುನಿಕ ಕರಾವಳಿಯಿಂದ ಸುಮಾರು 7 ಕಿಲೋಮೀಟರ್ ದೂರದಲ್ಲಿರುವ ಅಬೂಕಿರ್ ಕೊಲ್ಲಿಯ ಆಳವಿಲ್ಲದ ಸಮುದ್ರ ನೀರಿನ ಕೆಳಗೆ ಸುಮಾರು 2,000 ವರ್ಷಗಳ ಕಾಲ ಈ ನಗರ ಮೌನವಾಗಿ ಮಲಗಿತ್ತು. ಒಮ್ಮೆ ಈಜಿಪ್ಟ್‌ನ ಅತ್ಯಂತ ಪ್ರಮುಖ ಬಂದರು ನಗರವಾಗಿದ್ದ ಈ ನಗರವನ್ನು ʼಥೋನಿಸ್-ಹೆರಾಕ್ಲಿಯನ್ʼ (Thonis-Heracleion) ಎಂದು ಕರೆಯಲಾಗುತ್ತಿತ್ತು.

ಅಲೆಕ್ಸಾಂಡ್ರಿಯಾ ನಗರ ನಿರ್ಮಾಣವಾಗುವ ಮೊದಲೇ, ವಿದೇಶಗಳಿಂದ ಈಜಿಪ್ಟ್‌ಗೆ ಬರುವ ವ್ಯಾಪಾರಿಗಳು, ಯಾತ್ರಿಕರು ಮತ್ತು ಸೈನಿಕರು ಪ್ರವೇಶಿಸಬೇಕಾದ ಪ್ರಮುಖ ದ್ವಾರವೇ ಈ ನಗರವಾಗಿತ್ತು. ಆದರೆ ಭೂಕಂಪಗಳು, ಸಮುದ್ರ ಮಟ್ಟದ ಏರಿಕೆ ಮತ್ತು ಸುನಾಮಿಗಳಂತಹ ಪ್ರಕೃತಿ ವಿಕೋಪಗಳ ಪರಿಣಾಮವಾಗಿ ಕ್ರಿ.ಪೂ. ಎರಡನೇ ಶತಮಾನದ ವೇಳೆಗೆ ಈ ನಗರ ಸಂಪೂರ್ಣವಾಗಿ ಸಮುದ್ರದಾಳಕ್ಕೆ ಮುಳುಗಿಹೋಯಿತು.
2000ನೇ ವರ್ಷದಲ್ಲಿ ಫ್ರೆಂಚ್ ಸಮುದ್ರ ಪುರಾತತ್ವ ತಜ್ಞ ಫ್ರಾಂಕ್ ಗೊಡ್ಡಿಯೊ ಮತ್ತು ಅವರ ತಂಡ ಈ ನಗರವನ್ನು ಮರುಶೋಧಿಸಿದರು. ಇದೀಗ 2023ರಲ್ಲಿ ನಡೆದ ಹೊಸ ಉತ್ಖನನದಲ್ಲಿ ಅಚ್ಚರಿಯ ಖಜಾನೆಗಳು ಬೆಳಕಿಗೆ ಬಂದಿವೆ.
ಪ್ರಾಚೀನ ಈಜಿಪ್ಟ್‌ನ ಜೀವನಾಡಿ
ಸುಮಾರು 2,500 ವರ್ಷಗಳ ಹಿಂದೆ ನೈಲ್ ನದಿಯ ಮುಖಭಾಗದ ಬಳಿ ನಿರ್ಮಾಣವಾದ ಥೋನಿಸ್-ಹೆರಾಕ್ಲಿಯನ್ ಪ್ರಾಚೀನ ಜಗತ್ತಿನ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿತ್ತು.
