ಗಾಜಾ ಪಟ್ಟಿಯಲ್ಲಿ ಮತ್ತಷ್ಟು ಕಠಿಣ ಕಾರ್ಯಾಚರಣೆಗೆ ಇಸ್ರೆಲ್ ಸೇನೆ ಸಿದ್ಧತೆ?
ಇಸ್ರೇಲ್ & ಗಾಜಾ ನಡುವೆ ಶಾಂತಿ ಮಾತುಕತೆ ನಡೆಸಿ ಪರಿಸ್ಥಿತಿ ಸರಿ ಮಾಡೋಣ, ಹಾಗೂ ಈ ಮೂಲಕ ಮಧ್ಯಪ್ರಾಚ್ಯ ಭಾಗದಲ್ಲಿ ತಲೆದೂರಿರುವ ಸಂಕಷ್ಟ ಸರಿ ಮಾಡೋಣ ಅಂತಾ ಇದೀಗ ಇಡೀ ಜಗತ್ತು ಪ್ರಯತ್ನ ಮಾಡುತ್ತಿದೆ. ಆದರೆ ಅದು ವರ್ಕೌಟ್ ಆಗುವಂತೆ ಕಾಣ್ತಾ ಇಲ್ಲ, ಯಾಕಂದ್ರೆ ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ ಇಸ್ರೇಲ್ ಸೇನೆ ಇದೀಗ ಗಾಜಾ ಉತ್ತರ ಭಾಗದಲ್ಲಿ ಭೀಕರ ಕಾರ್ಯಾಚರಣೆಗೆ ಸಿದ್ಧವಾಗಿರುವ ಮುನ್ಸೂಚನೆ ಸಿಗುತ್ತಿದೆ. ಹಾಗಿದ್ರೆ ಈ ಅನುಮಾನ ಕಾಡುತ್ತಿರುವುದು ಏಕೆ?
ಇಸ್ರೇಲ್ ಕಳೆದ 1 ವರ್ಷದಿಂದಲೂ ಗಾಜಾ ಪಟ್ಟಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಾ ಹಮಾಸ್ ಮುಖಂಡರಿಗೆ ಹುಡುಕಾಟ ನಡೆಸುತ್ತಿದೆ. ಹೀಗಿದ್ದರೂ ಬಹುತೇಕ ಹಮಾಸ್ ಲೀಡರ್ಸ್ ಎಸ್ಕೇಪ್ ಆಗುತ್ತಾ, ಜೀವಂತವಾಗಿ ಇದ್ದಾರೆ ಎಂಬುದು ಇಸ್ರೇಲ್ ಕೋಪಕ್ಕೆ ಕಾರಣ ಆಗಿದೆ. ಹೀಗಾಗಿಯೇ ಇದೀಗ ಹಮಾಸ್ ನಾಯಕರಿಗೆ ಪಾಠ ಕಲಿಸಲು ಇಸ್ರೇಲ್ ಮಿಲಿಟರಿ ಕಠಿಣವಾದ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಹಾಗಾದ್ರೆ ಏನದು ಇಸ್ರೇಲ್‌ನ ನಿರ್ಧಾರ? ಇಸ್ರೇಲ್‌ನ ಈ ನಿರ್ಧಾರದ ಪ್ರಕಾರ ಯುದ್ಧ ಬೇಗ ನಿಲ್ಲುತ್ತಾ? ಮುಂದೆ ಓದಿ.

ರೋಗಿಗಳನ್ನೂ ಶಿಫ್ಟ್ ಮಾಡಲು ಆದೇಶ?
ಅಂದಹಾಗೆ ಇದೀಗ ಗಾಜಾ ಪಟ್ಟಿ ಉತ್ತರ ಭಾಗವನ್ನು ಸಂಪೂರ್ಣವಾಗಿ ತೆರವು ಮಾಡುವಂತೆ ಇಸ್ರೇಲ್ ಸೇನೆ ಹೊಸ ಆದೇಶ ಹೊರಡಿಸಿದೆ ಎಂದು ಆರೋಪಿಸಲಾಗಿದೆ. ಈ ಪ್ರದೇಶದಲ್ಲಿನ ಆಸ್ಪತ್ರೆಗಳ ರೋಗಿಗಳಿಗೆ ಕೂಡ ಬೇರೆ ಕಡೆ ಶಿಫ್ಟ್ ಆಗಲು ಇದೀಗ ಇಸ್ರೇಲ್ ಆದೇಶ ನೀಡಿದೆ ಎನ್ನಲಾಗಿದ್ದು, ಹೊಸ ಸಂಚಲನ ಸೃಷ್ಟಿಯಾಗಿದೆ. ಆದರೆ ಇನ್ನೊಂದು ಕಡೆ ಹೀಗೆ ಜನರ ಸ್ಥಳಾಂತರ ಮಾಡಿ ಹಮಾಸ್ ನಾಯಕರನ್ನು ಹುಡುಕುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ರೆ ಇದೇ ಸಮಯದಲ್ಲಿ ಗಾಜಾ ನಿವಾಸಿಗಳಿಗೆ ಬೇರೆಯದ್ದೇ ಭಯ ಶುರುವಾಗಿದ್ದು, ಒಕ್ಕಲೆಬ್ಬಿಸುವ ತಂತ್ರ ನಡೆಯುತ್ತಿದೆಯಾ? ಎಂಬ ಅನುಮಾನ ಮೂಡಿದೆ.
ದಿನದಿಂದ ದಿನಕ್ಕೆ ಹಿಂಸೆ ಹೆಚ್ಚಾಯ್ತಾ?
ಒಟ್ನಲ್ಲಿ ಹಮಾಸ್ & ಇಸ್ರೇಲ್ ಸೇನೆ ನಡುವಿನ ಸಮರ ದಿನದಿಂದ ದಿನಕ್ಕೆ ರಕ್ತಮಯ ಆಗ್ತಿದೆ. ಒಂದು ಕಡೆ ವಿಶ್ವಸಂಸ್ಥೆ ಈ ಯುದ್ಧ ನಿಲ್ಲಿಸಲು ಪ್ರಯತ್ನ ಮುಂದುವರಿಸಿದೆ. ಅದೇ ಸಮಯಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಯುದ್ಧ ನಿಲ್ಲಿಸುವ ಪ್ರಯತ್ನಗಳು ಫಲ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಜಗತ್ತಿನಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಆದಷ್ಟು ಬೇಗ ಈ ಯುದ್ಧಕ್ಕೆ & ಘರ್ಷಣೆಗೆ ಬ್ರೇಕ್ ಬೀಳಲಿ ಎಂಬ ಆಗ್ರಹ ಕೇಳಿಬರುತ್ತಿದೆ.












Click it and Unblock the Notifications