13ನೇ ವಯಸ್ಸಿನಲ್ಲಿ 130 ರೂ.ಗೆ ಹೋಟೆಲ್‌ನಲ್ಲಿ ಪಾತ್ರೆ ತೊಳೆಯುತ್ತಿದ್ದ ಬಾಲಕಿ ಇಂದು KFC ಕಂಪನಿ ಬಾಸ್: ಇದು ಕ್ಯಾಥರೀನ್ ಯಶೋಗಾಥೆ
ಬದುಕಿನಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಲು ನಮ್ಮ ಕುಟುಂಬದ ಹಿನ್ನೆಲೆಗಿಂತ, ಸದಾ ಹೊಸತನ್ನ ಕಲಿಯುವ ಹಂಬಲ ಮತ್ತು ಪರಿಶ್ರಮ ಮುಖ್ಯ ಎಂಬುದಕ್ಕೆ ಕೆಎಫ್‌ಸಿ ಯುಎಸ್ ಅಧ್ಯಕ್ಷೆ ಕ್ಯಾಥರೀನ್ ಟಾನ್-ಗಿಲ್ಲೆಸ್ಪಿ (Catherine Tan-Gillespie) ಅವರ ಜೀವನವೇ ಒಂದು ಉತ್ತಮ ಉದಾಹರಣೆ.
ತಮ್ಮ 13ನೇ ವಯಸ್ಸಿನಲ್ಲಿ ಗಂಟೆಗೆ ಕೇವಲ 1.20 ಪೌಂಡ್ ಅಂದರೆ ಅಂದಾಜು 130 ರೂಪಾಯಿ ಸಂಬಳಕ್ಕೆ ಹೋಟೆಲ್‌ನಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದ ಇವರು, ಇಂದು ವಿಶ್ವದ ಅತಿದೊಡ್ಡ ಫಾಸ್ಟ್-ಫುಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಕೆಎಫ್‌ಸಿಯ ಅಮೆರಿಕನ್ ಮಾರುಕಟ್ಟೆಯ ಚುಕ್ಕಾಣಿ ಹಿಡಿದಿದ್ದಾರೆ.

ಹೌದು, 52 ವರ್ಷದ ಈ ಪ್ರಭಾವಿ ಮಹಿಳಾ ನಾಯಕಿ ತಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದು, ತಾನು ಎಂದಿಗೂ ಕೇವಲ ಹಣ ಅಥವಾ ಹುದ್ದೆಗಳ ಹಿಂದೆ ಓಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.
13ನೇ ವಯಸ್ಸಿನಲ್ಲಿ ಪಾತ್ರೆ ತೊಳೆಯುವ ಕೆಲಸದಿಂದ ಆರಂಭ
ಬ್ರಿಟನ್‌ನ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ ಕ್ಯಾಥರೀನ್, ಶಾಲೆಯಲ್ಲಿ ಓದುತ್ತಿದ್ದಾಗಲೇ ತಮ್ಮ 13ನೇ ವಯಸ್ಸಿನಲ್ಲಿ ಬೀಫ್‌ಈಟರ್ ಎಂಬ ರೆಸ್ಟೋರೆಂಟ್‌ನಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡರು. ರೆಸ್ಟೋರೆಂಟ್‌ನ ಒತ್ತಡದ ವಾತಾವರಣ, ವೇಗದ ಕೆಲಸ , ತಂಡದೊಂದಿಗಿನ ಒಡನಾಟ, ಶಿಸ್ತು ಮತ್ತು ಗ್ರಾಹಕರನ್ನ ಸಂತೋಷಪಡಿಸುವ ಕಲೆಗಳನ್ನ ಅವರು ಅಲ್ಲಿಯೇ ಕಲಿತರು.
ತಮ್ಮ ಶ್ರದ್ಧೆ ಹಾಗೂ ಕಠಿಣ ಪರಿಶ್ರಮದಿಂದಾಗಿ ಪಾತ್ರೆ ತೊಳೆಯುವ ಕೆಲಸದಿಂದ ಐಸ್ ಕ್ರೀಮ್ ಮಷಿನ್ ಆಪರೇಟರ್ ಆಗಿ, ನಂತರ ಸಹಾಯಕ ಜನರಲ್ ಮ್ಯಾನೇಜರ್ ಆಗಿ ಬಡ್ತಿ ಪಡೆದರು. "ನಾನು ಕಂಫರ್ಟ್ ಝೋನ್‌ನಲ್ಲಿ ಇರದೆ, ಸದಾ ಹೊಸ ಅವಕಾಶಗಳ ಮೂಲಕ ಕಲಿಯುವ ವಲಯದಲ್ಲಿ ಇರಲು ಬಯಸಿದ್ದೇ ನನ್ನ ಈ ಯಶಸ್ಸಿಗೆ ಕಾರಣ" ಎನ್ನುತ್ತಾರೆ ಕ್ಯಾಥರೀನ್.
ಯಶಸ್ವಿ ಮಹಿಳಾ ಉದ್ಯಮಿಯಾಗಿ ಬೆಳೆದ ಹಾದಿ
ತಮ್ಮ ಇಡೀ ಕುಟುಂಬದಲ್ಲಿ ವಿಶ್ವವಿದ್ಯಾಲಯದ ಮೆಟ್ಟಿಲೇರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಕ್ಯಾಥರೀನ್ ಅವರದ್ದು. 1996ರಲ್ಲಿ ಪ್ಲೈಮೌತ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅವರು, ಆ ನಂತರ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನ ಆರಂಭಿಸಿದರು.
