ರೊಚ್ಚಿಗೆದ್ದ ಇಸ್ರೇಲ್ ಸೇನೆ, ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆ!
ಹಮಾಸ್ ಮತ್ತು ಇಸ್ರೇಲ್ ನಡುವೆ ಹೊತ್ತಿರುವ ಬೆಂಕಿಗೆ ಮಧ್ಯಪ್ರಾಚ್ಯ ಹೊತ್ತಿ ಉರಿದಿದ್ದು, ಎಲ್ಲೆಲ್ಲೂ ಸಾವು & ನೋವಿನ ನರಳಾಟ ಕೇಳುತ್ತಿದೆ. ಇಷ್ಟಾದರೂ ಇಸ್ರೇಲ್ ಸೇನೆ ಸುಮ್ಮನೆ ಇರದೆ ಮತ್ತೆ ಮತ್ತೆ ದಾಳಿ ನಡೆಸುತ್ತಿರುವ ಆರೋಪ ಕೇಳಿಬರುತ್ತಿದೆ. ಈ ಬೆಳವಣಿಗೆ ಇದೀಗ ಸ್ವತಃ ಅಮೆರಿಕಗೆ ಕೂಡ ತಲೆನೋವು ತರಿಸಿರುವ ಸಮಯದಲ್ಲಿ, ಇಸ್ರೇಲ್ ನಡೆಸಿದ ಬಾಂಬ್ ದಾಳಿಗೆ ಒಂದೇ ದಿನ ಸುಮಾರು 19 ಮಂದಿ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯದ ವೇಳೆ ಅಮೆರಿಕ ಈಗಾಗಲೇ ಇಸ್ರೇಲ್ ಪರವಾಗಿ ತನ್ನ ವೀಟೋ ಪವರ್ ಬಳಸಿದೆ. ಇದು ಸಾಕಷ್ಟು ಆಕ್ರೋಶಕ್ಕೆ ಕೂಡ ಕಾರಣವಾಗಿದೆ. ಈ ಸಮಯದಲ್ಲೇ ಇಸ್ರೇಲ್ ಬೇರೆ ತನ್ನ ದಾಳಿಯನ್ನ ಮತ್ತಷ್ಟು ಭೀಕರಗೊಳಿಸಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಅಧಿಕಾರಿಗಳು ಇಸ್ರೇಲ್‌ಗೆ ಓಡಿದ್ದು, ಇಸ್ರೇಲ್ ನಾಯಕರನ್ನು ತಣ್ಣಗೆ ಮಾಡುವ ಪ್ರಯತ್ನ ಸಾಗಿದೆ. ಸಾಲು ಸಾಲು ಸಭೆಯನ್ನ ಆಯೋಜನೆ ಮಾಡಿರುವ ಅಮೆರಿಕದ ಅಧಿಕಾರಿಗಳು, ಇಸ್ರೇಲ್ ಪ್ರಧಾನಿ ಜೊತೆ ಚರ್ಚೆಗೆ ಮುಂದಾಗಿದ್ದಾರೆ.

