ಇಸ್ರೇಲ್–ಇರಾನ್ ಯುದ್ಧ ಮುಂದುವರಿದರೆ ಜಗತ್ತು ಹಿಂದೆ ಹೋಗುತ್ತದೆಯೇ? ತಜ್ಞರ ಎಚ್ಚರಿಕೆ
ಮಧ್ಯಪ್ರಾಚ್ಯದಲ್ಲಿ ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಜಂಟಿ ಯುದ್ಧದ ಉದ್ವಿಗ್ನತೆ ಹೆಚ್ಚುತ್ತಿದ್ದು, ಜಗತ್ತಿನ ಗಮನ ಸೆಳೆದಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಸಂಘರ್ಷ ದೊಡ್ಡ ಯುದ್ಧವಾಗಿ ಮಾರ್ಪಡುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಈ ವಿಷಯದ ಕುರಿತು ನಿವೃತ್ತ ವಾಯುಪಡೆಯ ಅಧಿಕಾರಿ ಹಾಗೂ ಅಂತರರಾಷ್ಟ್ರೀಯ ವ್ಯವಹಾರ ತಜ್ಞರಾದ ಮೋಹನ್ ಚಿತ್ತಲೆ ಮಾತನಾಡಿ ಈ ಸಂಘರ್ಷ ಹೊಸದಾಗಿ ಆರಂಭವಾದದ್ದಲ್ಲ ಎಂದು ಹೇಳಿದ್ದಾರೆ. ಅವರ ಪ್ರಕಾರ ಇರಾನ್ ಮತ್ತು ಇಸ್ರೇಲ್ ನಡುವಿನ ವೈಮನಸ್ಸು ಸುಮಾರು 20-25 ವರ್ಷಗಳಿಂದ ಮುಂದುವರಿದಿದೆ.

ತಜ್ಞರಾದ ಮೋಹನ್ ಚಿತ್ತಲೆ ಅವರು ಹೇಳುವಂತೆ ಈ ಸಂಘರ್ಷದ ಪ್ರಮುಖ ಕಾರಣವೇ ಇರಾನ್ ಅಣುಶಕ್ತಿ ಕಾರ್ಯಕ್ರಮ. ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಅಣುಬಾಂಬ್ ಅಭಿವೃದ್ಧಿಪಡಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸುತ್ತಿವೆ. ಇರಾನ್ ಯುರೇನಿಯಂ ಸಂಸ್ಕರಣೆ ಮಿತಿಯನ್ನು ಮೀರುತ್ತಿದೆ ಎಂಬ ಆರೋಪವೂ ಇದೆ.
ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಇರಾನ್ ಅಣು ಕಾರ್ಯಕ್ರಮದ ವಿರುದ್ಧ ಕಠಿಣ ನಿಲುವು ತೆಗೆದುಕೊಂಡಿತ್ತು. ತಿಂಗಳಿನಿಂದ ಅಣುಒಪ್ಪಂದಕ್ಕೆ ಬಾರದಿದ್ದ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಲೇ ಬಂದಿತ್ತು. ಇರಾನ್ ಯಾವುದೇ ಕಾರಣಕ್ಕೂ ಅಣುಶಕ್ತಿ ಅಭಿವೃದ್ಧಿಪಡಿಸಬಾರದು ಎಂದು ಅವರು ಹೇಳಿದ್ದರು.
ಯುದ್ಧಕ್ಕೆ ಪ್ರಮುಖ ಕಾರಣಗಳು:
ಅಣುಶಕ್ತಿ ಪೈಪೋಟಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾಲದಿಂದಲೂ ಇರಾನ್ ತನ್ನ ಅಣುಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಇಸ್ರೇಲ್ ಮತ್ತು ಅಮೆರಿಕಕ್ಕೆ ನುಂಗಲಾರದ ತುತ್ತಾಗಿದೆ. ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರ ತಯಾರಿಸಬಾರದು ಎಂಬುದು ಇವರ ಮುಖ್ಯ ಬೇಡಿಕೆ.
ಯುರೇನಿಯಂ ಪುಷ್ಟೀಕರಣ: ಇರಾನ್ ನಿಗದಿತ ಮಿತಿಗಿಂತ ಹೆಚ್ಚು ಯುರೇನಿಯಂ ಪುಷ್ಟೀಕರಣ ಮಾಡುತ್ತಿರುವುದು ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ.
ತಾಂತ್ರಿಕ ಯುದ್ಧ: ಇದು ಕೇವಲ ಸೈನ್ಯಗಳ ನಡುವಿನ ಹೋರಾಟವಲ್ಲ, ಬದಲಾಗಿ ಡ್ರೋನ್ ಮತ್ತು ಮಿಸೈಲ್ ತಂತ್ರಜ್ಞಾನದ ಮೂಲಕ ನಡೆಯುತ್ತಿರುವ ಆಧುನಿಕ ಯುದ್ಧವಾಗಿದೆ. ಧಾರ್ಮಿಕ ಮತ್ತು ಪ್ರಾದೇಶಿಕ ರಾಜಕೀಯ: ಕೊಲ್ಲಿ ರಾಷ್ಟ್ರಗಳಲ್ಲಿ ಹೆಚ್ಚಿನವು ಸುನ್ನಿ ಮುಸ್ಲಿಂ ರಾಷ್ಟ್ರಗಳಾಗಿದ್ದು, ಶಿಯಾ ಪ್ರಾಬಲ್ಯದ ಇರಾನ್‌ನ ನಡೆಗಳು ಈ ಭಾಗದಲ್ಲಿ ಅಸ್ಥಿರತೆ ಉಂಟುಮಾಡುತ್ತಿವೆ.
