Israel: ಇರಾನ್ ವಿರುದ್ಧ ಗುಡುಗಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭೀಕರ ದಾಳಿಯ ಎಚ್ಚರಿಕೆ
ಇರಾನ್ ಮತ್ತು ಇಸ್ರೇಲ್ ನಡುವಿನ ದ್ವೇಷ ಕಡಿಮೆ ಆಗುತ್ತಿಲ್ಲ, ಕೆಲವು ದಿನಗಳ ಹಿಂದೆ ಇರಾನ್ ದೇಶ ಹೊತ್ತಿ ಉರಿಯುವ ಸಮಯದಲ್ಲಿ ಎರಡೂ ದೇಶಗಳ ನಡುವೆ ಮತ್ತೊಂದು ಯುದ್ಧ ನಡೆಯುವ ಬಗ್ಗೆ ಆತಂಕ ಆವರಿಸಿತ್ತು. ಆ ನಂತರ ಟ್ರಂಪ್ ಅವರು ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವುದಿಲ್ಲ ಎಂದ ನಂತರ ಪರಿಸ್ಥಿತಿ ಶಾಂತವಾಗಿತ್ತು. ಆದರೆ ಈಗ ದಿಢೀರ್ ಇರಾನ್ ಮತ್ತು ಇಸ್ರೇಲ್ ತಿಕ್ಕಾಟ ಇನ್ನಷ್ಟು ಜೋರಾಗಿದೆ. ಈ ಬಗ್ಗೆ ಖುದ್ದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿರುವ ಹೇಳಿಕೆಯು ತಲ್ಲಣ ಎಬ್ಬಿಸಿದ್ದು, ಇರಾನ್‌ಗೆ ಭೀಕರ ದಾಳಿಯ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಪರಮಾಣು ಕಾರ್ಯಕ್ರಮಗಳ ವಿಚಾರ & ಮಧ್ಯಪ್ರಾಚ್ಯ ಭಾಗದಲ್ಲಿ ಹೆಚ್ಚುತ್ತಿರುವ ಅಶಾಂತಿ ಹಿನ್ನೆಲೆ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್‌ಗೆ ನೇರ ವಾರ್ನಿಂಗ್ ಕೊಟ್ಟಿರುವಂತೆ, ಪ್ರಾದೇಶಿಕ ಉದ್ವಿಗ್ನತೆಯ ಕಾರಣಕ್ಕೆ ತೆಹ್ರಾನ್ ಏನಾದರೂ ಇಸ್ರೇಲ್ ಮೇಲೆ ದಾಳಿ ಮಾಡಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತಿದೆ ಎಂದಿದ್ದಾರೆ. ಅಲ್ಲದೆ ಈ ಹಿಂದೆ ಎಂದೂ ಕಂಡಿರದ ಅಭೂತಪೂರ್ವ ಶಕ್ತಿಯ ದಾಳಿ ಖಚಿತ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಳೆದ ವರ್ಷ ಇರಾನ್ ಮತ್ತು ಇಸ್ರೇಲ್ ನಡುವೆ ಭಾರಿ ದೊಡ್ಡ ಯುದ್ಧ ನಡೆದಿತ್ತು, ಹಾಗೇ ಈ ಯುದ್ಧ 3ನೇ ಮಹಾಯುದ್ಧದ ಆತಂಕವನ್ನೂ ಮೂಡಿಸಿತ್ತು. ಎಲ್ಲಾ ತಣ್ಣಗಾಯ್ತು ಎನ್ನುವಾಗಲೇ ಮತ್ತೆ ತಿಕ್ಕಾಟ ಹೆಚ್ಚುತ್ತಿದ್ದು, ಮಧ್ಯಪ್ರಾಚ್ಯ ಮತ್ತೆ ಹಿಂಸೆಯ ಕೂಪಕ್ಕೆ ಜಾರುವ ಮುನ್ಸೂಚನೆ ಸಿಗುತ್ತಿದೆ.

ಇಸ್ರೇಲ್ ಎಚ್ಚರಿಕೆಗೆ ಇರಾನ್ ಸೈಲೆಂಟ್?