ದಯವಿಟ್ಟು ಸುಮ್ಮನಿರಿ ಅಂತಿದೆ ಅಮೆರಿಕ!
ಹೌದು, ಈಗಿನ ಪರಿಸ್ಥಿತಿಯಲ್ಲಿ ಅಮೆರಿಕಗೆ ಇಸ್ರೇಲ್ ಪರಿಸ್ಥಿತಿ ಬಿಸಿ ತುಪ್ಪವಾಗಿದೆ. ಹೀಗಾಗಿ ಒಂದು ಕಡೆ ಇಸ್ರೇಲ್ ಸೇನೆಯನ್ನ ಸುಮ್ಮನೆ ಇರಿಸಬೇಕು, ಮತ್ತೊಂದು ಕಡೆ ಬೆಂಬಲವನ್ನ ಕೂಡ ಕೊಡಬೇಕಿದೆ. ಇದೇ ಕಾರಣಕ್ಕೆ, ಪ್ಯಾಲೆಸ್ತೀನ್ ಮೇಲೆ ದಾಳಿ ಮಾಡಬೇಡಿ ಅಂತಲೇ ಅಮೆರಿಕ ಹೇಳುತ್ತಿದೆ. ಆದರೆ ಅಮೆರಿಕದ ಮಾತನ್ನು ಇಸ್ರೇಲ್ ಕೇಳುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಇಸ್ರೇಲ್‌ಗೆ ಮನವರಿಕೆ ಮಾಡಿಕೊಡಲು ಶ್ವೇತಭವನ ಉನ್ನತ ಸಲಹೆಗಾರ ಜೆರುಸಲೇಂಗೆ ಹೋಗಿ ಸಭೆ ನಿಗದಿ ಮಾಡಿದ್ದಾರಂತೆ.
ಸೈಲೆಂಟ್ ಪ್ಲೀಸ್.. ಸೈಲೆಂಟ್ ಪ್ಲೀಸ್..
ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಅವರ ಕ್ಯಾಬಿನೆಟ್ ಸಚಿವರ ಜೊತೆಯಲ್ಲೀಗ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ & ಇತರ ಉನ್ನತ ಅಧಿಕಾರಿಗಳು ಮಾತುಕತೆ ನಡೆಸುವರು ಅಂತ ಹೇಳಲಾಗಿದೆ. ಈ ಮೂಲಕ ಯುದ್ಧ ಮತ್ತು ಹಿಂಸಾಚಾರಕ್ಕೆ ಬ್ರೇಕ್ ಹಾಕುವ ಪ್ರಯತ್ನಗಳ ಸರಣಿಯನ್ನ ಅಮೆರಿಕ ಶುರು ಮಾಡಿದೆ. ಯಾಕಂದ್ರೆ ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಅಮೆರಿಕ ಒಂದು ರೀತಿಯ ನಿಲುವು ಹೊಂದಿದೆ. ಆದ್ರೆ ಇಸ್ರೇಲ್ ಮತ್ತು ಹಮಾಸ್ ಯುದ್ಧ ವಿಚಾರದಲ್ಲಿ ಬೇರೆ ನಿಲುವು ತೋರಿಸುತ್ತಿದೆ. ಹೀಗಾಗಿ ಭಾರಿ ಆಕ್ರೋಶ ಮೊಳಗಿದೆ.

ಇಸ್ರೇಲ್ ಸೈನಿಕರ ಸಾವು ಹೆಚ್ಚಳ?
ಹೀಗೆ ಇಸ್ರೇಲ್ ನಡೆಸುತ್ತಿರುವ ದಾಳಿಯ ಪರಿಣಾಮ ಗಾಜಾಪಟ್ಟಿ ಮಾತ್ರವಲ್ಲ, ಸ್ವತಃ ತನ್ನ ದೇಶದ ಸೈನಿಕರು ಕೂಡ ನಲುಗಿ ಹೋಗಿದ್ದಾರೆ. ಗಾಜಾದಲ್ಲಿ ಭೂ ದಾಳಿಯನ್ನ ನಡೆಸುತ್ತಿರುವ ಇಸ್ರೇಲ್ ಸೈನಿಕರು ಹಮಾಸ್ ದಾಳಿಗೆ ಬಲಿಯಾಗುತ್ತಿರುವುದು ಹೆಚ್ಚುತ್ತಿದೆ. ಹೀಗಾಗಿ ಯುದ್ಧವು ಶುರುವಾದ ಬಳಿಕ ಈವರೆಗೆ 115 ಮಂದಿ ಇಸ್ರೇಲ್ ಸೈನಿಕರು ಹತ್ಯೆಯಾಗಿದ್ದಾರೆ ಎನ್ನಲಾಗಿದೆ. ಎರಡೂ ಕಡೆ ಸೇರಿ ಸಾವಿನ ಸಂಖ್ಯೆ ಇನ್ನೇನು ಕೆಲವೇ ದಿನಗಳಲ್ಲಿ 20,000 ಗಡಿ ದಾಟುವ ಆತಂಕ ಕೂಡ ಮನೆಮಾಡಿದೆ.












Click it and Unblock the Notifications