ಟ್ರಂಪ್ ಜೀವಕ್ಕೆ ಆಪತ್ತು ಎಂದ ಇರಾನ್: ತಣ್ಣಗಾಯ್ತು ಅಮೆರಿಕ - ಗೋಪಾಲಕೃಷ್ಣ ಕುಂಟಿನಿ ಬರಹ
ಟ್ರಂಪ್ ಜೀವಕ್ಕೆ ಆಪತ್ತು ಎಂದ ಇರಾನ್: ತಣ್ಣಗಾಯ್ತು ಅಮೆರಿಕ - ಗೋಪಾಲಕೃಷ್ಣ ಕುಂಟಿನಿ ಅವರ ಬರಹ ಇಲ್ಲಿದೆ. ಖೊಮೇನಿ ಆಡಳಿತ ದಂಗೆಯನ್ನು ನೀಟಾಗಿ ಹತ್ತಿಕ್ಕಿದೆ. ಇದು ಹೀಗೇ ಆಗುತ್ತದೆ ಎಂದು ನಾನೂ ಬರೆದಿದ್ದೆ. ಖೊಮೇನಿ ರೆಜಿಮ್ ಶುರುವಾಗಿ 47 ವರ್ಷಗಳಾದವು. ಈ ಅವಧಿಯಲ್ಲಿ ಅನೇಕ ಬಾರಿ ದಂಗೆ ನಡೆದಿದ್ದವು. ಒಂದೊಂದು ದಂಗೆಯೂ ಎರಡು ಮೂರು ವಾರಗಳಿಗೆ ಸದ್ದಡಗಿ ಹೋಗಿತ್ತು. ಈ ಬಾರಿಯೂ ಅದುವೇ ಆಗಿದ್ದು. ಟೆಹರಾನ್‌ನ ಗ್ರಾಂಡ್ ಬಜಾರ್‌ನಲ್ಲಿ ಶುರುವಾದ ಆರ್ಥಿಕ ಅವ್ಯವಸ್ಥೆಯ ವಿರುದ್ಧದ ಪ್ರತಿಭಟನೆ ಎರಡನೇ ವಾರದಲ್ಲಿ ಸಾಮೂಹಿಕ ಕ್ರಾಂತಿಯತ್ತ ತಿರುಗಿತು. ಜೆನ್ ಝೀಗಳೇ ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದಿದ್ದರು. ಇರಾನ್‌ನ ದೇವಪ್ರಭುತ್ವದ ವಿರುದ್ಧ ಪ್ರಜೆಗಳ ದಂಗೆ ಶುರುವಾಗಿದೆ ಎಂದು ಗೊತ್ತಾಗುತ್ತಲೇ ಅಮೆರಿಕ ದಂಗೆಗೆ ಇಂಬುಕೊಟ್ಟಿತು.
ದೇಶ ಭ್ರಷ್ಟನಾಗಿರುವ ಮಾಜಿ ರಾಜ ಪಹ್ಲವಿ ರೇಜಾ ಶಾ ಮುನ್ನುಗ್ಗಿ ಮುನ್ನುಗ್ಗಿ ಎಂದು ದಂಗೆ ಎದ್ದವರಿಗೆ ಕಿವಿಯೂದುತ್ತಿದ್ದ. ಅಮೆರಿಕಾದಿಂದ ಟ್ರಂಪು ನಿಮಗೆ ನೆರವು ಆನ್ ದ ವೇ ಎಂದು ಕಿವಿಗೆ ಹೂವಿಟ್ಟ. ಇರಾನ್ ಪ್ರತಿಭಟನಾಕಾರರು ಇವರನ್ನು ನಂಬಿದ್ದರೋ ಅಥವಾ ಅವರದ್ದೇ ಫ್ಲೋದಲ್ಲಿ ಮುಂದುವರಿದರೋ ಏನೋ ಗೊತ್ತಿಲ್ಲ. ಖೊಮೇನಿ ಮಾತ್ರ ಸಿಸ್ಟಮ್ಯಾಟಿಕ್ ಆಗಿ ದಂಗೆಯ ಹುಟ್ಟಡಗಿಸಿದ.

