ಅಮೆರಿಕ ಅಧ್ಯಕ್ಷ ಬೈಡನ್ ಮೊದಲ ಭಾರತ ಭೇಟಿಗೆ ಡೇಟ್ ಫಿಕ್ಸ್!
ವಾಷಿಂಗ್ಟನ್: ಭಾರತ & ಅಮೆರಿಕ ಮಧ್ಯೆ ಗಟ್ಟಿಯಾದ ಸ್ನೇಹವಿದೆ. ವ್ಯಾಪಾರ, ವಹಿವಾಟಿನ ಜೊತೆ ಎರಡೂ ರಾಷ್ಟ್ರಗಳು ಸೇನಾ ಒಪ್ಪಂದಗಳನ್ನೂ ಮಾಡಿಕೊಂಡಿವೆ. ಆದರೆ ಟ್ರಂಪ್ ಬಳಿಕ ಬೈಡನ್ ಅಧಿಕಾರಕ್ಕೆ ಬಂದ ನಂತರ ಎರಡೂ ರಾಷ್ಟ್ರಗಳ ನಡುವೆ ಒಡನಾಟ ಕಮ್ಮಿಯಾಗಿದ್ದು, ಇದೀಗ ಅದನ್ನ ಸರಿಪಡಿಸುವ ಮೊದಲ ಪ್ರಯತ್ನ ಬೈಡನ್‌ರಿಂದ ಆರಂಭವಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಭಾರತಕ್ಕೆ ಒಮ್ಮೆಯೂ ಅಧಿಕೃತ ಭೇಟಿ ಘೋಷಿಸಿರಲಿಲ್ಲ. ಆದರೆ ಇದೀಗ ಬೈಡನ್ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಭಾರತಕ್ಕೆ ವಿಸಿಟ್ ಕೊಡಲಿದ್ದಾರೆ. ಜೋ ಬೈಡನ್ 2023ರ ಸೆಪ್ಟೆಂಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಜಿ-20 ನಾಯಕರ ಶೃಂಗಸಭೆ ಭಾಗವಾಗಿ ಬೈಡನ್ ಭಾರತಕ್ಕೆ ಆಗಮಿಸಲಿದ್ದಾರೆ, ಮತ್ತೊಂದು ಕಡೆ ಈ ಭೇಟಿ ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧದ ದೃಷ್ಟಿಯಿಂದ ಮಹತ್ವದ್ದು ಎಂದು ಅಮೆರಿಕ ಹೇಳಿದೆ.

ಚೀನಾಗೆ ಶಾಕ್ ಕೊಟ್ಟ ಅಮೆರಿಕ
ಈ ಬಾರಿ ಭಾರತ G-20 ಶೃಂಗಸಭೆ ಆಯೋಜಿಸಿದೆ. ಜಪಾನ್ G-7 ಶೃಂಗಸಭೆ ನಡೆಸಿದೆ. ನಾವು ನಾಯಕತ್ವದ ಪಾತ್ರ ವಹಿಸುತ್ತಿರುವ ಕ್ವಾಡ್ ಸದಸ್ಯರನ್ನು ಹೊಂದಿದ್ದೇವೆ. ಇದು ಅಮೆರಿಕದ ಮಿತ್ರ ರಾಷ್ಟ್ರಗಳ ನಡುವೆ ಸ್ನೇಹ ವೃದ್ಧಿಸಲು ಪ್ರಮುಖವಾಗಿದೆ ಎಂದು ಅಮೆರಿಕದ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಡೊನಾಲ್ಡ್ ಲು ಹೇಳಿದ್ದಾರೆ. ಈ ಮೂಲಕ ಚೀನಾಗೆ ಮತ್ತೊಂದು ವಿಧದಲ್ಲಿ ಬಿಸಿ ಮುಟ್ಟಿಸುವ ಕಾರ್ಯ ಕೂಡ ಆರಂಭವಾದಂತೆ ಕಾಣುತ್ತಿದೆ.
ನಮ್ಮ ಅಧ್ಯಕ್ಷರು ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಲು ಕಾಯುತ್ತಿದ್ದಾರೆ. ಜಿ-20 ನಾಯಕರ ಶೃಂಗಸಭೆಯ ಭಾಗವಾಗಿ ಬೈಡನ್‌ರ ಮೊದಲ ಭಾರತ ಭೇಟಿ ಇದಾಗಲಿದೆ ಎಂದಿದ್ದಾರೆ ಡೊನಾಲ್ಡ್ ಲು. ಇನ್ನು ಅಧ್ಯಕ್ಷ ಜೋ ಬೈಡನ್ ಭಾರತ ಭೇಟಿಯ ಸಂದರ್ಭದಲ್ಲಿ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್, ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಮತ್ತು ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೋ ಕೂಡ ಭಾರತಕ್ಕೆ ಆಗಮಿಸಲಿರುವ ಬಗ್ಗೆ ಡೊನಾಲ್ಡ್ ಲು ಮಾಹಿತಿ ನೀಡಿದ್ದಾರೆ. ಮತ್ತೊಂದು ಕಡೆ G-20 ಶೃಂಗಸಭೆ ಆಯೋಜಿಸಿತ್ತಿರುವ ಭಾರತದ ಬಗ್ಗೆ ಡೊನಾಲ್ಡ್ ಲು ಹೆಮ್ಮೆಯ ಮಾತುಗಳನ್ನ ಆಡಿದ್ದಾರೆ.
ಭಾರತದ ಕಾರ್ಯಕ್ಕೆ ಮೆಚ್ಚುಗೆ
ಕಳೆದ ತಿಂಗಳು ಭಾರತ ಆಯೋಜನೆ ಮಾಡಿದ್ದ G-20 ವಿದೇಶಾಂಗ ಸಚಿವರ ಸಭೆಯ ಬಗ್ಗೆಯೂ ಡೊನಾಲ್ಡ್ ಲು ಪ್ರಸ್ತಾಪ ಮಾಡಿದ್ದಾರೆ. G-20 ವಿದೇಶಾಂಗ ಸಚಿವರ ಸಭೆಯನ್ನು ಆಯೋಜಿಸಿರುವ ಭಾರತದ ಮಹತ್ತರ ಕೆಲಸಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಭವಿಷ್ಯದ G-20 ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಎದುರು ನೋಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಬೈಡನ್ ಅವರ ಭಾರತ ಪ್ರವಾಸ ಮಹತ್ವದ್ದಾಗಿದೆ ಎಂದು ಮಾಹಿತಿ ನೀಡಿದ್ದಾರೆ ಡೊನಾಲ್ಡ್ ಲು. ಹೀಗೆ ಜಿ-20 ಶೃಂಗಸಭೆ ಆರಂಭಕ್ಕೂ ಮುನ್ನ ಭಾರತದ ಬೆನ್ನುತಟ್ಟಿದೆ.

ಜಿ-20 ಸದಸ್ಯ ರಾಷ್ಟ್ರಗಳು ಯಾವುವು?
20 ರಾಷ್ಟ್ರಗಳ ಗುಂಪನ್ನೇ ಜಿ-20 ಎಂದು ಹೆಸರಿಸಲಾಗಿದೆ. ಭಾರತ, ಅರ್ಜೆಂಟೀನಾ, ಬ್ರೆಜಿಲ್, ಚೀನಾ, ಜರ್ಮನಿ, ಇಂಡೋನೇಷ್ಯಾ, ಜಪಾನ್, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಇಟಲಿ, ಮೆಕ್ಸಿಕೊ, ಕೊರಿಯಾ, ರಷ್ಯಾ, ಟರ್ಕಿ, ಅಮೆರಿಕ, ದಕ್ಷಿಣ ಆಫ್ರಿಕಾ, ಸೌದಿ ಅರೇಬಿಯಾ, ಯುಕೆ ಮತ್ತು ಯೂರೋಪ್ ಒಕ್ಕೂಟ ಜಿ-20 ಸದಸ್ಯ ರಾಷ್ಟ್ರಗಳ ಗುಂಪಿಗೆ ಸೇರಿದೆ. ಮೊದಲ ಜಿ-20 ಸಭೆ 1999ರಲ್ಲಿ ಬರ್ಲಿನ್‌ನಲ್ಲಿ ನಡೆದಿತ್ತು.
ಒಟ್ನಲ್ಲಿ ಒಂದು ಕಡೆ ರಷ್ಯಾ ಮತ್ತು ಉಕ್ರೇನ್ ಯುದ್ಧ ನಡೆಯುತ್ತಿದ್ದು, ಇನ್ನೊಂದು ಕಡೆ ಜಿ-20 ರಾಷ್ಟ್ರಗಳು ಮಹತ್ವದ ಸಭೆಗೆ ಸಜ್ಜಾಗಿವೆ. ಭಾರತಕ್ಕೆ ಪ್ರಮುಖವಾಗಿ ಅಮೆರಿಕ ಅಧ್ಯಕ್ಷ ಬೈಡನ್ ಭೇಟಿ ಮುಖ್ಯವಾಗಿದ್ದು, ಉಭಯ ದೇಶಗಳ ನಡುವೆ ಯಾವ ರೀತಿಯ ಚರ್ಚೆ ನಡೆಯಲಿದೆ ಎಂಬುದನ್ನ ಕಾದು ನೋಡಬೇಕು.












Click it and Unblock the Notifications