ಇರಾನ್‌ಗೆ ರಷ್ಯಾ ಮತ್ತು ಚೀನಾ ಬೆಂಬಲ?
ಮಧ್ಯಪ್ರಾಚ್ಯದ ಬಹುತೇಕ ರಾಷ್ಟ್ರಗಳು ಸುನ್ನಿ ಮುಸ್ಲಿಂ ದೇಶಗಳಾಗಿದ್ದು ಇರಾನ್ ಶಿಯಾ ಮುಸ್ಲಿಂ ದೇಶವಾಗಿದೆ. ಧಾರ್ಮಿಕ ಭಿನ್ನತೆ ಕಾರಣದಿಂದ ಇರಾನ್‌ಗೆ ಸಂಪೂರ್ಣ ಬೆಂಬಲ ದೊರೆಯುತ್ತಿಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ. ತಜ್ಞರಾದ ಮೋಹನ್ ಚಿತ್ತಲೆ ಪ್ರಕಾರ ಈ ಸಂಘರ್ಷದಲ್ಲಿ ದೊಡ್ಡ ರಾಷ್ಟ್ರಗಳ ಪಾತ್ರವೂ ಮಹತ್ವದ್ದಾಗಿದೆ. ಇಸ್ರೇಲ್‌ಗೆ ಅಮೆರಿಕಾ ಬೆಂಬಲ ನೀಡುತ್ತಿದ್ದರೆ ಇರಾನ್‌ಗೆ ರಷ್ಯಾ ಮತ್ತು ಚೀನಾ ಬೆಂಬಲ ನೀಡುವ ಸಾಧ್ಯತೆ ಇದೆ. ಕೆಲವು ಗಲ್ಫ್ ರಾಷ್ಟ್ರಗಳು ಕೂಡ ಯುದ್ಧ ವಿಸ್ತಾರವಾಗಬಾರದು ಎಂದು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿವೆ. ತಜ್ಞರ ಪ್ರಕಾರ ಯುದ್ಧ ಮುಂದುವರಿದರೆ ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಬಹುದು.
ಭಾರತಕ್ಕೂ ಈ ಸಂಘರ್ಷದ ಪರಿಣಾಮ ಬೀಳುವ ಸಾಧ್ಯತೆ ಇದೆ.
ಭಾರತ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಬಹುದು. ಇಂಧನ ಬೆಲೆ ಹೆಚ್ಚಾದರೆ ಸಾರಿಗೆ ವೆಚ್ಚ ಹೆಚ್ಚುತ್ತದೆ ಇದರಿಂದ ಆಹಾರ ಸೇರಿದಂತೆ ದೈನಂದಿನ ವಸ್ತುಗಳ ಬೆಲೆ ಏರಬಹುದು. ಮಧ್ಯಪ್ರಾಚ್ಯ ದೇಶಗಳಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಯುದ್ಧ ವಿಸ್ತಾರವಾದರೆ ಅವರ ಉದ್ಯೋಗದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.
ತಜ್ಞರು ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದ್ದಾರೆ ಯುದ್ಧ ಮುಂದುವರಿದರೆ ಜಾಗತಿಕ ಆರ್ಥಿಕ ಸಂಕಷ್ಟ ಎದುರಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅವರ ಪ್ರಕಾರ ಈ ಸಂಘರ್ಷವು ಕೋವಿಡ್ ಕಾಲದ ಸಂಕಷ್ಟಕ್ಕಿಂತಲೂ ದೊಡ್ಡ ಆರ್ಥಿಕ ಸಮಸ್ಯೆ ಉಂಟುಮಾಡುವ ಸಾಧ್ಯತೆ ಇದೆ. ಈ ಸಂಘರ್ಷವನ್ನು ಶಾಂತಿ ಮಾತುಕತೆ ಮೂಲಕ ಪರಿಹರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಒಟ್ಟಾರೆ ಇರಾನ್-ಇಸ್ರೇಲ್-ಅಮೆರಿಕ ನಡುವಿನ ಉದ್ವಿಗ್ನತೆ ಕೇವಲ ಮೂರು ದೇಶಗಳ ಸಮಸ್ಯೆಯಲ್ಲ. ಇದು ಜಾಗತಿಕ ಭದ್ರತೆ, ತೈಲ ಸರಬರಾಜು ಮತ್ತು ಆರ್ಥಿಕತೆ ಮೇಲೆ ಪರಿಣಾಮ ಬೀರುವ ಪ್ರಮುಖ ಬೆಳವಣಿಗೆಯಾಗಿದೆ. ಯುದ್ಧ ವಿಸ್ತಾರವಾದರೆ ಜಗತ್ತಿನ ಹಲವು ದೇಶಗಳಿಗೆ ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಭಾರತಕ್ಕೂ ಇದರ ಪರಿಣಾಮ ತಪ್ಪುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications