
ಲಂಡನ್: ರಾತ್ರೋ ರಾತ್ರಿ ಕೋಟ್ಯಧಿಪತಿಯಾದ ದಂಪತಿ: ಮನೆಯಲ್ಲಿ ನಿಧಿ ಪತ್ತೆ
ಲಂಡನ್, ಅಕ್ಟೋಬರ್ 10: ಆತ ದಿನದ ದುಡಿಮೆಗೋಸ್ಕರ ಕೂಲಿ ಮಾಡುತ್ತಿದ್ದ ಕಾರ್ಮಿಕ. ಕನಸಿನಲ್ಲೂ ಇಷ್ಟು ದುಡ್ಡು ನೋಡುತ್ತೇನೆಂದು ಆತ ಅಂದುಕೊಂಡಿರಲಿಲ್ಲ. ಪೂರ್ವ ಜನ್ಮದ ಪುಣ್ಯವೋ ಆದೇವರ ಆಶೀರ್ವಾದವೋ ಗೊತ್ತಿಲ್ಲ. ಮೂರು ತಲೆ ಮಾರಿನಷ್ಟು ಕುಳಿತು ತಿಂದರೂ ಕರಗದಷ್ಟು ಚಿನ್ನ ಆತನಿಗೆ ಸಿಕ್ಕಿದೆ. ಅಷ್ಟಕ್ಕೂ ಆ ಚಿನ್ನ ಕಾರ್ಮಿಕನಿಗೆ ಸಿಕ್ಕಿದ್ದು ಎಲ್ಲಿ? ಎಷ್ಟು? ಎಲ್ಲಾ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಮನೆ ಕೆಡವುವ ಕೆಲಸ ಮಾಡುತ್ತಿದ್ದಾಗ ಅಡುಗೆ ಕೋಣೆಯಲ್ಲಿ ನೆಲದಡಿಯಲ್ಲಿ ಚಿನ್ನದ ನಾಣ್ಯಗಳ ಅಗಾಧ ನಿಧಿಯೊಂದು ಸಿಕ್ಕಿದೆ. ಇದನ್ನು ಕಂಡು ಪತಿ-ಪತ್ನಿ ಇಬ್ಬರು ಬೆರಗಾಗಿದ್ದಾರೆ. ಈ ನಾಣ್ಯಗಳು ಕೋಟಿಗಟ್ಟಲೆ ಬೆಲೆ ಬಾಳುತ್ತಿದ್ದು ದಂಪತಿಗಳು ಸಂತೋಷಪಟ್ಟಿದ್ದಾರೆ. ಈ ನಾಣ್ಯವನ್ನು ದಂಪತಿಗಳು ಹರಾಜು ಹಾಕಲು ಯೋಜಿಸಿದ್ದಾರೆ.
ಲಂಡನ್ ಹೋಟೆಲ್ ರೂಮಲ್ಲಿ ಹಣ, ಒಡವೆ ಕಳೆದುಕೊಂಡ ಭಾರತೀಯ ಕ್ರಿಕೆಟರ್
'ದಿ ಸನ್' ಸುದ್ದಿ ಪ್ರಕಾರ, ಈ ಘಟನೆ ಯುಕೆ ಯ ಉತ್ತರ ಯಾರ್ಕ್‌ಷೈರ್‌ನ ಎಲ್ಲರ್ಬಿಯ ಹಳ್ಳಿಯಲ್ಲಿ ನಡೆದಿದೆ. ಗಂಡ ಮತ್ತು ಹೆಂಡತಿ ಈ ಹಳೆಯ ತಮ್ಮ ಮನೆಯಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ವಾಸಿಸುತ್ತಿದ್ದರು. ಸುಮಾರು ಮೂರು ವರ್ಷಗಳ ಹಿಂದೆ ಮನೆ ಕೆಡವುವ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಅಡುಗೆ ಕೋಣೆಯಲ್ಲಿ ಗಂಡನ ಕಾಲಿಗೆ ತಂತಿಯಂತಹ ವಸ್ತುವಿಗೆ ತಗುಲಿದೆ. ವಿದ್ಯುತ್ ತಂತಿ ಇರಬಹುದೆಂದು ಇಬ್ಬರೂ ಮೊದಲು ಭಾವಿಸಿದ್ದರು. ಆದರೆ ಇಬ್ಬರೂ ಸುಮಾರು 6 ಇಂಚುಗಳಷ್ಟು ನೆಲವನ್ನು ಅಗೆದು ತಂತಿಯನ್ನು ತೆಗೆದಾಗ ಆಶ್ಚರ್ಯಗೊಂಡಿದ್ದಾರೆ.

ಕೋಟ್ಯಾಧಿಪತಿಯಾದ ದಂಪತಿ
ದಂಪತಿಗಳೆ ತಾವು ಊಹಿಸದ ನಾಣ್ಯಗಳು ನೆಲದಡಿ ಸಿಕ್ಕಿವೆ. ಇದನ್ನು ಕಂಡು ದಂಪತಿ ಒಂದು ಕ್ಷಣ ಮಾತಬಾರದಂತಾಗಿದ್ದಾರೆ. ಮೌನವಾಗಿ ಅನುಮಾನದಿಂದ ತಮ್ಮನ್ನು ತಾವು ಇದು ನಿಜವೇ ಎಂದು ಪ್ರಶ್ನೆ ಮಾಡಿಕೊಳ್ಳುತ್ತಾ ನಾಣ್ಯಗಳನ್ನು ಹೊರತೆಗೆದಿದ್ದಾರೆ. ಆದರೆ ಇದು ನಿಜವಾಗಿಯೋ ಚಿನ್ನದ್ದೇ? ಎನ್ನುವ ಪ್ರಶ್ನೆ ಅವರಿಬ್ಬರಲ್ಲಿತ್ತು. ಬಳಿಕ ಅವರು ಆ ನಾಣ್ಯಗಳನ್ನು ತಗೆದು ಎಣಿಸಲು ಆರಂಭಿಸಿದರು. ಅದನ್ನು ಪರೀಕ್ಷೆ ನೀಡಲು ನಿರ್ಧರಿಸಿದರು.

1610 ರಿಂದ 1727 ರವರೆಗಿನ ಕಾಲದ ನಾಣ್ಯಗಳು
ಅಡುಗೆ ಮನೆಯಲ್ಲಿ ನೆಲ ಅಗೆದು ನೋಡಿದಾಗ ಇಬ್ಬರಿಗೂ ಸಿಕ್ಕಿದ್ದು ತಂಪು ಪಾನೀಯದ ಡಬ್ಬಿಯ ಗಾತ್ರದ ದೊಡ್ಡ ಬಟ್ಟಲು. ಅದರಲ್ಲಿ ನಾಣ್ಯ ತುಂಬಿತ್ತು. ಬಟ್ಟಲನ್ನು ತೆಗೆದು ಗಂಡ-ಹೆಂಡತಿ ಇಬ್ಬರು ನಾಣ್ಯಗಳನ್ನು ಎಣಿಸಿದಾಗ 264 ನಾಣ್ಯಗಳು ಕಾಣಿಸಿಕೊಂಡಿವೆ. ಎಲ್ಲಾ ನಾಣ್ಯಗಳು 1610 ರಿಂದ 1727 ರವರೆಗಿನವು ಮತ್ತು ಜೇಮ್ಸ್ I, ಚಾರ್ಲ್ಸ್ I ಮತ್ತು ಜಾರ್ಜ್ I ರ ಆಳ್ವಿಕೆಯ ಮುದ್ರೆಗಳನ್ನು ಹೊಂದಿವೆ.

ಲಂಡನ್ ಮೂಲದ ಹರಾಜು ಕಂಪನಿ
ನಾಣ್ಯಗಳನ್ನು ಪಡೆದ ನಂತರ, ಪತಿ ಮತ್ತು ಪತ್ನಿ ಲಂಡನ್ ಮೂಲದ ಹರಾಜು ಕಂಪನಿ ಸ್ಪಿಂಕ್ ಮತ್ತು ಸನ್ ಅನ್ನು ಸಂಪರ್ಕಿಸಿದರು. ಕಂಪನಿಯ ಅಧಿಕಾರಿಯೊಬ್ಬರು ನಾಣ್ಯಗಳ ಮೌಲ್ಯವನ್ನು ಪರಿಶೀಲಿಸಲು ಅವರ ಮನೆಗೆ ಬಂದರು. ಈ 264 ನಾಣ್ಯಗಳ ಒಟ್ಟು ಮೌಲ್ಯ 754,000 ಪೌಂಡ್ (ಸುಮಾರು 7 ಕೋಟಿ ರೂಪಾಯಿ) ಎಂದು ಕಂಪನಿಯ ಅಧಿಕಾರಿ ತನಿಖೆಯ ನಂತರ ತಿಳಿಸಿದ್ದಾರೆ. ಬೆಲೆ ತಿಳಿದ ನಂತರ ಗಂಡ ಹೆಂಡತಿಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ.

ಸಂತಸಗೊಂಡ ದಂಪತಿ
ಸಂತೋಷದಿಂದ ದಂಪತಿ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಸದ್ಯ ಈ ಸುದ್ದಿ ವಿಶ್ವದಾದ್ಯಂತ ಹರಿದಾಡುತ್ತಿದೆ. ಮೂರು ವರ್ಷದ ಹಿಂದೆ ಸಿಕ್ಕ ನಾಣ್ಯಗಳನ್ನು ದಂಪತಿ ಹರಾಜಿಗಿಡಲು ತೀರ್ಮಾನಿಸಿದ್ದಾರೆ. ಇದಾದ ಬಳಿಕ ಇದೀಗ ಈ ನಾಣ್ಯಗಳನ್ನು ಪತಿ ಪತ್ನಿ ಹರಾಜಿನಲ್ಲಿ ಮಾರಾಟ ಮಾಡಿದ್ದಾರೆ. ಕಾರ್ಮಿಕನ ಜೀವನವೇ ಬದಲಾಗಿ ಹೋಗಿದೆ. ಹೀಗೆ ಅದೃಷ್ಟ ಒಂದಿದ್ದರೆ ಯಾರ ಜೀವನ ಹೇಗೆ ಬೇಕಾದರೂ ಬದಲಾಗಬಹುದು.
ಇತ್ತೀಚೆಗೆ ಭಾರತದ ಹಳೆಯ ಮನೆಯೊಂದರಲ್ಲಿ ಕೆಲವು ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಕೆಲ ಕಾರ್ಮಿಕರು ಮನೆ ಕೆಡವುವ ವೇಳೆ 86 ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ನಾಣ್ಯಗಳ ಮೌಲ್ಯ 60 ಲಕ್ಷ ರೂ. ಆದಾಗ್ಯೂ, ಕಾರ್ಮಿಕರು ಚಿನ್ನದ ನಾಣ್ಯಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದ ನಂತರ ಅವರನ್ನು ಬಂಧಿಸಲಾಯಿತು.