James Cameron: ಭೂಮಿಯ ಮೇಲೆ ಮನುಷ್ಯರ ವಿನಾಶಕ್ಕೆ ಮುನ್ನುಡಿ?
ಜಗತ್ತಿನಾದ್ಯಂತ ಹೊಸ ಅಲೆ ಮೂಡಿದೆ, ಮನುಷ್ಯ ತಾಂತ್ರಿಕವಾಗಿ ಅದೆಷ್ಟು ಅಭಿವೃದ್ಧಿ ಹೊಂದುತ್ತಿದ್ದಾನೆ ಎಂದರೆ ಭಯ ಎದುರಾಗುತ್ತಿದೆ. ಅದರಲ್ಲೂ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಚಾಟ್‌ಬಾಟ್‌ಗಳ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ವೇಳೆ, ಹಾಲಿವುಡ್‌ನ ಖ್ಯಾತ ನಿರ್ದೇಶಕ ಎಚ್ಚರಿಕೆ ನೀಡಿದ್ದಾರೆ. ಜಗತ್ತು ವಿನಾಶವಾಗುವ ಮುನ್ಸೂಚನೆ ಕೊಟ್ಟಿದ್ದಾರೆ.
ಹೌದು, ಹಾಲಿವುಡ್‌ನ ಖ್ಯಾತ ನಿರ್ದೇಶಕ ಅವತಾರ್ & ಟೈಟಾನಿಕ್ ರೀತಿಯ ಐತಿಹಾಸಿಕ ಸಿನಿಮಾಗಳನ್ನ ನೀಡಿದ್ದ ಜೇಮ್ಸ್ ಕ್ಯಾಮೆರಾನ್ ಎಚ್ಚರಿಕೆಯನ್ನ ನೀಡಿದ್ದಾರೆ. ಜಗತ್ತು ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಡೆಗೆ ಹೆಚ್ಚು ಒಲವು ತೋರಿಸುತ್ತಿದೆ. ಆದರೆ ಈ ಬಗ್ಗೆ 1984ರಲ್ಲೇ ಎಚ್ಚರಿಕೆ ಸಂದೇಶ ನೀಡುವ ಸಿನಿಮಾ ತೆಗೆದಿದ್ದರು ನಿರ್ದೇಶಕ ಜೇಮ್ಸ್ ಕ್ಯಾಮೆರಾನ್. ಈಗ ತಮ್ಮದೇ ಸಿನಿಮಾ ಉದಾಹರಣೆಯಾಗಿ ನೀಡಿ ಇಡೀ ಜಗತ್ತನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಹಾಗಾದರೆ ಜೇಮ್ಸ್ ಕ್ಯಾಮೆರಾನ್ ಹೊಸ ತಂತ್ರಜ್ಞಾನದ ಬಗ್ಗೆ ಹೇಳಿದ್ದೇನು? ಬನ್ನಿ ತಿಳಿಯೋಣ.

ಮನುಷ್ಯನಿಗೆ ಮುಂದೆ ಇದೆ ಮಾರಿಹಬ್ಬ!
ಅಂದಹಾಗೆ 'ಕೃತಕ ಬುದ್ಧಿಮತ್ತೆ' ಅಥವಾ 'ಆರ್ಟಿಫಿಷಿಯಲ್ ಇಂಟಲಿಜೆನ್ಸ್' ಮನುಷ್ಯನಿಗೆ ಯಾವತ್ತಿದ್ದರೂ ಮಾರಕ. ಅದರಲ್ಲೂ ಮನುಷ್ಯನ ಭವಿಷ್ಯವನ್ನೇ ಇದು ಕಸಿಯಬಹುದು. ಹೇಗೆಂದರೆ 'ಆರ್ಟಿಫಿಷಿಯಲ್ ಇಂಟಲಿಜೆನ್ಸ್' ಸಹಾಯದಿಂದ ರೂಪುಗೊಳ್ಳುವ ರೋಬಾಟ್ ಹಾಗೂ ತಂತ್ರಜ್ಞಾನ ಎಲ್ಲವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬಹುದು. ಇದೇ ರೀತಿಯಲ್ಲಿ ಕಥೆ ಹೆಣೆದು 1984ರಲ್ಲೇ ಸಿನಿಮಾ ಮಾಡಿದ್ರು ಜೇಮ್ಸ್ ಕ್ಯಾಮೆರಾನ್. ಸುಮಾರು 40 ವರ್ಷ ಹಿಂದೆಯೇ ಈಗಿನ ಪರಿಸ್ಥಿತಿಯನ್ನು ಊಹಿಸಿದ್ದರು. ಇದೀಗ ಆ ದಿನಗಳು ಬಂದೇ ಬಿಟ್ಟಿವೆ. ಜಗತ್ತು 'ಆರ್ಟಿಫಿಷಿಯಲ್ ಇಂಟಲಿಜೆನ್ಸ್' ಕಡೆಗೆ ಓಡುತ್ತಿದ್ದು ಪರಿಸ್ಥಿತಿ ಭಯಾನಕವಾಗಿದೆ.
ಜೇಮ್ಸ್ ಕ್ಯಾಮೆರಾನ್ ಹೇಳಿದ್ದು ಏನು?
ಸಂದರ್ಶನ ಒಂದರಲ್ಲಿ ಮಾತನಾಡಿದ ಜೇಮ್ಸ್ ಕ್ಯಾಮೆರಾನ್, ಈ ರೀತಿ ತಂತ್ರಜ್ಞಾನದಿಂದ ಭವಿಷ್ಯದಲ್ಲಿ ಸಮಸ್ಯೆ ಸೃಷ್ಟಿಯಾಗಬಹುದು. ಇದನ್ನ ನಾನು 1984ರಲ್ಲೇ ಎಚ್ಚರಿಸಿದ್ದೆ. ಆದರೆ ಅದನ್ನೂ ಮೀರಿ ಈಗಿನ ಘಟನೆಗಳು ನಡೆಯುತ್ತಿವೆ. ಈಗ ಎದುರಾಗಿರುವ ಪರಿಸ್ಥಿತಿ ನೋಡಿದರೆ, ನಾವು ಅದನ್ನ ಮಾಡದೇ ಇದ್ದರೆ ಬೇರೆಯ ವ್ಯಕ್ತಿ ಅದನ್ನು ಮಾಡಿರುತ್ತಾರೆ. ಹೀಗಾಗಿ ಎಐ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ಇದು ಭವಿಷ್ಯದಲ್ಲಿ ಮನುಷ್ಯನಿಗೆ ಸಮಸ್ಯೆ ಮಾಡಬಹುದು ಎಂದಿದ್ದಾರೆ. ಅಲ್ಲದೆ ಮುಂದೆ ಜಗತ್ತಿನಲ್ಲಿ ಪರಮಾಣು ಯುದ್ಧದ ಭೀತಿಯನ್ನೂ ಪರೋಕ್ಷವಾಗಿ ಹೊರಹಾಕಿದ್ದಾರೆ ಹಾಲಿವುಡ್‌ನ ಖ್ಯಾತ ನಿರ್ದೇಶಕ.

ಜಗತ್ತಿನಾದ್ಯಂತ ಸಂಚಲನ ಸೃಷ್ಟಿಯಾಗಿದೆ
ಒಟ್ಟಾರೆ ಅತಿಯಾದ್ರೆ ಅಮೃತವೂ ವಿಷ ಎಂಬಂತೆ ಮಾನವ ತನ್ನ ತಂತ್ರಜ್ಞಾನ ಅಭಿವೃದ್ಧಿ ಹೆಸರಲ್ಲಿ ಎಲ್ಲವನ್ನೂ ಕಂಪ್ಯೂಟರ್ ಕೈಗೆ ಕೊಡುತ್ತಿದ್ದಾನೆ. ಅದರಲ್ಲೂ ಕಂಪ್ಯೂಟರ್‌ನ್ನೂ ಮೀರಿಸಿದ 'ಆರ್ಟಿಫಿಷಿಯಲ್ ಇಂಟಲಿಜೆನ್ಸ್' ಮುಂದೆ ಮನುಷ್ಯನನ್ನೂ ಮೀರಿಸುವ ಬಗ್ಗೆ ಭಯ ಶುರುವಾಗಿದೆ. ಅಕಸ್ಮಾತ್ ಈ ಘಟನೆಗಳು ನಡೆದರೆ ಮನುಷ್ಯರ ವಿನಾಶ ಗ್ಯಾರಂಟಿ. ಮನುಷ್ಯರ ಜಾಗದಲ್ಲಿ 'ಆರ್ಟಿಫಿಷಿಯಲ್ ಇಂಟಲಿಜೆನ್ಸ್' ಬಂದು ಕೂರುವ ಭಯ ಕೂಡ ಇದ್ದೇ ಇದೆ. ಹೀಗಾಗಿ ಎಲ್ಲವನ್ನೂ ಪರಿಶೀಲಿಸಲು ಈಗಾಗಲೇ ಒತ್ತಾಯ ಕೇಳಿಬರುತ್ತಿದೆ. ಈ ಬಗ್ಗೆ ಜಾಗತಿಕವಾಗಿ ದೊಡ್ಡ ಚರ್ಚೆ ನಡೆಯುತ್ತಿದೆ. ಆದರೂ ಮುಂದುವರಿದ ದೇಶಗಳಲ್ಲಿ ಈಗ 'ಆರ್ಟಿಫಿಷಿಯಲ್ ಇಂಟಲಿಜೆನ್ಸ್' ಹವಾ.
ಇದನ್ನೆಲ್ಲಾ ನೋಡುತ್ತಿದ್ದರೆ ಭವಿಷ್ಯದಲ್ಲಿ ಮನುಷ್ಯ ಕೆಲಸ ಕಳೆದುಕೊಳ್ಳುವ ಪರಿಸ್ಥಿತಯೂ ನಿರ್ಮಾಣವಾಗುತ್ತದೆ ಎಂಬ ಆರೋಪವಿದೆ. ಹೇಗೆಂದರೆ ಮನುಷ್ಯರು ಮಾಡಬೇಕಿದ್ದ ಎಲ್ಲ ರೀತಿ ಕೆಲಸವನ್ನೂ 'ಆರ್ಟಿಫಿಷಿಯಲ್ ಇಂಟಲಿಜೆನ್ಸ್' ಮಾಡಬಲ್ಲದು. ಇದರಿಂದ ಸಮಯ ಹಾಗೂ ಹಣ ಎರಡೂ ಉಳಿಯಲಿದೆ. ಇದೇ ಕಾರಣಕ್ಕೆ ಬಹುತೇಕ ಕಡೆಗಳಲ್ಲಿ 'ಕೃತಕ ಬುದ್ಧಿಮತ್ತೆ' ಅಳವಡಿಸಿಕೊಂಡ ಹಿನ್ನೆಲೆ ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ 'ಕೃತಕ ಬುದ್ಧಿಮತ್ತೆ'ಯನ್ನ ಮತ್ತಷ್ಟು ತೀಕ್ಷ್ಣವಾಗಿ ಬಳಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಭವಿಷ್ಯದಲ್ಲಿ ಇದೆಲ್ಲಾ ಯಾವ ರೀತಿ ಪರಿಣಾಮ ಬೀರುತ್ತೆ ಅಂತಾ ಕಾದು ನೋಡಬೇಕಿದೆ.












Click it and Unblock the Notifications