ದಂಗೆ ನಡೆಸಿದವರಲ್ಲಿ ಸಾವಿರಾರು ಜನ ಮಣ್ಣುಪಾಲಾದರು. ಕೈಗೆ ಸಿಕ್ಕವರನ್ನು ಜೈಲಿಗೆ ಹಾಕಲಾಯಿತು. ಅವರಿಗೇನು ಪಾಯಸದೂಟ ಬಡಿಸುತ್ತಾರಾ? ಒಬ್ಬೊಬ್ಬರನ್ನೂ ಕಡುಚಳಿಯಲ್ಲಿ ಬೆತ್ತಲೆ ಮಾಡಿ ಹಿಡಿದು ಬಡಿದು ಚಚ್ಚಿ ಚಿತ್ರಹಿಂಸೆ ಕೊಡುತ್ತಿದ್ದಾರೆ. ಅನೇಕರಿಗೆ ಗಲ್ಲು ಶಿಕ್ಷೆ ಬರೆದಿದ್ದಾರೆ. ಶೀಘ್ರದಲ್ಲೇ ಟೆಹ್ರಾನ್‌ನ ಮೈದಾನದಲ್ಲಿ ಸಾಮೂಹಿಕ ಗಲ್ಲುಶಿಕ್ಷೆಯ ಪ್ರದರ್ಶನ ನಡೆಯಲಿದೆ.
ಈಗ ಟ್ರಂಪ್ ಏಕೆ ಬಾಯಿಮುಚ್ಚಿಕೊಂಡರು ಎಂಬುದೇ ಪ್ರಶ್ನೆ. ಟ್ರಂಪ್ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾಗ ಇರಾನ್ ಟೆಲಿವಿಷನ್ ಒಂದು ವಾರ್ನಿಂಗ್ ನ್ಯೂಸ್ ಪ್ರಸಾರ ಮಾಡಿತು. Hello Trump, this time it will not miss the target,".
ಇದೇನಿದು ಈ ಮೆಸೇಜು? 2024 ರಲ್ಲಿ ಪೆನ್ಸಿಲ್ವೇನಿಯಾದಲ್ಲಿ ಟ್ರಂಪು ಚುನಾವಣಾ ಪ್ರಚಾರದಲ್ಲಿದ್ದಾಗ 20 ವರ್ಷದ ಹುಡುಗನೊಬ್ಬ ಆತನಿಗೆ ಶೂಟ್ ಮಾಡಿದ್ದ. ಆ ಘಟನೆಯಲ್ಲಿ ಟ್ರಂಪ್ ಕಿವಿಯ ಹಾಳೆ ಮೇಲೆ ಗುಂಡು ಸವರಿಕೊಂಡು ಹೋಗಿತ್ತು. ಟ್ರಂಪ್ ಬಾಡಿಗಾರ್ಡ್ ಒಬ್ಬ ಸತ್ತಿದ್ದ, ಹಲವರು ಗಾಯಗೊಂಡಿದ್ದರು. ಕೊಲೆಗಾರನನ್ನು ತಕ್ಷಣವೇ ಕೊಂದು ಹಾಕಲಾಗಿತ್ತು. ಆ ಘಟನೆಯಲ್ಲಿ ಟ್ರಂಪ್ ಕೊಲೆಯತ್ನದ ಹಿಂದೆ ಇರಾನ್ ಇದೆ ಎಂದು ಮಾತನಾಡಿಕೊಳ್ಳಲಾಗಿತ್ತು. ಈಗ ನೋಡಿದರೆ ಅಂದು ಅದನ್ನು ಮಾಡಿಸಿದ್ದು ನಾನೇ ಎಂದು ಇರಾನ್ ಹೇಳಿದೆ.
ಕಳೆದ ಬಾರಿ ಗುಂಡು ಗುರಿಗೆ ತಾಗಲಿಲ್ಲ, ಈ ಬಾರಿ ಗುರಿ ತಪ್ಪುವುದಿಲ್ಲ ಎಂದರೆ ಏನರ್ಥ? ನಿನ್ನನ್ನು ಕೊಲ್ತೇವೆ ಎಂದು ತಾನೇ? ಯಾವಾಗ ಇರಾನ್ ಟ್ರಂಪ್‌ಗೆ ಹೀಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿತೋ ಟ್ರಂಪ್ ಸಪ್ಪಗಾಗಿಬಿಟ್ಟ. ನಿನ್ನೆ ಆತ ನನ್ನನ್ನೇನಾದರೂ ಕೊಂದರೆ ನಿಮ್ಮ ದೇಶ ಭೂಪಟದಲ್ಲಿ ಇರುವುದಿಲ್ಲ ಎಂದು ಗದರಿದ್ದಾನೆ, ಸಾವಿನ ಭಯದಲ್ಲಿ ಯಾರಾದರೂ ಅದನ್ನೇ ಹೇಳಬೇಕು. ಸದ್ಯಕ್ಕಂತೂ ಖೊಮೇನಿ ಕೈ ಮೇಲಾಗಿದೆ. ಅಮೆರಿಕಾ ಸೇರಿದಂತೆ ಜಗತ್ತು ಮೌನವಾಗಿದೆ. ಮತ್ತೊಂದು ದಂಗೆಯ ತನಕ, ಟೇಕ್ ಕೇರ್ ಬೈಬೈ.












Click it and Unblock the Notifications