‘ದೊಡ್ಡಣ್ಣ’ ಅಮೆರಿಕದಲ್ಲೂ ಎಲೆಕ್ಷನ್ ಹೀಟ್: ಟ್ರಂಪ್ & ಬೈಡನ್ ರಣಕಾಳಗ ಫಿಕ್ಸ್!
ಅಮೆರಿಕ ಅಂದ್ರೆ ಜಾಗತಿಕ ಮಟ್ಟದಲ್ಲಿ ಒಂದು ದೊಡ್ಡ ಹೆಸರು ಇದೆ. ಅಲ್ಲದೆ ಪ್ರಪಂಚದ ಆರ್ಥಿಕತೆ ಒಂದು ತೂಕವಾದರೆ, ಬರೀ ಅಮೆರಿಕದ ಆರ್ಥಿಕತೆಯ ತೂಕವೇ ಇನ್ನೊಂದ್ಕಡೆ. ಈ ಕಾರಣಕ್ಕೆ ಅಮೆರಿಕ ಜಗತ್ತಿನ ಮೇಲೆ ಸದಾ ತನ್ನ ಹಿಡಿತವನ್ನು ಹೊಂದಲು, ಪ್ರಯತ್ನ ಮಾಡುತ್ತಲೇ ಇರುತ್ತದೆ. ಇಂತಿಪ್ಪ ದೊಡ್ಡಣ್ಣ ಅಮೆರಿಕದಲ್ಲಿ ಇದೀಗ ಭಾರತದ ರೀತಿಯೇ ಲೋಕಸಭೆ ಚುನಾವಣೆ ನಡೆಯುತ್ತಿದೆ!
ಹೌದು ಅಮೆರಿಕದಲ್ಲಿ 2020ರಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಅಮೆರಿಕ ಕಾನೂನು ಹೇಳುವಂತೆ ಅಲ್ಲಿನ ಅಧ್ಯಕ್ಷರ ಅಧಿಕಾರದ ಅವಧಿ 4 ವರ್ಷ. ಹೀಗಾಗಿ 4 ವರ್ಷಗಳ ಬಳಿಕ, ಇದೇ ವರ್ಷ ಅಮೆರಿಕದಲ್ಲಿ ಚುನಾವಣೆ ನಡೆಯುತ್ತಿದೆ. ನವೆಂಬರ್ ತಿಂಗಳಲ್ಲಿ ಅಮೆರಿಕದ ಚುನಾವಣೆ ರಿಸಲ್ಟ್ ಕೂಡ ಹೊರಬೀಳಲಿದೆ. ಪರಿಸ್ಥಿತಿ ಹೀಗಿದ್ದಾಗ ಈ ಬಾರಿ ಕೂಡ ಅಲ್ಲಿ, ಜೋ ಬೈಡನ್ & ಡೊನಾಲ್ಡ್ ಟ್ರಂಪ್ ನಡುವೆ ರಣಕಾಳಗ ನಡೆಯುವುದು ಬಹುತೇಕ ಫಿಕ್ಸ್ ಆಗಿದೆ. ಒಂದು ಕಡೆ ರಿಪಬ್ಲಿಕನ್ ಪಕ್ಷದಿಂದ ಟ್ರಂಪ್ ಆಯ್ಕೆಯಾಗಿ ಚುನಾವಣೆಯ ಅಖಾಡ ಪ್ರವೇಶ ಮಾಡಿದ್ದರೆ, ಇನ್ನೊಂದ್ಕಡೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಜೋ ಬೈಡನ್ ಅವರು ಆಯ್ಕೆ ಆಗಿದ್ದಾರೆ.