ಎಚ್‌ಪಿ , ಫ್ರಿಟೋ-ಲೇ (Frito-Lay) ಹಾಗೂ ಸೋನಿ ಪಿಕ್ಚರ್ಸ್‌ನಂತಹ ಜಾಗತಿಕ ಕಂಪನಿಗಳಲ್ಲಿ ಕೆಲಸ ಮಾಡಿದ ಅಪಾರ ಅನುಭವ ಇವರಿಗಿದೆ. ಎಲ್ಲಿ ಕೆಲಸದ ಸಂಸ್ಕೃತಿ ತಮ್ಮ ಬೆಳವಣಿಗೆಗೆ ಪೂರಕವಾಗಿರಲಿಲ್ಲವೋ, ಅಂತಹ ಕಂಪನಿಗಳನ್ನ ಬಿಡಲು ಅವರು ಹಿಂಜರಿಯಲಿಲ್ಲ.
ಹೀಗೆ ತಮ್ಮದೇ ಆದ ಷರತ್ತುಗಳ ಮೇಲೆ ಕೆಲಸ ಮಾಡುತ್ತಾ, ಹಂತ ಹಂತವಾಗಿ ಓರ್ವ ಯಶಸ್ವಿ ಮಹಿಳಾ ಉದ್ಯಮಿಯಾಗಿ ಅವರು ಬೆಳೆದುಬಂದರು.
ರಿಚರ್ಡ್ ಬ್ರಾನ್ಸನ್ ಸ್ಫೂರ್ತಿ ಹಾಗೂ ಕೆಎಫ್‌ಸಿ ಪಯಣ
ವರ್ಜಿನ್ ಗ್ರೂಪ್ ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ಅವರ ವ್ಯಾಪಾರ ತಂತ್ರಗಳಿಂದ ಪ್ರೇರಿತರಾಗಿದ್ದ ಕ್ಯಾಥರೀನ್, ತಾನು ಮಹಿಳಾ ರಿಚರ್ಡ್ ಬ್ರಾನ್ಸನ್ ಆಗಬೇಕು ಎಂದು ಕನಸು ಕಂಡಿದ್ದರು. ಈ ಮಹತ್ವಾಕಾಂಕ್ಷೆಯೇ ಅವರನ್ನು 2015ರಲ್ಲಿ ಕೆಎಫ್‌ಸಿ ಸೌತ್ ಪೆಸಿಫಿಕ್ ಸೇರುವಂತೆ ಮಾಡಿತು.
2017ರಲ್ಲಿ ಗ್ಲೋಬಲ್ ಚೀಫ್ ಮಾರ್ಕೆಟಿಂಗ್ ಆಫೀಸರ್ ಆಗಿ, 2024ರಲ್ಲಿ ಕೆಎಫ್‌ಸಿ ಕೆನಡಾ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದ ಅವರು, 2025ರ ಏಪ್ರಿಲ್‌ನಲ್ಲಿ ಪ್ರತಿಷ್ಠಿತ ಕೆಎಫ್‌ಸಿ ಯುಎಸ್ ಅಧ್ಯಕ್ಷೆಯಾಗಿ ನೇಮಕಗೊಂಡರು.
ತೀವ್ರ ಪೈಪೋಟಿ ಎದುರಿಸುತ್ತಿರುವ ಅಮೆರಿಕದ ಮಾರುಕಟ್ಟೆಯಲ್ಲಿ ಕೆಎಫ್‌ಸಿಗೆ ಮರುಜೀವ ನೀಡುವ ಹಾಗೂ ಗ್ರಾಹಕರ ಒಲವು ಗಳಿಸುವ ಬಹುದೊಡ್ಡ ಸವಾಲು ಈಗ ಅವರ ಮುಂದಿದೆ.
ಯುವಪೀಳಿಗೆಗೆ ಕಿವಿಮಾತು
ಇಂದಿನ ಜೆನ್ ಝೀ ಯುವಜನತೆ ತಮಗೆ ಏನು ಬೇಕು ಎಂಬುದನ್ನ ಸ್ಪಷ್ಟವಾಗಿ ತಿಳಿದುಕೊಂಡಿದ್ದಾರೆ ಎಂದು ಕ್ಯಾಥರೀನ್ ಪ್ರಶಂಸಿಸುತ್ತಾರೆ. ಜೊತೆಗೆ, ಭಯದಿಂದ ತಮ್ಮ ವೃತ್ತಿಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಯುವಪೀಳಿಗೆಗೆ ಸಲಹೆ ನೀಡುತ್ತಾರೆ.
"ಭಯ ಇಲ್ಲದಿರುವುದೇ ಧೈರ್ಯವಲ್ಲ, ಭವಿಷ್ಯದ ಬಗ್ಗೆ ಆತಂಕವಿದ್ದರೂ, ಒಂದು ವೇಳೆ ನನಗೆ ಭಯವಿಲ್ಲದಿದ್ದರೆ ನಾನು ಏನು ಮಾಡುತ್ತಿದ್ದೆ? ಎಂದು ಯೋಚಿಸಿ ಮುನ್ನುಗ್ಗುವುದೇ ನಿಜವಾದ ಧೈರ್ಯ. ಕಷ್ಟದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ 'ಇದರಿಂದ ಮುಂದೆ ಆಗಬಹುದಾದ ಅತಿ ದೊಡ್ಡ ಕೆಟ್ಟದ್ದು ಏನು?' ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ," ಎಂಬುದು ಕ್ಯಾಥರೀನ್ ಅವರ ಕಿವಿಮಾತು.


Click it and Unblock the Notifications