ಗ್ರೀಸ್‌ನಿಂದ ಬರುವ ಹಡಗುಗಳು ಆಲಿವ್ ಎಣ್ಣೆ, ವೈನ್, ಬೆಳ್ಳಿ ಮತ್ತು ಮಣ್ಣಿನ ಪಾತ್ರೆಗಳನ್ನು ಈಜಿಪ್ಟ್‌ಗೆ ತರುತ್ತಿದ್ದವು. ಅದೇ ರೀತಿ ಈಜಿಪ್ಟ್‌ನ ಉತ್ಪನ್ನಗಳು ವಿದೇಶಗಳಿಗೆ ರಫ್ತಾಗುವುದೂ ಇಲ್ಲಿಂದಲೇ. ಹೀಗಾಗಿ ಈ ನಗರವು ಈಜಿಪ್ಟ್ ಮತ್ತು ಮೆಡಿಟರೇನಿಯನ್ ಜಗತ್ತಿನ ನಡುವಿನ ಸೇತುವೆಯಾಗಿತ್ತು. ಇಲ್ಲಿಯವರೆಗೆ ನಡೆದ ಉತ್ಖನನಗಳಲ್ಲಿ 64 ಹಡಗುಗಳ ಅವಶೇಷಗಳು, 700 ಲಂಗರುಗಳು, ಚಿನ್ನದ ನಾಣ್ಯಗಳು ಮತ್ತು ಐದು ಮೀಟರ್ ಎತ್ತರದ ಬೃಹತ್ ಪ್ರತಿಮೆಗಳು ಪತ್ತೆಯಾಗಿವೆ.

ದೇವಾಲಯದ ಕೆಳಗೆ ಸಿಕ್ಕ ಅಮೂಲ್ಯ ಖಜಾನೆ
2023ರ ಉತ್ಖನನದಲ್ಲಿ ಅತ್ಯಂತ ಮಹತ್ವದ ಆವಿಷ್ಕಾರವೆಂದರೆ ʼಅಮುನ್ ದೇವಾಲಯದ ಖಜಾನೆʼ. ಪ್ರಾಚೀನ ಈಜಿಪ್ಟ್‌ನಲ್ಲಿ ಅಮುನ್ ದೇವರನ್ನು ಪರಮ ದೇವರೆಂದು ಪರಿಗಣಿಸಲಾಗುತ್ತಿತ್ತು. ಫರೋ ರಾಜರು ತಮ್ಮ ಆಡಳಿತಕ್ಕೆ ದೈವಿಕ ಮಾನ್ಯತೆ ಪಡೆಯಲು ಈ ದೇವಾಲಯಕ್ಕೆ ಬರುತ್ತಿದ್ದರು. ಹೀಗಾಗಿ ಇದು ಕೇವಲ ಧಾರ್ಮಿಕ ಕೇಂದ್ರವಲ್ಲ, ರಾಜಕೀಯವಾಗಿಯೂ ಅತ್ಯಂತ ಮಹತ್ವದ್ದಾಗಿತ್ತು.
ದೇವಾಲಯ ಕುಸಿದಾಗ ಅದರ ಬೃಹತ್ ಕಲ್ಲುಗಳ ಕೆಳಗೆ ಹೂತುಹೋಗಿದ್ದ ಅನೇಕ ಅಮೂಲ್ಯ ವಸ್ತುಗಳು ಈಗ ಪತ್ತೆಯಾಗಿವೆ. ಅವುಗಳಲ್ಲಿ ಚಿನ್ನದ ಆಭರಣಗಳು, ಬೆಳ್ಳಿಯ ಧಾರ್ಮಿಕ ಉಪಕರಣಗಳು, ಸುಗಂಧ ದ್ರವ್ಯಗಳನ್ನು ಇಡಲು ಬಳಸುತ್ತಿದ್ದ ಅಲಬಾಸ್ಟರ್ ಪಾತ್ರೆಗಳು, ಲ್ಯಾಪಿಸ್ ಲಾಜುಲಿ ಕಲ್ಲಿನಿಂದ ನಿರ್ಮಿಸಲಾದ "ಡ್ಜೆಡ್" ಕಂಬ, ಇವೆಲ್ಲ ಇದೆ. ಇವೆಲ್ಲವೂ ಸುಮಾರು 2,500 ವರ್ಷಗಳಷ್ಟು ಹಳೆಯವು ಎಂದು ತಜ್ಞರು ಹೇಳುತ್ತಾರೆ.
ಬೆಳ್ಳಿ ಚಿನ್ನಕ್ಕಿಂತ ಅಮೂಲ್ಯವಾಗಿದ್ದ ಕಾಲ!
