Reuters Journalist Killed: ಪತ್ರಕರ್ತರ ಮೇಲೆ ಇಸ್ರೇಲ್ ದಾಳಿ- ಲೆಬನಾನ್‌ನಲ್ಲಿ ರಾಯಟರ್ಸ್ ಪರ್ತಕರ್ತನ ಹತ್ಯೆ, 6 ಜನರಿಗೆ ಗಾಯ
ಇಸ್ರೇಲ್ ಕಡೆಯಿಂದ ಲೆಬನಾನ್‌ಗೆ ಹಾರಿದ ಕ್ಷಿಪಣಿಗಳು ಪತ್ರಕರ್ತನ ಹತ್ಯೆಗೆ ಕಾರಣವಾಗಿವೆ. ಇದೇ ಪ್ರಕರಣದಲ್ಲಿ ಆರು ಪತ್ರಕರ್ತರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಶುಕ್ರವಾರ ದಕ್ಷಿಣ ಲೆಬನಾನ್‌ನಲ್ಲಿ ರಾಯಿಟರ್ಸ್ ಪತ್ರಕರ್ತ ಇಸಾಮ್ ಅಬ್ದುಲ್ಲಾ ಕೊಲ್ಲಲ್ಪಟ್ಟಿದ್ದಾರೆ. ಇತರ ಆರು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ರಾಯಿಟರ್ಸ್ ವಿಡಿಯೊ ಜರ್ನಲಿಸ್ಟ್ ಅಬ್ದುಲ್ಲಾ ಸಾವನ್ನಪ್ಪಿದ್ದಾರೆ. ಅಲ್ ಜಜೀರಾ ಮತ್ತು ಏಜೆನ್ಸ್ ಫ್ರಾನ್ಸ್-ಪ್ರೆಸ್ ಸಂಸ್ಥೆಯ ಪತ್ರಕರ್ತರು ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಆರು ಜನರನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗಳಿಗೆ ರವಾನಿಸಲಾಯಿಗೆ ಎಂದು ರಾಯಿಟರ್ಸ್ ಹೇಳಿದೆ.

ಪತ್ರಕರ್ತರ ಗುಂಪು ಇಸ್ರೇಲ್ ಗಡಿಗೆ ಸಮೀಪವಿರುವ ಅಲ್ಮಾ ಅಲ್-ಶಾಬ್ ಬಳಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಲೆಬನಾನಿನ ಮಿಲಿಷಿಯಾ ಹಿಜ್ಬುಲ್ಲಾ ಘರ್ಷಣೆಯಲ್ಲಿ ತೊಡಗಿಕೊಂಡಿವೆ ಎಂದು ತಿಳಿದುಬಂದಿದೆ.
ಪತ್ರಕರ್ತರ ಹತ್ಯೆಗೆ ಇಸ್ರೇಲ್ ಕಾರಣವೆಂದು ಲೆಬನಾನಿನ ಪ್ರಧಾನಿ ನಜೀಬ್ ಮಿಕಾಟಿ ಮತ್ತು ಹಿಜ್ಬುಲ್ಲಾ ಮುಖಂಡರು ಹೇಳಿದ್ದಾರೆ.
ಈ ಘಟನೆ ಕುರಿತು ಇಸ್ರೇಲ್ ಪಡೆಯ ಮುಖ್ಯಸ್ಥರು ಪ್ರತಿಕ್ರಿಯಿಸಿಲ್ಲ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಇಸ್ರೇಲ್‌ನ ವಿಶ್ವಸಂಸ್ಥೆ ರಾಯಭಾರಿ ಗಿಲಾಡ್ ಎರ್ಡಾನ್, 'ನಾವು ಎಂದಿಗೂ ಕಾರ್ಯನಿರತ ಪತ್ರಕರ್ತರನ್ನು ಹೊಡೆಯಲು, ಕೊಲ್ಲಲು ಅಥವಾ ಶೂಟ್ ಮಾಡಲು ಬಯಸುವುದಿಲ್ಲ. ಆದರೆ, ನಿಮಗೆ ತಿಳಿದಿದೆ. ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ. ಆ ಸಂದರ್ಭದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಈ ಘಟನೆಯ ಬಗ್ಗೆ ಇಸ್ರೇಲ್ ತನಿಖೆ ನಡೆಸಲಿದೆ' ಎಂದು ಹೇಳಿದ್ದಾರೆ.
