Israel War: ಗಾಜಾದಲ್ಲಿ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ 500 ಮಂದಿ ಸಾವು: ಹಮಾಸ್ ಕೈವಾಡ ಎಂದ ಇಸ್ರೇಲ್
ಇಸ್ರೇಲ್ ಹಮಾಸ್ ನಡುವಿನ ಸಂಘರ್ಷ ತೀವ್ರ ವಿಕೋಪಕ್ಕೆ ತಿರುಗಿದೆ. ಹಮಾಸ್ ಉಗ್ರರನ್ನು ನಿರ್ನಾಮ ಮಾಡಲು ಸಂಕಲ್ಪ ಮಾಡಿರುವ ಇಸ್ರೇಲ್ ಗಾಜಾದಲ್ಲಿ ದಾಳಿಯನ್ನು ತೀವ್ರಗೊಳಿಸಿದೆ. ಗಾಜಾ ಪಟ್ಟಿಯಲ್ಲಿರುವ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ ನಡೆದಿದ್ದು ಕನಿಷ್ಠ 500 ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಸೇನೆ ಈ ದಾಳಿ ಮಾಡಿದೆ ಎಂದು ಪ್ಯಾಲೇಸ್ಟಿನ್ ಪ್ರದೇಶದ ಅಧಿಕಾರಿಗಳು ಹೇಳಿದ್ದರೆ, ಇಸ್ರೇಲ್ ಸೇನೆ ಮಾತ್ರ ಇದು ಹಮಾಸ್ ಉಗ್ರರ ಕೃತ್ಯ ಎಂದು ವಾದಿಸುತ್ತಿದೆ.
ಆಸ್ಪತ್ರೆ ಮೇಲೆ ಬಾಂಬ್ ದಾಳಿ ಮಾಡಿರುವುದಕ್ಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆಕ್ರೋಶ ಹುಟ್ಟುಹಾಕಿದೆ. ಅಲ್ ಜಜೀರಾ ಹಂಚಿಕೊಂಡಿರುವ ದೃಶ್ಯಗಳಲ್ಲಿ ವೈದ್ಯರು ಮತ್ತು ನಾಗರಿಕರು ಬಿಳಿ ಚೀಲಗಳು, ಅಥವಾ ಹೊದಿಕೆಗಳಲ್ಲಿ ಮೃತ ದೇಹಗಳ್ನು ಪಡೆದುಕೊಳ್ಳುತ್ತಿರುವುದನ್ನು ನೋಡಬಹುದು. ಆಸ್ಪತ್ರೆಯ ಅಂಗಳದಲ್ಲಿ ರಕ್ತದ ಕಲೆಗಳು ಮತ್ತು ಸುಟ್ಟ ಕಾರುಗಳು ಗೋಚರಿಸಿದವು.

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಇಸ್ರೇಲ್‌ಗೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಈ ದಾಳಿ ನಡೆದಿದೆ. ಹಮಾಸ್ ವಿರುದ್ದದ ಯುದ್ಧವು ಪ್ರಾದೇಶಿಕ ಸಂಘರ್ಷವಾಗಿ ಬದಲಾಗುವುದನ್ನು ತಪ್ಪಿಸಲು ಯುಎಸ್ ಪ್ರಯತ್ನ ಮಾಡುವುದಾಗಿ ಹೇಳಿತ್ತು.
RAW FOOTAGE: A rocket aimed at Israel misfired and exploded at 18:59—the same moment a hospital was hit in Gaza. pic.twitter.com/Kf5xJazSap
— Israel Defense Forces (@IDF) October 17, 2023
ಸಾವಿರಾರು ಮಂದಿ ಸಾವು
ಅಕ್ಟೋಬರ್ 7ರಿಂದ ನಡೆಯುತ್ತಿರುವ ಮಾರಣಾಂತಿಕ ಸಂಘರ್ಷದಲ್ಲಿ ಪ್ಯಾಲೆಸ್ಟಿನ್, ಇಸ್ರೇಲ್‌ನ ಸಾವಿರಾರು ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ. ಹಮಾಸ್ ಉಗ್ರರ ಆಕ್ರಮಣಕ್ಕೆ ಬದಲಾಗಿ ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ಮಾಡಿದ್ದು, ವಿನಾಶಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿದೆ.
10 ದಿನಗಳಿಂದ ನಡೆಯುತ್ತಿರುವ ಬಾಂಬ್ ದಾಳಿಯಿಂದಾಗಿ ಸೆಂಟ್ರಲ್ ಗಾಜಾದ ಅಹ್ಲಿ ಅರಬ್ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದ 500 ರಿಂದ 600 ಜನ ಇಸ್ರೇಲ್ ಸೈನ್ಯದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆಳ್ವಿಕೆಯ ಆರೋಗ್ಯ ಸಚಿವಾಲಯ ತಿಳಿಸಿದೆ.
ನೂರಾರು ಗಾಯಾಳುಗಳು ಇನ್ನೂ ಅವಶೇಷಗಳಡಿಯಲ್ಲಿದ್ದಾರೆ ಎಂದು ಹೇಳಿದ್ದು, ಇದು ಯುದ್ಧ ಅಪರಾಧ ಎಂದು ಕರೆದಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಘಟನೆಯನ್ನು ಖಂಡಿಸಿದೆ. ಜೋರ್ಡಾನ್‌ನಲ್ಲಿ ಘಟನೆಯನ್ನು ಖಂಡಿಸಿ ಇಸ್ರೇಲ್ ರಾಯಭಾರ ಕಚೇರಿ ಮೇಲೆ ದಾಳಿ ಮಾಡಲು ಪ್ರತಿಭಟನಾಕಾರರು ಪ್ರಯತ್ನಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ, ವಿಶ್ವಸಂಸ್ಥೆಯ ಏಜೆನ್ಸಿಯು ಪ್ಯಾಲೇಸ್ಟಿನಿಯನ್ ನಿರಾಶ್ರಿತರ ಕುಟುಂಬಗಳಿಗೆ ಆಶ್ರಯ ನೀಡುವ ಶಾಲೆಗಳಲ್ಲಿ ಒಂದು ಶಾಲೆ ಮೇಲೆ ಇಸ್ರೇಲ್ ಸೇನೆ ಬಾಂಬ್ ದಾಳಿ ಮಾಡಿದ್ದು ಆರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಗಾಜಾದಲ್ಲಿ ಇಸ್ರೇಲ್ ದಾಳಿಯಿಂದ ಇದುವರೆಗೆ 3000 ಜನ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲ್ ಗಾಜಾದಲ್ಲಿ ಪೂರ್ಣ ಪ್ರಮಾಣದ ನೆಲದ ಆಕ್ರಮಣಕ್ಕಾಗಿ ತಯಾರಿಗಾಗಿ ಗಾಜಾದ ಗಡಿಯಲ್ಲಿ ಹತ್ತಾರು ಸಾವಿರ ಸೈನಿಕರನ್ನು ನಿಯೋಜಿಸಿದೆ. ಗಾಜಾ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಿತ್ತು, ಗಾಜಾ ಪ್ರದೇಶಕ್ಕೆ ವಿದ್ಯುತ್, ಕುಡಿಯುವ ನೀರು, ಆಹಾರ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.












Click it and Unblock the Notifications