ಶತ್ರು ಪಡೆಗೆ ಮತ್ತೆ ಆಘಾತ ನೀಡಿದ ಇಸ್ರೇಲ್ ಮಿಲಿಟರಿ!
ಲೆಬನಾನ್ ನೆಲದಲ್ಲಿ ಹಿಂಸಾಚಾರ ಮುಂದುವರಿದಿದೆ. ಈಗಾಗಲೇ ನೂರಾರು ಜನ ಜೀವವನ್ನ ಬಿಟ್ಟಿದ್ದು ಸಾವಿರಾರು ಜನರು ಆಸ್ಪತ್ರೆಗಳಲ್ಲಿ ನರಳುತ್ತಿದ್ದಾರೆ. ಹೀಗಿದ್ದರೂ ಇಸ್ರೇಲ್ ಮಾತ್ರ ತಣ್ಣಗೆ ಆಗಿಲ್ಲ. ಲೆಬನಾನ್ ದೇಶದಲ್ಲಿ ಅಡಗಿರುವ ತನ್ನ ಶತ್ರುಗಳ ಮೇಲೆ ದಾಳಿ ಮಾಡ್ತಿದೆ. ಹೀಗೆ ದಾಳಿ ಮಾಡುವ ಸಮಯದಲ್ಲೇ ಅಮಾಯಕರು ಕೂಡ ಇಸ್ರೇಲ್ ದಾಳಿಗೆ ಬಲಿಯಾಗಿ ಜೀವ ಬಿಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಇದ್ಯಾವುದಕ್ಕೂ ಕೇರ್ ಮಾಡದ ಇಸ್ರೇಲ್ ಸೇನೆ ಮಾತ್ರ ಭೀಕರ ದಾಳಿಯನ್ನು ಮುಂದುವರಿಸಿದೆ.
ಅಂದಹಾಗೆ ಇದೀಗ ಲೆಬನಾನ್ ದೇಶದಲ್ಲಿನ ಹಿಜ್ಬುಲ್ಲಾಗೆ ಸೇರಿದ್ದು ಎನ್ನಲಾದ 220 ಸ್ಥಳಗಳ ಮೇಲೆ ಇಸ್ರೇಲ್ ಸೇನೆ ದಾಳಿ ಮಾಡಿದೆ. ಇಸ್ರೇಲ್ ಮಿಲಿಟರಿ ಇದೀಗ ವಾಯುದಾಳಿ ಮೂಲಕ ತನ್ನ ಶತ್ರುಗಳಿಗೆ ವಾರ್ನಿಂಗ್ ಕೊಟ್ಟಿದ್ದು, ಮೂಲ ಸೌಕರ್ಯ ಸಂಪೂರ್ಣ ನಾಶವಾಗುತ್ತಿದೆ. ಹಾಗೇ ಇದರ ಜೊತೆಗೆ ಇಸ್ರೇಲ್ ಮೇಲೆ ದಾಳಿ ಮಾಡಲು ಬಳಸಿದ್ದ ಕ್ಷಿಪಣಿ ಲಾಂಚರ್ ಕೂಡ ಧೂಳ್ ಧೂಳ್ ಆಗುತ್ತಿವೆ. ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಹೊಂದಿದ್ದ ಶಸ್ತ್ರಾಸ್ತ್ರ ಸಂಗ್ರಹಾಗಾರ ಕೂಡ ಟಾರ್ಗೆಟ್ ಆಗಿದ್ದು, ದಾಳಿ ಮುಂದುವರಿದಿದೆ. ಹಾಗಾದ್ರೆ, ಈ ಯುದ್ಧ ನಿಲ್ಲುವುದು ಯಾವಾಗ? ಇದೇ ರೀತಿ ಇಸ್ರೇಲ್ ದಾಳಿ ಮಾಡುತ್ತಿದ್ರೆ ಮುಂದೆ ಏನಾಗುತ್ತೆ? ಬನ್ನಿ ತಿಳಿಯೋಣ.

3ನೇ ಮಹಾಯುದ್ಧಕ್ಕೆ ಮುನ್ನುಡಿ?