ಪ್ರಸಾರಕರಿಗೆ ಲೈವ್ ವಿಡಿಯೋ ಸಿಗ್ನಲ್ ಒದಗಿಸುವಾಗ ಅಬ್ದುಲ್ಲಾನನ್ನು ಕೊಲ್ಲಲಾಗಿದೆ ಎಂದು ರಾಯಿಟರ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಭಾರೀ ಸ್ಫೋಟದ ಸದ್ದು ಕ್ಯಾಮರಾವನ್ನು ಅಲುಗಾಡಿಸಿತು. ಗಾಳಿ ಹೊಗೆಯಿಂದ ತುಂಬಿತು. ಕಿರುಚಾಟಗಳು ಕೇಳಿದಾಗ ಕ್ಯಾಮೆರಾವನ್ನು ಸ್ಫೋಟಗೊಂಡ ಬೆಟ್ಟದ ಕಡೆಗೆ ತಿರುಗಿಸಲಾಯಿತು. ಆ ಸಂದರ್ಭದಲ್ಲಿ ಪತ್ರಕರ್ತ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸುದ್ದಿಸಂಸ್ಥೆ ರಾಯಟರ್ಸ್, 'ನಮ್ಮ ವಿಡಿಯೋಗ್ರಾಫರ್ ಇಸಾಮ್ ಅಬ್ದುಲ್ಲಾ ಕೊಲ್ಲಲ್ಪಟ್ಟಿದ್ದಾರೆ ಎಂಬುದನ್ನು ತಿಳಿದು ನಮಗೆ ತುಂಬಾ ದುಃಖವಾಗಿದೆ' ಎಂದು ಸುದ್ದಿ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
'ನಾವು ತುರ್ತಾಗಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದೇವೆ. ಈ ಪ್ರದೇಶದಲ್ಲಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಇಸಾಮ್ ಅಬ್ದುಲ್ಲಾ ಕುಟುಂಬದ ಜೊತೆ ನಾವು ಇರಲಿದ್ದೇವೆ' ಎಂದು ಹೇಳಿದೆ.
ಇನ್ನಿಬ್ಬರು ರಾಯಿಟರ್ಸ್ ಪತ್ರಕರ್ತರಾದ ಥಾರ್ ಅಲ್-ಸುಡಾನಿ ಮತ್ತು ಮಹೇರ್ ನಝೆಹ್ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ವೈದ್ಯಕೀಯ ಆರೈಕೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಯಿಟರ್ಸ್ ಮತ್ತು ಇತರ ಎರಡು ಸುದ್ದಿ ಸಂಸ್ಥೆಗಳು ಇಸ್ರೇಲ್‌ನ ದಿಕ್ಕಿನಿಂದ ಬರುತ್ತಿರುವ ಕ್ಷಿಪಣಿ ಗುಂಡಿನ ಚಿತ್ರೀಕರಣ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
ಎಪಿ ಮತ್ತು ಅಲ್ ಜಜೀರಾ ಸಂಸ್ಥೆಗಳು ಪತ್ರಕರ್ತರ ಮೇಲೆ ದಾಳಿ ಮಾಡಿರುವ ಶೆಲ್‌ಗಳು ಇಸ್ರೇಲಿ ಮೂಲಗಳಿಂದ ಬಂದಿವೆ ಎಂದು ಹೇಳಿಕೊಂಡಿವೆ. ಕ್ಷಿಪಣಿಗಳನ್ನು ಇಸ್ರೇಲ್ ನಿಜವಾಗಿಯೂ ಹಾರಿಸಿದೆಯೇ ಎಂಬುದನ್ನ ರಾಯಿಟರ್ಸ್ ತಿಳಿಸಿದೆ.
ತನ್ನ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಎಎಫ್‌ಇ ಹೇಳಿಕೊಂಡಿದೆ. ಆದರೆ ಸಂಸ್ಥೆ ಅವರ ಹೆಸರನ್ನು ಬಹಿರಂಗಪಡಿಸಲಿಲ್ಲ. ಕತಾರ್ ಮೂಲಕ ಅಲ್ ಜಜೀರಾ ತನ್ನ ಇಬ್ಬರು ಪತ್ರಕರ್ತರಾದ ಎಲೀ ಬ್ರಾಖ್ಯಾ ಮತ್ತು ವರದಿಗಾರ ಕಾರ್ಮೆನ್ ಜೌಖಾದರ್ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಘಟನೆಗೆ ಇಸ್ರೇಲ್ ಕಾರಣವೆಂದು ಅಲ್-ಜಜೀರಾ ಆಪಾದಿಸಿದೆ. ಈ ಕ್ರಿಮಿನಲ್ ಕೃತ್ಯದ ಹಿಂದೆ ಎಲ್ಲರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದೆ.
ನಾವು ಒಪ್ಪಿದೆ ಪಡೆದ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೂ, ನಮ್ಮ ವಾಹನದ ಮೇಲೆ ದಾಳಿ ನಡೆಸಲಾಗಿದೆ ಎಂದು ಅಲ್ ಜಜೀರಾ ತಿಳಿಸಿದೆ.
ಈ ಕುರಿತು ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್ ಹತ್ಯೆಗೀಡಾದ ಪತ್ರಕರ್ತರ ಕುಟುಂಬಕ್ಕೆ ಸಂತಾಪ ಸೂಚಿಸಿದರು.
'ಎಲ್ಲರಿಗೂ ಸತ್ಯವನ್ನು ತಲುಪಿಸಲು ಹಲವಾರು ಪತ್ರಕರ್ತರು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ' ಎಂದು ಅವರು ಹೇಳಿದರು.
ಏನಾಯಿತು ಎಂಬುದರ ಕುರಿತು ತಿಳಿಯಲು ತನಿಖೆಯನ್ನು ಮಾಡಬೇಕೆಂದು ವಿಶ್ವ ಸಂಸ್ಥೆ ಆಶಿಸುತ್ತಿದೆ ಎಂದು ಯುಎನ್ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ. ಪತ್ರಕರ್ತರಿಗೆ ರಕ್ಷಣೆ ನೀಡಬೇಕು ಮತ್ತು ಅವರ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications