ನಮ್ಮ ನೆಲೆ ಮೇಲೆ ಭಾರತ ದಾಳಿ ಮಾಡಿದ್ದು ಸತ್ಯ: ಜೈಷ್ ಉಗ್ರ ಮಸೂದ್
ಇಸ್ಲಾಮಾಬಾದ್, ಫೆಬ್ರವರಿ 27: ಭಾರತವು ಪಾಕಿಸ್ತಾನದ ಉಗ್ರನೆಲೆಯ ಮೇಲೆ ದಾಳಿ ಮಾಡಿದ್ದೇ ಸುಳ್ಳು ಎನ್ನುತ್ತರುವ ಪಾಕಿಸ್ತಾನಕ್ಕೆ ಮುಖಭಂಗವಾಗುವಂಥ ಹೇಳಿಕೆಯನ್ನು ಸ್ವತಃ ಜೈಷ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ, ಮೋಸ್ಟ್ ವಾಂಟೆಡ್ ಉಗ್ರ ಮೌಲಾನಾ ಮಸೂದ್ ಅಝರ್ ನೀಡಿದ್ದಾನೆ.
"ಭಾರತ ನಮ್ಮ ಕ್ಯಾಂಪ್ ಗಳ ಮೇಲೆ ಮಂಗಳವಾರ ಬೆಳಗ್ಗಿನ ಜಾವ ದಾಳಿ ನಡೆಸಿದ್ದು ನಿಜ" ಎಂದು ಸ್ವತಃ ಮಸೂದ್ ಒಪ್ಪಿಕೊಂಡಿದ್ದಾನೆ. 'ದಾಳಿ ನಡೆದಿದ್ದು ಸತ್ಯ, ಆದರೆ ಅದರಿಂದ ಯಾವುದೇ ಹಾನಿಯಾಗಿಲ್ಲ. ನಮ್ಮ ನೆಲೆಯ ಯಾರಿಗೂ ಯಾವುದೇ ತೊಂದರೆಯಾಗಿಲ್ಲ' ಎಂದು ಮಸೂದ್ ಹೇಳಿದ್ದಾನೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಜೈಷ್ ಇ ಮೊಹಮ್ಮದ್ ಉಗ್ರರ ಹತ್ಯೆಯಾಗಿದ್ದು ನಿಜವೇ?
ಈ ದಾಳಿಯಲ್ಲಿ ಜೈಷ್ ಇ ಮೊಹಮ್ಮದ್ ನ ನೂರಾರು ಉಗ್ರರ ಹತ್ಯೆಯಾಗಿದೆ ಎನ್ನಲಾಗಿದ್ದು, ಇದುವರೆಗೂ ಈ ಕುರಿತು ನಿಖರ ಮಾಹಿತಿಲಭ್ಯವಾಗಿಲ್ಲ. ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲ್, 'ಹಲವು ಉಗ್ರರು ಸತ್ತಿರಬಹುದು ಎಂದು ಅಂದಾಜಿಸಲಾಗಿದೆ' ಎಂದಿದ್ದರೇ ವಿನಃ ಇಂತಿಷ್ಟು ಎಂದು ನಿಖರ ಸಂಖ್ಯೆಯನ್ನಂತೂ ಹೇಳಿಲ್ಲ.

ಮೋಸ್ಟ್ ವಾಂಟೆಡ್ ಉಗ್ರರು ಬಲಿ
ಈ ದಾಳಿಯಲ್ಲಿ 300 ಉಗ್ರರನ್ನು ಗುರಿಯಾಗಿಸಲಾಗಿತ್ತು ಮತ್ತು ಅವರಲ್ಲಿ ಮೌಲಾನಾ ಅಮ್ಮರ್, ಮೌಲಾನಾ ತಲ್ಹಾ ಸೈಫ್, ಮುಫ್ತಿ ಅಝರ್ ಖಾನ್ ಕಾಶ್ಮೀರಿ, ಇಬ್ರಾಹಿಂ ಅಝರ್ ಮುಂತಾದ ಮೋಸ್ಟ್ ವಾಂಟೆಡ್ ಉಗ್ರರೂ ಇದ್ದರು ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಆದರೆ ಅವರೆಲ್ಲರೂ ದಾಳಿಯಲ್ಲಿ ಮೃತರಾದರೆ ಎಂಬ ಗ್ಗೆ ವರದಿಯಲ್ಲಿ ಸ್ಪಷ್ಟನೆ ಇಲ್ಲ.

ಭಯಾನಕ ಉಗ್ರದಾಳಿಯ ಹೊಂಚುಹಾಕಿದ್ದ ಜೈಷ್
ಜೈಷ್ ಉಗ್ರ ಸಂಘಟನೆ ಮತ್ತೊಂದು ಭಯಾನಕ ದಾಳಿಗೆ ಹೊಂಚು ಹಾಕಿತ್ತು. ಈ ವಿಷಯ ಭಾರತೀಯ ಗುಪ್ತಚರ ಇಲಾಖೆಗೆ ತಿಳಿಸದ ಕಾರಣ, ಸ್ವರಕ್ಷಣೆಗಾಗಿ ಉಗ್ರನೆಲೆ ಮೇಲೆ ದಾಳಿ ನಡೆಸಲಾಯಿತು ಎಂದು ಭಾರತ ಸಮಜಾಯಿಷಿ ನೀಡಿದೆ.

ಪ್ರತೀಕಾರ ತೀರಿಸಿಕೊಂಡ ಭಾರತ
ಫೆಬ್ರವರಿ 14 ರಂದು ಪುಲ್ವಾಮದಲ್ಲಿ ಭಾರತದ ಸಿಆರ್ ಪಿಎಫ್ ಯೋಧರ ವಾಹನದ ಮೇಲೆ ಜೈಷ್ ಸಂಘಟನೆಯ ಉಗ್ರ ಆದಿಲ್ ದಾರ್ ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ನಲವತ್ತಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತೀಕಾರ ಎಂಬಂತೆ ಭಾರತವೇ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಅಲ್ಲಿನ ಜೈಷ್ ಉಗ್ರನೆಲೆಯನ್ನು ಧ್ವಂಸಗೊಳಿಸಿದ್ದು, ಮುನ್ನೂರಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಲಾಗಿರಬಹದು ಎಂದು ಅಂದಾಜಿಸಲಾಗಿದೆ.












Click it and Unblock the Notifications