ಖಶೋಗಿ ಕೊಲೆಯಾಗಿದ್ದು ನನ್ನೆದುರಲ್ಲೇ! ಸ್ಪೋಟಕ ಸತ್ಯ ಒಪ್ಪಿಕೊಂಡ ಸೌದಿ ರಾಜ
ರಿಯಾಧ್, ಸೆಪ್ಟೆಂಬರ್ 26: ಪ್ರಖ್ಯಾತ ಪತ್ರಕರ್ತ ಜಮಲ್ ಖಶೋಗಿ ಕೊಲೆ ನನ್ನ ಕಣ್ಣೆದುರಲ್ಲೇ ನಡೆದಿತ್ತು ಎಂಬ ಸ್ಫೋಟಕ ಸತ್ಯವನ್ನು ಸೌದಿ ಅರೇಬಿಯಾದ ಯುವರಾಜ, ಮೊಹಮ್ಮದ್ ಬಿನ್ ಸಲ್ಮಾನ್ ಒಪ್ಪಿಕೊಂಡಿದ್ದಾರೆ.
"ಕಶೋಗಿ ಹತ್ಯೆಗೆ ಸಂಬಂಧಿಸಿದ ಎಲ್ಲಾ ಜವಾಬ್ದಾರಿಯನ್ನೂ ನಾನೇ ಹೊತ್ತುಕೊಳ್ಳುತ್ತೇನೆ. ಏಕೆಂದರೆ ಆ ಕೊಲೆ ನಡೆದಿದ್ದು ನನ್ನ ಕಣ್ಣೆದುರಲ್ಲೇ" ಎಂದು ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.
ಇಡಿ ಜಗತ್ತಿನ ಗಮನ ಸೆಳೆದಿದ್ದ ಜಮಲ್ ಖಶೋಗಿ ನಿಗೂಢ ನಾಪತ್ತೆ ಪ್ರಕರಣ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.

ಏನಿದು ಘಟನೆ?
ಅಕ್ಟೋಬರ್ 2ರಂದು ಟರ್ಕಿ ಮೂಲದ ಪತ್ನಿ ಹಾಟಿಸ್ ಸೆಂಗಿಜ್ ಅವರೊಂದಿಗಿನ ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಟರ್ಕಿಯ ರಾಜಧಾನಿ ಇಸ್ತಾಂಬುಲ್ ನಲ್ಲಿರುವ ಸೌದಿ ಅರೆಬಿಯಾದ ರಾಯಭಾರ ಕಚೇರಿಗೆ ತೆರಳಿದ್ದ ಖಶೋಗಿ ನಂತರ ಹೊರಬರಲೇ ಇಲ್ಲ. ಅವರು ಏನಾದರೂ? ಬದುಕಿದ್ದಾರೆಯೇ? ಕೊಲೆ ಮಾಡಲಾಗಿದೆಯೇ ಎಂಬ ಯಾವ ಸುಳಿವೂ ದೊರಕಿರಲಿಲ್ಲ.

ನಿಗೂಢ ಪ್ರಶ್ನೆಗಳು
ಖಶೋಗಿ ರಾಯಭಾರಿ ಕಚೇರಿಗೆ ಬರುವ ಮುನ್ನಾದಿನವೇ ಎರಡು ವಿಮಾನಗಳಲ್ಲಿ ಅಪರಿಚಿತ ವ್ಯಕ್ತಿಗಳು ಸೌದಿಯಿಂದ ಬಂದಿಳಿದಿದ್ದರು. ಅವರು ರಾಯಭಾರ ಕಚೇರಿಯ ಪಕ್ಕದಲ್ಲೇ ಇದ್ದ ಹೊಟೇಲ್ ನಲ್ಲಿ ತಂಗಿದ್ದರು! ಖಶೋಗಿ ರಾಯಭಾರ ಕಚೇರಿಗೆ ತೆರಳಿದ ಒಂದು ಗಂಟೆಯ ನಂತರ ಸುಮಾರು 15 ಜನರನ್ನು ಹೊತ್ತ ಆರು ಕಾರುಗಳು ರಾಯಭಾರ ಕಚೇರಿಯಿಂದ ಹೊರನಡೆದವು. ಆ ಎಲ್ಲಾ ಕಾರುಗಳೂ ಡಿಪ್ಲೊಮೆಟಿಕ್ ಲೈಸೆನ್ಸ್ ಹೊಂದಿದ್ದವು! ಅಷ್ಟಕ್ಕೂ ಆಗ ರಾಯಭಾರ ಕಚೇರಿಗೆ ಬಂದಿದ್ದು ಯಾರು? ಎಂಬುದು ಇನ್ನೂ ನಿಗೂಢ ಪ್ರಶ್ನೆಯಾಗಿದೆ.

ಪ್ರಕರಣದ ತನಿಖೆಗೆ ಸಮಿತಿ
ಈ ಪ್ರಕರಣದ ತನಿಖೆಗೆಂದು ವಿಶ್ವಸಂಸ್ಥೆಯಿಂದ ವಿಶೇಷವಾಗಿ ನೇಮಕವಾಗಿದ್ದ ಆಗ್ನೇಸ್ ಕಲ್ಲಾಮರ್ಡ್ ಎಂಬ ಮಹಿಳಾ ಅಧಿಕಾರಿ 100 ಪುಟಗಳ ವರದಿ ಸಲ್ಲಿಸಿದ್ದರು. ಖಶೋಗಿ ಅವರನ್ನು ಉದ್ದೇಶಪೂರ್ವಕವಾಗಿ, ಯೋಜನಾಬದ್ಧವಾಗಿ ಹತ್ಯೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕು ಕಾಯ್ದೆಯಡಿಯಲ್ಲಿ ಸೌದಿ ಅರೇಬಿಯಾ ಈ ಕಗ್ಗೊಲೆಗೆ ಜವಾಬ್ದಾರಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಕೊಲೆಗೆ ಮೋಟಿವ್ ಏನು?
ಸೌದಿ ಯುವರಾಜನ ವಿರುದ್ಧ ವಾಷಿಂಗ್ಟನ್ ಪೋಸ್ಟ್ ನಲ್ಲಿ ನಿರಂತರವಾಗಿ ಖಶೋಗಿ ಲೇಖನಗಳನ್ನು ಬರೆಯುತ್ತಿದ್ದರು. ಒಂದು ಕಾಲದಲ್ಲಿ ಸೌದಿ ಯುವರಾಜನ ಆಪ್ತ ವಲಯದಲ್ಲಿ ಗುರುತಿಸಿಕೊಂದಿದ್ದರಿಂದ ಅವರಿಗೆ ಹಲವು ಸತ್ಯಗಳು ತಿಳಿದಿದ್ದವು. ಇದೇ ಕಾರಣಕ್ಕೆ ಅವರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿತ್ತು. ಆದರೆ ಅವರ ಮೃತದೇಹ ಪತ್ತೆಯಾಗಿರಲಿಲ್ಲ.












Click it and Unblock the Notifications