ಇಂದು ಚಿನ್ನಕ್ಕೆ ಹೆಚ್ಚು ಬೆಲೆ ಇದೆ. ಆದರೆ ಪ್ರಾಚೀನ ಈಜಿಪ್ಟ್‌ನಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಅಲ್ಲಿ ಬೆಳ್ಳಿ ಬಹಳ ಅಪರೂಪವಾಗಿದ್ದ ಕಾರಣ, ಅನೇಕ ಸಂದರ್ಭಗಳಲ್ಲಿ ಚಿನ್ನಕ್ಕಿಂತಲೂ ಹೆಚ್ಚು ಮೌಲ್ಯ ಹೊಂದಿತ್ತು. ದೇವಾಲಯದಲ್ಲಿ ಪತ್ತೆಯಾದ ಬೆಳ್ಳಿಯ ಪಾತ್ರೆಗಳು ಮತ್ತು ಧಾರ್ಮಿಕ ಉಪಕರಣಗಳು ಆ ದೇವಾಲಯದ ಶ್ರೀಮಂತಿಕೆ ಹಾಗೂ ಮಹತ್ವವನ್ನು ಸ್ಪಷ್ಟಪಡಿಸುತ್ತವೆ.

ಮರದ ರಹಸ್ಯ ಕಟ್ಟಡಗಳು
ಪುರಾತತ್ವ ತಜ್ಞರಿಗೆ ಮತ್ತೊಂದು ಅಚ್ಚರಿ ಕಾದಿತ್ತು. ದೇವಾಲಯದ ಕೆಳಭಾಗದಲ್ಲಿ 5ನೇ ಶತಮಾನದ ಕ್ರಿ.ಪೂ. ಕಾಲಕ್ಕೆ ಸೇರಿದ ಮರದ ಕಂಬಗಳು ಮತ್ತು ಮರದ ರಚನೆಗಳು ಪತ್ತೆಯಾಗಿವೆ. ಸಾಮಾನ್ಯವಾಗಿ ನೀರಿನಲ್ಲಿ ಮರ ಬೇಗ ಕೊಳೆಯುತ್ತದೆ. ಆದರೆ ಈ ನಗರವನ್ನು ಮುಚ್ಚಿದ್ದ ದಪ್ಪ ಜೇಡಿಮಣ್ಣು ಆ ಮರಗಳನ್ನು ಸಾವಿರಾರು ವರ್ಷಗಳ ಕಾಲ ಸುರಕ್ಷಿತವಾಗಿ ಕಾಪಾಡಿದೆ. ಇವು ದೇವಾಲಯ ನಿರ್ಮಾಣವಾಗುವುದಕ್ಕೂ ಮುಂಚೆ ಅಲ್ಲಿ ಬೇರೆ ಕಟ್ಟಡಗಳು ಅಥವಾ ವಸತಿಗಳು ಇದ್ದಿರಬಹುದೆಂಬ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಗ್ರೀಕ್ ದೇವಿಯ ದೇವಾಲಯ!
ಅಮುನ್ ದೇವಾಲಯದ ಪೂರ್ವಭಾಗದಲ್ಲಿ ಸಂಶೋಧಕರು ಗ್ರೀಕ್ ದೇವತೆ "ಅಫ್ರೋಡೈಟಿʼಗೆ ಸಮರ್ಪಿತವಾದ ದೇವಾಲಯವನ್ನೂ ಪತ್ತೆಹಚ್ಚಿದ್ದಾರೆ. ಅಲ್ಲಿ ಗ್ರೀಸ್‌ನಿಂದ ಆಮದು ಮಾಡಲಾಗಿದ್ದ ಕಂಚಿನ ವಸ್ತುಗಳು ಮತ್ತು ಮಣ್ಣಿನ ಪಾತ್ರೆಗಳು ದೊರೆತಿವೆ. ಇದರಿಂದ ಥೋನಿಸ್-ಹೆರಾಕ್ಲಿಯನ್ ಕೇವಲ ಈಜಿಪ್ಟಿನ ನಗರವಲ್ಲ, ಅನೇಕ ಸಂಸ್ಕೃತಿಗಳು ಬೆರೆತ ಬಹುರಾಷ್ಟ್ರೀಯ ನಗರವಾಗಿತ್ತು ಎಂಬುದು ತಿಳಿದುಬರುತ್ತದೆ. ಒಂದು ಬಾತುಕೋಳಿಯ ಆಕಾರದ ಕಂಚಿನ ಪಾತ್ರೆ, ಸೈಪ್ರಸ್‌ನಿಂದ ಬಂದಿರಬಹುದಾದ ಕಾಣಿಕೆ ವಸ್ತುಗಳು ಹಾಗೂ ಧಾರ್ಮಿಕ ಅರ್ಪಣೆಗಳೂ ಅಲ್ಲಿ ಪತ್ತೆಯಾಗಿವೆ.
