ದುಬೈ ಏರ್‌ಪೋರ್ಟ್‌ನಲ್ಲಿ ಕನ್ನಡಿಗರು: ಡ್ರೋನ್ ಪ್ರತಾಪ್, ಪಿ.ವಿ ಸಿಂಧು, ವಿಷ್ಣು ಮಂಚು, ಸೋನಾಲ್ ಚೌಹಾಣ್‌ಗೆ ಸಂಕಷ್ಟ
ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಧ್ಯಪ್ರಾಚ್ಯದಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ. ಇರಾನ್ - ಇಸ್ರೇಲ್‌ನ ನಡುವೆ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇರಾನ್ ಮೇಲಿನ ನಿರಂತರ ದಾಳಿಗಳು ನಡೆಯುತ್ತಿದ್ದು, ಇರಾನ್ ಸಹ ಪ್ರತಿ ದಾಳಿಯನ್ನು ನಡೆಸುತ್ತಿದೆ. ಇರಾನ್ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ಸಂಕಷ್ಟ ಎದುರಾಗಿದೆ. ಅದರಲ್ಲೂ ಪ್ರಮುಖವಾಗಿ ದುಬೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ ನಡೆಸಿದೆ. ಕನ್ನಡಿಗರು ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಈ ಸಂಕಷ್ಟದ ಸಮಯದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್, ಬಳ್ಳಾರಿ ಶಾಸಕ ಭರತ್ ರೆಡ್ಡಿ ಸೇರಿದಂತೆ ನೂರಾರು ಜನ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಮೆರಿಕಾ - ಇಸ್ರೇಲ್ ಸೇನಾಪಡೆಗಳು ಜಂಟಿ ಇರಾನ್ ದೇಶದ ಮೇಲೆ ದಾಳಿ ನಡೆಸುತ್ತಿದ್ದು, ಇದರಲ್ಲಿ ದುಬೈ ಸಂಕಷ್ಟಕ್ಕೆ ಸಿಲುಕಿದೆ. ದುಬೈನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ಮಾಡುತ್ತಿದೆ. ಇರಾನ್ ದುಬೈನಲ್ಲಿರುವ ಹಲವು ಜನನಿಬಿಡ ಪ್ರದೇಶಗಳ ಮೇಲೆಯೂ ವೈಮಾನಿಕ ದಾಳಿ ನಡೆಸುತ್ತಿದ್ದು, ಪೂರ್ಣ ಪ್ರಮಾಣದ ಯುದ್ಧಕ್ಕೆ ಕನ್ನಡಿಗರು ಸೇರಿದಂತೆ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಯುದ್ಧ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ದುಬೈ ವಿಮಾನ ನಿಲ್ದಾಣದಲ್ಲಿಯೇ ಅಂದಾಜು 150 ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಇದರಲ್ಲಿ ಬಿಬಿ ಕನ್ನಡದ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್, ಬಳ್ಳಾರಿಯ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ, ಜೆಡಿಎಸ್ ಪರಿಷತ್ ಸದಸ್ಯ ಭೋಜೇಗೌಡ ಕೂಡ ಸೇರಿದಂತೆ ಸಹ ಇದ್ದಾರೆ.
ಡ್ರೋನ್ ಪ್ರತಾಪ್ ಹೇಳಿದ್ದೇನು
ನಾವು ಅಬುಧಾಬಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದ್ದೇವೆ. ಇಸ್ರೇಲ್, ಅಮೆರಿಕ vs ಇರಾನ್ ಯುದ್ಧದಲ್ಲಿ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮ್ಮ ಎಲ್ಲ ವಿಮಾನಗಳು ರದ್ದಾಗಿವೆ. ಈ ಎರಡೂ ರಾಷ್ಟ್ರಗಳ ನಡುವೆ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಂದಿನ 12 ಗಂಟೆಗಳ ವರೆಗಿನ ಎಲ್ಲ ವಿಮಾನಗಳ ಹಾರಾಟವನ್ನೂ ರದ್ದು ಮಾಡಲಾಗಿದೆ. ಮುಂದಿನ ಪ್ರಕಟಣೆಯ ವರೆಗೆ ಕಾಯುವಂತೆ ಹೇಳುತ್ತಿದ್ದಾರೆ. ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎಂದು ಡ್ರೋನ್ ಪ್ರತಾಪ್ ಅವರು ಹೇಳಿದ್ದಾರೆ. ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿರುವ ಅವರು, ಬುರ್ಜ್ ಖಲೀಫಾ ಮುಂದೆ ಇದ್ದೇನೆ ಇಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದೆ ಎಂದೂ ಹೇಳಿದ್ದಾರೆ.
ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯ ಸೆಲೆಬ್ರಿಟಿಗಳು
ಪಿ.ವಿ ಸಿಂಧು
ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದಾರೆ. ದುಬೈ ವಿಮಾನ ನಿಲ್ದಾಣದ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿರುವುದರಿಂದ ಸ್ಟಾರ್ ಶಟ್ಲರ್ ಆಲ್ ಇಂಗ್ಲೆಂಡ್ ಓಪನ್‌ಗಾಗಿ ಬರ್ಮಿಂಗ್ಹ್ಯಾಮ್‌ಗೆ ಪ್ರಯಾಣಿಸುತ್ತಿದ್ದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನ ನಿಲ್ದಾಣದ ಸಮೀಪದಲ್ಲೇ ಕ್ಷಿಪಣಿಗಳು ಸ್ಫೋಟಗೊಳ್ಳುತ್ತಿರುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ಹೆಚ್ಚು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿಷ್ಣು ಮಂಚು
ತೆಲುಗು ನಟ ವಿಷ್ಣು ಮಂಚು ಅವರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಬೈನಲ್ಲಿ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ತೆಲುಗು ನಟ ತೆರಳಿದ್ದರು. ಭಾರೀ ಕ್ಷಿಪಣಿಗಳ ಹಾರಾಟವನ್ನು ಅವರು ಹಂಚಿಕೊಂಡಿದ್ದಾರೆ. ನಾವಿರುವ ಮನೆಯ ಮೇಲೆಯೇ ಕ್ಷಿಪಣಿಗಳು ಬೀಳುವಂತಹ ಪರಿಸ್ಥಿತಿ ಇದೆ. ಚಿಕ್ಕ ಮಗಳನ್ನು ಹೆದರಿಸುವಷ್ಟು ಜೋರಾಗಿವೆ ಕ್ಷಿಪಣಿ ದಾಳಿಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸೋನಾಲ್ ಚೌಹಾಣ್
ವಿಮಾನ ಕಾರ್ಯಾಚರಣೆಗಳನ್ನು ರದ್ದುಗೊಳಿಸಿದ ನಂತರ ಜನ್ನತ್ ನಟಿ ಸೋನಾಲ್ ಚೌಹಾಣ್ ಅವರು ಸಹ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ಸುರಕ್ಷಿತವಾಗಿ ಮನೆಗೆ ಮರಳಲು ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಸಾರ್ವಜನಿಕ ಮನವಿ ಮಾಡಿದ್ದಾರೆ.
ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದೇನು
ಇನ್ನು ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಅಲ್ಲಿನ ಕನ್ನಡಿಗರ ರಕ್ಷಣೆಗೆ ಪ್ರಯತ್ನಿಸುತ್ತಿರುವುದಾಗಿ ಕರ್ನಾಟಕ ಸರ್ಕಾರ ತಿಳಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಇಸ್ರೇಲ್-ಇರಾನ್ ನಡುವೆ ಯುದ್ಧ ನಡೆಯುತ್ತಿದೆ. ಈ ನಡುವೆ ಇರಾನ್ ದುಬೈನ ಹಲವೆಡೆ ದಾಳಿ ನಡೆಸುತ್ತಿದ್ದು, ಈ ಯುದ್ಧ ಭೂಮಿಯಲ್ಲಿ ಬಳ್ಳಾರಿ ಶಾಸಕ ಭರತ್ ರೆಡ್ಡಿ, ಡ್ರೋನ್ ಪ್ರತಾಪ್ ಸೇರಿ 150ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿದ್ದಾರೆ ಎನ್ನುವ ಮಾಹಿತಿ ಇದೆ.
ಚಿಕ್ಕಬಳ್ಳಾಪುರ ಮೂಲದ ವಿದ್ಯಾರ್ಥಿಗಳು ದುಬೈನಲ್ಲಿ ಸಿಲುಕಿದ್ದಾರೆ. ಸದ್ಯ ಶಾಸಕ ರೆಡ್ಡಿ ಹೋಟೆಲ್‌ವೊಂದರಲ್ಲಿ ಸುರಕ್ಷಿತರಾಗಿದ್ದಾರೆ. ಹಲವರು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications