ಪಾಕಿಸ್ತಾನದ ನಟಿ ಮೀರಾ ವಿರುದ್ಧ ಬಂಧನ ವಾರೆಂಟ್
ಲಾಹೋರ್, ಜೂ.14: ಬಾಲಿವುಡ್ ನಲ್ಲಿ ಒಂದೆರಡು ಚಿತ್ರಗಳಲ್ಲಿ ನಟಿಸಿರುವ ಪಾಕಿಸ್ತಾನದ ನಟಿ ಮೀರಾ ಅಲಿಯಾಸ್ ಇರ್ತಿಜಾ ರುಬಾಬ್ ವಿರುದ್ಧ ಇಲ್ಲಿನ ನ್ಯಾಯಲಯವೊಂದು ಬಂಧನ ವಾರೆಂಟ್ ಜಾರಿಗೊಳಿಸಿದೆ. ಮೀರಾ ವಿರುದ್ಧ ಆಕೆ ಪತಿ ಎಂದು ಹೇಳಿಕೊಂಡಿರುವ ಅತಿಕರ್ ರೆಹ್ಮಾನ್ ದೂರು ನೀಡಿದ್ದಾರೆ.
ರೆಹ್ಮಾನ್ ನೀಡಿದ್ದ ದೂರನ್ನು ಸ್ವೀಕರಿಸಿ ವಿಚಾರಣೆಗಾಗಿ ಮೀರಾಗೆ ಹಲವು ಬಾರಿ ಸಮನ್ಸ್ ಜಾರಿಗೊಳಿಸಲಾಗಿತ್ತು. ಅದರೆ, ಕೋರ್ಟಿಗೆ ನಟಿ ಮೀರಾ ಹಾಜರಾಗಿರಲಿಲ್ಲ. ಹೀಗಾಗಿ ಬಂಧನ ವಾರೆಂಟ್ ಜಾರಿಗೊಳಿಸಲಾಗಿದೆ.

ರೆಹ್ಮಾನ್ ಅವರ ಪ್ರಕಾರ ನಟಿ ಮೀರಾ ಅವರು ಮದುವೆ ಒಪ್ಪಂದಕ್ಕೆ ಒಳಪಟ್ಟಿದ್ದರೂ ಧಿಕ್ಕರಿಸಿ 2013ರಲ್ಲಿ ಕ್ಯಾಪ್ಟನ್ ನವೀದ್ ಪರ್ವೇಜ್ ಅವರನ್ನು ಮದುವೆಯಾಗಿದ್ದಾರೆ. ನಾನು ಆಕೆಗೆ 'ತಲಾಖ್' ನೀಡಿಲ್ಲ. ಮುಸ್ಲಿಂ ಮದುವೆ ನಿಯಮಗಳನ್ನು ಆಕೆ ಮೀರಿದ್ದಾರೆ ಹಾಗೂ ದೇಶದ ಕಾನೂನನ್ನು ಗೌರವಿಸಿಲ್ಲ ಎಂದು ದೂರಿದ್ದಾರೆ.
ಲಾಹೋರ್ ಕಂಟೋನ್ಮೆಂಟ್ ಜಡ್ಜ್ ಅವರು ಮೀರಾ ಅವರನ್ನು ಬಂಧಿಸಿ ಕೋರ್ಟೀಗೆ ಹಾಜರುಪಡಿಸುವಂತೆ ಆದೇಶ ನೀಡಿ, ಮುಂದಿನ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿದ್ದಾರೆ. ಅದರೆ, ತಮಗೆ ಯಾವುದೇ ನೋಟಿಸ್ ಅಥವಾ ವಾರೆಂಟ್ ಬಂದಿಲ್ಲ ಎಂದು ಮೀರಾ ಪ್ರತಿಕ್ರಿಯಿಸಿದ್ದಾರೆ.
ರೆಹ್ಮಾನ್ ಒಬ್ಬ ನಯವಂಚಕ, ಕ್ರಿಮಿನಲ್, ಆತ ನನ್ನನ್ನು ಕಳೆದ ಐದು ವರ್ಷಗಳಿಂದ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ಬಿಟ್ಟಿ ಪ್ರಚಾರಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾನೆ ಎಂದು ಮೀರಾ ಪರ ವಕೀಲ ಅಲಿ ಸಿಬ್ಟೈನ್ ಹೇಳಿದ್ದಾರೆ. ನಜರ್, ಕಸಕ್ ಎಂಬ ಹಿಂದಿ ಚಿತ್ರಗಳಲ್ಲಿ ಮೀರಾ ನಟಿಸಿದ್ದಾರೆ. (ಪಿಟಿಐ)












Click it and Unblock the Notifications