ಇಸ್ರೇಲ್ & ಲೆಬನಾನ್ ಮಾತ್ರವಲ್ಲ ಇಸ್ರೇಲ್ & ಗಾಜಾ ಪಟ್ಟಿ ನಡುವೆ ನಡೆಯುತ್ತಿರುವ ಈ ತಿಕ್ಕಾಟ ನೋಡುತ್ತಿದ್ದರೆ ಶೀಘ್ರದಲ್ಲೇ ಮತ್ತೊಂದು ಮಹಾಯುದ್ಧ, ಅಂದ್ರೆ 3ನೇ ಮಹಾಯುದ್ಧ ಗ್ಯಾರಂಟಿ? ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ, ಇಬ್ಬರ ನಡುವೆ ಶುರುವಾಗಿರುವ ಯುದ್ಧ ಈಗಾಗಲೇ ಭಯ ಹುಟ್ಟು ಹಾಕಿದೆ. ಇದು ಸಾಲದು ಎನ್ನುವಂತೆ ಸಿರಿಯಾ ವಿರುದ್ಧ ಕೂಡ ಇಸ್ರೇಲ್ ತನ್ನ ದಾಳಿ ಹೆಚ್ಚಿಸಿದೆ. ಹೀಗಾಗಿ ಇಸ್ರೇಲ್ ವಿರುದ್ಧ ಈಗಾಗಲೇ 3 ದೇಶಗಳು ನೇರ ಯುದ್ಧ ಮಾಡುತ್ತಿದ್ದು, ಇರಾನ್ ಕೂಡ ಯುದ್ಧಕ್ಕೆ ಎಂಟ್ರಿ ಆಗಲು ಕಾಯುತ್ತಿದೆ. ಹೀಗಾಗಿ, ಇಸ್ರೇಲ್‌ನ ಸೈಲೆಂಟ್ ಮಾಡಿಸಲು ಅಮೆರಿಕ ಕೂಡ ಪರದಾಡುತ್ತಿದೆ. ಮತ್ತೊಂದು ಕಡೆ ಈ ಯುದ್ಧ ನಿಲ್ಲಿಸಲ್ಲ, ಹಿಜ್ಬುಲ್ಲಾ ಬಂಡುಕೋರರು ಶರಣಾಗಬೇಕು ಎಂದು ಇಸ್ರೇಲ್ ಸೇನೆಯು ಪಟ್ಟು ಹಿಡಿದು ಕೂತಿದೆ.
ಸಿರಿಯಾದಲ್ಲಿ 23 ಜನರು ಬಲಿ
ಅಂದಹಾಗೆ ಇಸ್ರೇಲ್ ಇದೀಗ ನೇರವಾಗಿ ಸಿರಿಯಾ ಮೇಲೆ ದಾಳಿ ಆರಂಭ ಮಾಡಿದೆ ಎನ್ನುವ ಆರೋಪ ಕೇಳಿಬಂದಿದೆ. ಆ ಪ್ರಕಾರ, ಸಿರಿಯಾದ ಕಾರ್ಮಿಕರು ವಾಸ ಇದ್ದ ಕಟ್ಟಡದ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದೆ ಎಂದು ಆರೋಪ ಮಾಡಲಾಗಿತ್ತು. ಈ ದಾಳಿಯ ಹಿನ್ನೆಲೆ 23 ಜನರು ಬಲಿಯಾಗಿದ್ದಾರೆ. ಇಸ್ರೇಲ್ ಭೀಕರ ವಾಯು ದಾಳಿ ನಡೆಸಿರುವ ಕುರಿತು ಇದೀಗ ಲೆಬನಾನ್‌ನ ಸರ್ಕಾರಿ ಮಾಧ್ಯಮ ವರದಿ ಪ್ರಕಟಿಸಿದ್ದು ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಹಾಗೇ ಈಗ ದಾಳಿ ನಡೆದಿರುವ ಪ್ರದೇಶ ಸಿರಿಯಾ & ಲೆಬನಾನ್ ಗಡಿ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಕಟ್ಟಡಗಳ ಅವಶೇಷವನ್ನು ಅಗೆದು ಮೃತದೇಹ ಹೊರಗೆ ತೆಗೆಯಲಾಗಿದೆ.












Click it and Unblock the Notifications