ಇರಾನ್ ನೆಲದಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರ ಹಿಡಿತಕ್ಕೆ ಸಿಕ್ಕ ನಂತರ ಇಸ್ರೇಲ್ ಸಂಸತ್ ಉದ್ದೇಶಿಸಿ ಮಾತನಾಡಿರುವ ಬೆಂಜಮಿನ್ ನೆತನ್ಯಾಹು ಅವರು, ಇರಾನ್ ಈ ವಿಚಾರದಲ್ಲಿ ತಪ್ಪು ಮಾಡಿ ಇಸ್ರೇಲ್ ಮೇಲೆ ದಾಳಿ ಮಾಡಿದರೆ ಎಂದೂ ಅನುಭವಿಸದ ರೀತಿಯ ದಾಳಿ ಮಾಡುತ್ತೇವೆ ಎಂದಿದ್ದಾರೆ. ಈಗಾಗಲೇ ಧಗಧಗನೆ ಹೊತ್ತಿ ಉರಿಯುತ್ತಿರುವ ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೊಂದು ಯುದ್ಧದ ಕಾರ್ಮೋಡ ಇದೀಗ ಆವರಿಸುತ್ತಿದೆ. ಹಾಗೇ ಇರಾನ್ ವಿಚಾರವನ್ನು ಇಸ್ರೇಲ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇರಾನ್ ಮತ್ತೆ ತನ್ನ ಹಿಂದಿನ ಶಕ್ತಿಗೆ ಮರಳಲು ಸಾಧ್ಯವಿಲ್ಲ ಎಂದು ಇಸ್ರೇಲ್ ನಾಯಕರೊಬ್ಬರು ಹೇಳಿದ್ದಾರೆ. ಹೀಗೆ ಇರಾನ್ ಮೇಲೆ ಕಣ್ಣಿಟ್ಟಿರುವ ಇಸ್ರೇಲ್, ತನ್ನ ಮೇಲೆ ದಾಳಿ ಮಾಡಿದರೆ ಅದಕ್ಕೆ ತಕ್ಕ ಶಾಸ್ತಿ ಗ್ಯಾರಂಟಿ ಎಂಬುದನ್ನ ಸಾರಿ ಸಾರಿ ಹೇಳುತ್ತಿದೆ.
ಇರಾನ್ ಪ್ರತಿಭಟನೆಯಲ್ಲಿ ಭಾರಿ ಹಿಂಸಾಚಾರ
ಮತ್ತೊಂದು ಕಡೆ ಇರಾನ್ ದೇಶದಲ್ಲಿ ಭುಗಿಲೆದ್ದಿದ್ದ ಪ್ರತಿಭಟನೆಗಳು ಈಗ ಹಿಡಿತಕ್ಕೆ ಸಿಕ್ಕಿವೆ, ಆದರೆ ಅಲ್ಲಿ ನಡೆದಿರುವ ಹಿಂಸಾಚಾರ ಮಾತ್ರ ಇತಿಹಾಸದ ಪುಟಗಳಲ್ಲಿ ಅಳಿಸದೆ ಹಾಗೇ ಉಳಿದುಬಿಡುವುದು ಖಚಿತ. ಏಕೆಂದರೆ ಇರಾನ್ ದೇಶದಲ್ಲಿ ಭುಗಿಲೆದ್ದ ಪ್ರತಿಭಟನೆ ಹಾಗೂ ಹಿಂಸಾಚಾರದಲ್ಲಿ ಒಟ್ಟು 4,029 ಜನ ಬಲಿಯಾಗಿದ್ದಾರೆ ಎಂಬುದು ಈವರೆಗಿನ ಅಂಕಿ ಅಂಶ. ಮತ್ತೊಂದು ಕಡೆ 26,000ಕ್ಕೂ ಹೆಚ್ಚು ಜನರ ಬಂಧನ ಆಗಿದ್ದು, ಅವರನ್ನು ಹಿಂಸಿಸಲಾಗುತ್ತಿದೆ ಎಂದು ಆರೋಪಿಸುತ್ತಿವೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು. ಇಷ್ಟೆಲ್ಲಾ ಘಟಿಸಿದ ನಂತರ ಇರಾನ್ ವಿರುದ್ಧ ಈಗ ಇಸ್ರೇಲ್ ಗುಡುಗಿದ್ದು, ತನ್ನ ಮೇಲೆ ದಾಳಿ ಮಾಡಿದರೆ ಅದಕ್ಕೆ ತಕ್ಕ ತಿರುಗೇಟು ಖಚಿತ ಎಂದಿದೆ.












Click it and Unblock the Notifications