ಉತ್ಖನನದಲ್ಲಿ ಸಿಕ್ಕಿರುವ ಅನೇಕ ಗ್ರೀಕ್ ಆಯುಧಗಳು ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿವೆ. ಸುಮಾರು 2,600 ವರ್ಷಗಳ ಹಿಂದೆ ಈಜಿಪ್ಟ್‌ನ ಫರೋ ರಾಜರು ಗ್ರೀಕ್ ಭಾಡಿಗೆ ಸೈನಿಕರನ್ನು ನೇಮಿಸಿಕೊಳ್ಳುತ್ತಿದ್ದರು. ಅವರು ನೈಲ್ ನದಿಯ ಪ್ರವೇಶದ್ವಾರವನ್ನು ರಕ್ಷಿಸುತ್ತಿದ್ದರು. ಈಗ ದೊರೆತಿರುವ ಆಯುಧಗಳು ಈ ಐತಿಹಾಸಿಕ ಮಾಹಿತಿಗೆ ಭೌತಿಕ ಸಾಕ್ಷ್ಯ ಒದಗಿಸಿವೆ.

ಆಧುನಿಕ ತಂತ್ರಜ್ಞಾನದಿಂದ ಪತ್ತೆ
ಈ ಹೊಸ ಖಜಾನೆಗಳ ಪತ್ತೆಗೆ ಅತ್ಯಾಧುನಿಕ ಭೂಭೌತಿಕ ತಂತ್ರಜ್ಞಾನಗಳು ಕಾರಣವಾಗಿವೆ. ದಪ್ಪ ಜೇಡಿಮಣ್ಣಿನ ಕೆಳಗೆ ಅಡಗಿರುವ ಕೋಣೆಗಳು, ಲೋಹದ ವಸ್ತುಗಳು ಮತ್ತು ಸಾವಯವ ಅವಶೇಷಗಳನ್ನು ಗುರುತಿಸುವ ವಿಶೇಷ ಸಾಧನಗಳನ್ನು ಬಳಸಲಾಗಿದೆ. ಇದರಿಂದ ಸಮುದ್ರದಾಳದಲ್ಲಿ ಹೂತುಹೋಗಿರುವ ರಹಸ್ಯಗಳನ್ನು ಹೆಚ್ಚು ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗಿದೆ.
ಥೋನಿಸ್-ಹೆರಾಕ್ಲಿಯನ್ ನಿಧಾನವಾಗಿ ಅಳಿದುಹೋಗಿದ್ದಲ್ಲ. ಅದು ಒಂದು ಭೀಕರ ಪ್ರಕೃತಿ ವಿಕೋಪದಲ್ಲಿ ಕ್ಷಣಾರ್ಧದಲ್ಲಿ ಸಮುದ್ರದಾಳಕ್ಕೆ ಹೂತುಹೋಯಿತು. ಆದರೆ ಅದೇ ವಿಕೋಪ ಈ ನಗರದ ಖಜಾನೆಗಳನ್ನು ಮತ್ತು ಇತಿಹಾಸವನ್ನು ಸಾವಿರಾರು ವರ್ಷಗಳ ಕಾಲ ಸಂರಕ್ಷಿಸಿತು.
ಇಂದು ಸಮುದ್ರದಾಳದಿಂದ ಹೊರಬರುತ್ತಿರುವ ಪ್ರತಿಯೊಂದು ವಸ್ತುವೂ ಒಂದೊಂದು ಕಥೆ ಹೇಳುತ್ತಿದೆ. ಈಜಿಪ್ಟಿನ ಅರ್ಚಕರು, ಗ್ರೀಕ್ ವ್ಯಾಪಾರಿಗಳು, ಸೈನಿಕರು, ದೇವಾಲಯಗಳು ಮತ್ತು ಒಂದು ಕಾಲದಲ್ಲಿ ಪ್ರಪಂಚದ ವ್ಯಾಪಾರದ ಹೃದಯವಾಗಿದ್ದ ನಗರದ ಕಥೆ. ಒಮ್ಮೆ ಎಲ್ಲವನ್ನೂ ನುಂಗಿದ್ದ ಸಮುದ್ರವೇ, ಈಗ ನಿಧಾನವಾಗಿ ಆ ಮರೆತುಹೋದ ನಾಗರಿಕತೆಯನ್ನು ಮತ್ತೆ ಜಗತ್ತಿನ ಮುಂದೆ ತರುತ್ತಿದೆ.
ಬರಹ: ಭವಾನಿ ಭಟ್














Click it and Unblock the Notifications