ಭಾರತ ಮೂಲದ ಮಹಿಳೆಗೆ ಅಮೆರಿಕ ಅಧ್ಯಕ್ಷ ಸ್ಥಾನ ಪಡೆಯುವ ಅವಕಾಶ: ಜೋ ಬೈಡನ್ ಹೇಳಿದ್ದೇನು?
ಅಮೆರಿಕ ಅಧ್ಯಕ್ಷ ಸ್ಥಾನ ಈ ಬಾರಿ ಭಾರತ ಮೂಲದವರಿಗೆ ಸಿಗುವುದು ಗ್ಯಾರಂಟಿ ಆಗಿದ್ದು, ಭಾರತೀಯರು ಕೂಡ ಕಮಲಾ ಹ್ಯಾರಿಸ್ ಪರವಾಗಿ ಮತ ಹಾಕಲು ಸನ್ನದ್ಧರಾಗಿದ್ದಾರೆ. ಈ ಸಮಯದಲ್ಲೇ ಜೋ ಬೈಡನ್ ಅವರು ಚುನಾವಣೆ ಕಣದಿಂದ ಹಿಂದೆ ಸರಿದು, ಭಾರತೀಯ ಮಹಿಳೆ ಕಮಲಾ ಹ್ಯಾರಿಸ್ ಅವರಿಗೆ ಅವಕಾಶ ಕೊಟ್ಟಿದ್ದು ಯಾಕೆ? ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ.
ಅಷ್ಟಕ್ಕೂ ಅಮೆರಿಕದ ಪ್ರಜಾಪ್ರಭುತ್ವ ಭವಿಷ್ಯದ ದೃಷ್ಟಿಯಿಂದ & ಹೊಸ ತಲೆಮಾರಿಗೆ ಅವಕಾಶ ನೀಡುವ ಸಲುವಾಗಿ, ಅಧ್ಯಕ್ಷೀಯ ಚುನಾವಣೆ ಕಣದಿಂದ ನಾನು ಹಿಂದೆ ಸರಿದು ಈಗ ಕಮಲಾ ಹ್ಯಾರಿಸ್ ಅವರಿಗೆ ಅವಕಾಶ ಕಲ್ಪಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇಂದು ಬೈಡನ್ ಅಮೆರಿಕ ಪ್ರಜೆಗಳನ್ನ ಉದ್ದೇಶಿಸಿ ಮಹತ್ವದ ಭಾಷಣ ಮಾಡಿದರು. ಈ ವೇಳೆ ತಾವು ದಿಢೀರ್ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಬಿಟ್ಟು ಹೊರಗೆ ಬಂದಿದ್ದು ಏಕೆ? ಎಂಬ ವಿಚಾರವನ್ನು ತಮ್ಮ ದೇಶದ ಜನಗಳ ಎದುರು ವಿವರವಾಗಿ ತಿಳಿಸಿದರು.

ಭಾರತ ಮೂಲದ ಮಹಿಳೆಗೆ ಬೆಂಬಲ!
ಕಮಲಾ ಹ್ಯಾರಿಸ್ ಅವರನ್ನು ದಿಢೀರ್ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಣೆ ಮಾಡಿದ ನಂತರ ಮೊದಲ ಬಾರಿ ಬಹಿರಂಗವಾಗಿ ಜೋ ಬೈಡನ್ ಅವರು ಮಾತನಾಡಿದ್ದಾರೆ. ನಾನು ಈ ಕಚೇರಿಯನ್ನ ಗೌರವಿಸುತ್ತೇನೆ, ಅದಕ್ಕಿಂತ ಹೆಚ್ಚಾಗಿ ಅಮೆರಿಕವನ್ನು ಪ್ರೀತಿಸುತ್ತೇನೆ. ಹೊಸ ತಲೆಮಾರಿಗೆ ಅಧಿಕಾರ ಹಸ್ತಾಂತರಿಸುವುದು ಉತ್ತಮ ಎಂದು ನಾನು ನಿರ್ಧರಿಸಿದೆ. ಈ ಮೂಲಕ ದೇಶವನ್ನ ಒಗ್ಗೂಡಿಸಲು ಸಾಧ್ಯ ಎಂಬುದು ನನಗೆ ಮನವರಿಕೆ ಆಗಿದೆ ಎಂದರು. ಅಲ್ಲದೆ ಒಟ್ಟು 11 ನಿಮಿಷ ಭಾಷಣ ಮಾಡಿದ ಬೈಡನ್, ಟ್ರಂಪ್ ಅವರ ಹೆಸರನ್ನು ಎಲ್ಲೂ ಹೇಳದೆ ಟ್ರಂಪ್ ಗೆದ್ದರೆ ಅಮೆರಿಕನ್ನರು ಅಪಾಯ ಎದುರಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಟ್ರಂಪ್ ವಿರುದ್ಧ ಬೈಡನ್ ವಾಗ್ದಾಳಿ!
ಈಗಿನ ಪರಿಸ್ಥಿತಿಯಲ್ಲಿ, ಅಮೆರಿಕದ ಪ್ರಜಾಪ್ರಭುತ್ವ ಉಳಿಸೋದಕ್ಕೆ ಯಾವುದೂ ಅಡ್ಡಿ ಆಗಲ್ಲ. ದೊರೆಗಳು ಹಾಗೂ ಸರ್ವಾಧಿಕಾರಿಗಳು ಆಳ್ವಿಕೆ ನಡೆಸಿಲ್ಲ ಎಂಬುದೇ ಅಮೆರಿಕದ ಶ್ರೇಷ್ಠತೆ. ಆದ್ರೆ ಸಾಮಾನ್ಯರು ಅಧಿಕಾರ ನಡೆಸಿದ್ದಾರೆ ಎಂದರು. ಈ ಮೂಲಕ ಡೊನಾಲ್ಡ್ ಟ್ರಂಪ್ ಗೆದ್ದರೆ, ಮುಂದಿನ ದಿನಗಳಲ್ಲಿ ಪರಿಣಾಮ ವ್ಯತಿರಿಕ್ತವಾಗಲಿದೆ ಎಂಬ ಎಚ್ಚರಿಕೆಯ ನುಡಿಗಳನ್ನೂ ಈ ಸಮಯದಲ್ಲಿ ಜೋ ಬೈಡನ್ ಪರೋಕ್ಷವಾಗಿ ತಿಳಿಸಿದರು.
ಜೋ ಬೈಡನ್ ಅವರು ಈ ರೀತಿ ಸ್ಪಷ್ಟನೆ ನೀಡುವ ಮೂಲಕ ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಂತೆ ಆಗಿದೆ. ಅಲ್ಲದೆ, ಜೋ ಬೈಡನ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡ ಬಿಟ್ಟು ಹೋದ ನಂತರ ಎದ್ದಿದ್ದ ಗೊಂದಲಗಳು ಈಗ ಬಗೆಹರಿದಿವೆ. ಮತ್ತೊಂದು ಕಡೆ ಈ ಸಮಯದಲ್ಲೇ ಭಾರತ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಟ್ರಂಪ್ ಅವರಿಗಿಂತ ಹೆಚ್ಚಿನ ಬೆಂಬಲ ಸಿಗುತ್ತಿದೆ ಎನ್ನಲಾಗಿದೆ.












Click it and Unblock the Notifications