ಟ್ರಂಪ್ & ಬೈಡನ್ ರಣಕಾಳಗ ಫಿಕ್ಸ್!
ಅಮೆರಿಕ ಅಧ್ಯಕ್ಷ ಜೋ ಬೈಡನ್ & ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ, ಪ್ರಾಥಮಿಕ ಹಂತದ ಚುನಾವಣೆಗಳಲ್ಲಿ ಅಂದ್ರೆ ರಾಜ್ಯಗಳಲ್ಲಿ ಜಯ ಗಳಿಸಿದ್ದಾರೆ. ಈ ಮೂಲಕ ಇಬ್ಬರೂ ತಮ್ಮ ತಮ್ಮ ಪಕ್ಷದ ಪ್ರತಿಸ್ಫರ್ಧಿಗಳನ್ನು ಎದುರಿಸಿ ಗೆದ್ದಿದ್ದಾರೆ. ಇದೀಗ 2024ರ ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಗು, ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳಾಗಿ ಫೈನಲ್ ಕೂಡ ಆಗಿದ್ದಾರೆ. ಈ ನಡುವೆ ಇದೀಗ ಅಧಿಕೃತ ಘೋಷಣೆ ಒಂದೇ ಬಾಕಿ ಇದ್ದು ಕದನ ಕುತೂಹಲ ಕೆರಳಿದೆ. ಕಳೆದ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್, ಇದೇ ಬೈಡನ್ ವಿರುದ್ಧ ಹೀನಾಯ ಸೋಲು ಕಂಡಿದ್ದರು. ಇದೀಗ ಹಳೇ ಸೇಡಿಗೆ ಸೇಡು ತೀರಿಕೊಳ್ಳಲು ಡೊನಾಲ್ಡ್ ಟ್ರಂಪ್ ತೊಡೆತಟ್ಟಿದ್ದಾರೆ.
ಪಕ್ಷದ ಕಡೆಯಿಂದಲೂ ಭರ್ಜರಿ ಬೆಂಬಲ
ಇನ್ನು ಅಮೆರಿಕದ ವಾಷಿಂಗ್ಟನ್, ಜಾರ್ಜಿಯಾ, ಮಿಸಿಸಿಪ್ಪಿ ರಾಜ್ಯಗಳ ಫಲಿತಾಂಶ ಹೊರಬಿದ್ದ ನಂತರ ಬೈಡನ್ & ಟ್ರಂಪ್ ನಡುವಿನ ಫೈಟ್ ಪಕ್ಕಾ ಆಗಿದೆ. ಡೆಮಾಕ್ರಟಿಕ್ ಪಕ್ಷದ ಬೈಡನ್ ಆಗಲಿ ಅಥವಾ ರಿಪಬ್ಲಿಕನ್ ಪಕ್ಷದ ಟ್ರಂಪ್ ಆಗಲಿ ಪ್ರಾಥಮಿಕ ಚುನಾವಣೆಗಳಲ್ಲಿ ವಿರೋಧವನ್ನ ಎದುರಿಸಿಲ್ಲ ಎಂಬುದು ಇಲ್ಲಿನ ವಿಶೇಷ. ಹಾಗೇ ಎರಡೂ ಪಕ್ಷಗಳ ನಾಯಕರು ಅಧ್ಯಕ್ಷೀಯ ಚುನಾವಣೆಗೆ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಯಾಗಿ ನಾಮನಿರ್ದೇಶನ ಆಗಲು ಅಗತ್ಯ ಇರುವ ಪ್ರತಿನಿಧಿಗಳ ಬಹುಮತ ಪಡೆದಿದ್ದಾರೆ ಎನ್ನಲಾಗಿದೆ.
ಇತಿಹಾಸ ನಿರ್ಮಿಸಿದ ಟ್ರಂಪ್ & ಬೈಡನ್
ಟ್ರಂಪ್ ಈ ಮೂಲಕ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡುತ್ತಿದ್ದಾರೆ. ಟ್ರಂಪ್ ಈಗ ಸತತ 3ನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ರಿಪಬ್ಲಿಕನ್ ಪಕ್ಷವನ್ನ ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ ಬೈಡನ್ ವಿರುದ್ಧವೇ ಈಗ ಟ್ರಂಪ್ ತೊಡೆತಟ್ಟಲಿದ್ದಾರೆ. 1956ರ ಬಳಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡೂ ಪಕ್ಷಗಳ ಅದೇ ಅಭ್ಯರ್ಥಿಗಳು 2ನೇ ಬಾರಿ ಮುಖಾಮುಖಿ ಆಗುತ್ತಿರುವುದು ಇದೆ ಮೊದಲು ಎನ್ನಬಹುದು. ಈ ಹಿಂದೆ 1956ರಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಂದಿನ ಅಧ್ಯಕ್ಷ ಡ್ವೈಟ್ ಡಿ ಐಸೆನ್ ಹೋವರ್ & ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಅಡ್ಲೈ ಸ್ಟೀವನ್‌ಸನ್ 2ನೇ ಬಾರಿಗೆ ಚುನಾವಣೆ ಎದುರಿಸಿದ್ದರು.

ಟ್ರಂಪ್ ಗೆಲುವು ಗ್ಯಾರಂಟಿ?
ಅಮೆರಿಕದಲ್ಲಿ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆ ಆಗುವುದು ಬಹುತೇಕ ಗ್ಯಾರಂಟಿ. ಅದರಲ್ಲೂ, ಅಮೆರಿಕದ ಬಹುತೇಕ ಮತದಾರರು ಟ್ರಂಪ್ ಅವರನ್ನೇ ಬೆಂಬಲಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಈ ನಡುವೆ ಮತ್ತೊಂದು ವಿಚಾರ ಕೂಡ ಸದ್ದು ಮಾಡುತ್ತಿದ್ದು, ಬೈಡನ್ ಅವರಿಗೆ ಸ್ವಪಕ್ಷೀಯ ನಾಯಕರಿಂದ ಸರಿಯಾಗಿ ಬೆಂಬಲ ಸಿಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಹೀಗಾಗಿ ಇದೀಗ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲವು ದಾಖಲಿಸುವುದು ಬಹುತೇಕ ಗ್ಯಾರಂಟಿ ಆಗಿದ್ದು ಮತದಾರರ ಆದೇಶಕ್ಕಾಗಿ ಕಾಯಬೇಕಿದೆ.












Click it and Unblock the Notifications