ಯಹೂದಿ ಸಮುದಾಯ ಭಾರತವನ್ನು ಶ್ರೀಮಂತಗೊಳಿಸಿದೆ- ಮೋದಿ
ಟೆಲ್ ಅವಿವ್, ಜುಲೈ 5: ಐತಿಹಾಸಿಕ ಇಸ್ರೇಲ್ ಭೇಟಿಯ ಸಂದರ್ಭ ಇಂದು ಇಸ್ರೇಲಿನಲ್ಲಿರುವ ಭಾರತೀಯ ಮೂಲದವರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಟೆಲ್ ಅವಿವ್ ಕನ್ವೆನ್ಶನ್ ಸೆಂಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಆಗಮಿಸುತ್ತಿದ್ದಂತೆ ಅಭಿಮಾನಿಗಳು 'ಮೋದಿ.. ಮೋದಿ..' ಎಂದು ಉದ್ಗರಿಸಿದರು.
ನಂತರ ಮಾತನಾಡಿದ ಪ್ರಧಾನಿ ಮೋದಿ, "ನಾನು ಪಶ್ಚಾತ್ತಾಪದಿಂದ ಮಾತು ಆರಂಭಿಸುತ್ತಿದ್ದೇನೆ. ತುಂಬಾ ಸಮಯದ ನಂತರ ನಾವು ಭೇಟಿಯಾಗುತ್ತಿದ್ದೇವೆ. ಇಲ್ಲಿಗೆ ಬರಲು 70 ವರ್ಷಗಳೇ ಹಿಡಿಯಿತು," ಎಂದು ಹೇಳಿದರು.

"ಕಳೆದ 70 ವರ್ಷಗಳಲ್ಲಿ ಮೊದಲ ಬಾರಿಗೆ ಇಸ್ರೇಲಿಗೆ ಭೇಟಿ ನೀಡುವ ಅವಕಾಶ ಭಾರತದ ಪ್ರಧಾನಿಗೆ ಒಲಿದು ಬಂದಿದೆ. ಇದೇ ಸಂಭ್ರಮದ ವಿಷಯ," ಎಂದು ಹೇಳಿದ ಮೋದಿ 'ಇಸ್ರೇಲ್ ಜತೆಗಿನ ನಮ್ಮ ಸಂಬಂಧ ಪರಸ್ಪರ ನಂಬಿಕೆಯದ್ದು ಮತ್ತು ಗೆಳೆತನದ್ದು," ಎಂದು ಬಣ್ಣಿಸಿದರು.
"ತಮ್ಮ ಗಾತ್ರಕ್ಕಿಂತ ದೊಡ್ಡದು ಎಂಬುದನ್ನು ಇಸ್ರೇಲ್ ತೋರಿಸಿದೆ. ಇದಕ್ಕೆ ಕಾರಣ ಆತ್ಮವಿಶ್ವಾಸ," ಎಂದು ಪ್ರಧಾನಿ ಹೇಳಿದರು. "ಹಲವು ವಲಯಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಯಹೂದಿ ಸಮುದಾಯ ಭಾರತವನ್ನು ಶ್ರೀಮಂತಗೊಳಿಸಿದೆ," ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದಕ್ಕೆ ಇಸ್ರೇಲಿನ ಹಲವು ನಗರಗಳ ಮೇಯರ್ ಗಳಿಗೆ ಪ್ರಧಾನಿ ಧನ್ಯವಾದ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿಗೂ ಮೊದಲು ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, "ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ನಮ್ಮ ಮೈತ್ರಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ನಮ್ಮ ನಡುವೆ ಮಾನವ ಸಂಬಂಧವೊಂದಿದೆ ಎಂಬುದನ್ನು ನಾವು ಯಾವತ್ತೂ ನೆನಪಿಸಿಕೊಳ್ಳುತ್ತೇವೆ. ನಾವು ನಿಮ್ಮನ್ನು ಗೌರವಿಸುತ್ತೇವೆ, ನಿಮ್ಮನ್ನು ಪ್ರೀತಿಸುತ್ತೇವೆ," ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಭಾಷಣದ ನೇರ ಪ್ರಸಾರ ಇಲ್ಲಿದೆ,












Click it and Unblock the Notifications