Iran And USA: ಇರಾನ್ ಸಮೀಪಕ್ಕೆ ಬಂದು ತಲುಪಿದ ಅಮೆರಿಕದ ಯುದ್ಧ ನೌಕೆ, ಕೆಲವೇ ಗಂಟೆಗಳಲ್ಲಿ ಯುದ್ಧ ಶುರು?
ಇರಾನ್ ಮತ್ತು ಅಮೆರಿಕ ನಡುವೆ ಶುರುವಾಗಿರುವ ತಿಕ್ಕಾಟ ಇನ್ನಷ್ಟು ಜೋರಾಗಿದ್ದು, ಯಾವುದೇ ಕ್ಷಣ ಎರಡೂ ದೇಶಗಳ ನಡುವೆ ರಣಭೀಕರ ಯುದ್ಧ ಆರಂಭವಾಗುವ ಮುನ್ಸೂಚನೆ ಸಿಗುತ್ತಿದೆ. ಅದರಲ್ಲೂ ಅಮೆರಿಕದ ಬೃಹತ್ ಹಾಗೂ ಶಕ್ತಿಶಾಲಿ ಯುದ್ಧ ನೌಕೆ ಎಂಬ ಖ್ಯಾತಿ ಪಡೆದಿರುವ, ವಿಮಾನ ವಾಹಕ ನೌಕೆ USS ಅಬ್ರಹಾಂ ಲಿಂಕನ್ ಇನ್ನೇನು ಇರಾನ್ ಸಮೀಪಕ್ಕೆ ಬಂದಿದೆ. ಹೀಗಾಗಿ ಕೆಲವೇ ಗಂಟೆಗಳಲ್ಲಿ ಯುದ್ಧ ಶುರು ಆಗುತ್ತಾ? ಎಂಬ ಚರ್ಚೆ ಇಡೀ ಜಗತ್ತು ನಡುಗುವಂತೆ ಮಾಡಿದೆ. ಮತ್ತೊಂದು ಕಡೆ ಈ ಎಲ್ಲಾ ಬೆಳವಣಿಗೆ ಜಾಗತಿಕ ಷೇರಪೇಟೆಗೆ ಕೂಡ ದೊಡ್ಡ ಏಟು ಕೊಡುತ್ತಿದೆ.
ಅಮೆರಿಕ ಈಗ ಇರಾನ್ ಕಡೆಗೆ ಕಳಿಸಿರುವ ಅಸ್ತ್ರಗಳು ದೊಡ್ಡ ಮಟ್ಟದಲ್ಲೇ ಇದ್ದು, ಮಧ್ಯಪ್ರಾಚ್ಯ ಭಾಗವು ಯಾವುದೇ ಕ್ಷಣದಲ್ಲಿ ಘೋರ ಯುದ್ಧವನ್ನ ನೋಡಬಹುದಾ? ಎಂಬ ಅನುಮಾನ ಹುಟ್ಟಿಸಿದೆ. ಹೀಗೆ ಆತಂಕ ಮೂಡಲು ಕಾರಣ ಅಮೆರಿಕ ಸೇನೆಯ F-15E ಸ್ಟ್ರೈಕ್ ಈಗಲ್ ಜೆಟ್‌ಗಳು & ವಿಮಾನ ವಾಹಕ ನೌಕೆ USS ಅಬ್ರಹಾಂ ಲಿಂಕನ್ ಎದುರಾಳಿ ನೆಲವನ್ನು ಪುಡಿ ಪುಡಿ ಮಾಡುವ ಶಕ್ತಿ ಹೊಂದಿದೆ. ಇದೇ ಕಾರಣಕ್ಕೆ ಇರಾನ್ ಕೂಡ, ತನ್ನ ಮೇಲೆ ಒಂದು ಸಣ್ಣ ದಾಳಿಯಾದರೂ ಅದನ್ನು ತಕ್ಷಣವೇ ಯುದ್ಧ ಎಂದು ಭಾವಿಸಿ ನಾವು ಹೋರಾಟಕ್ಕೆ ಇಳಿಯುತ್ತೇವೆ ಎಂದಿದೆ. ಅಮೆರಿಕ ಮಧ್ಯಪ್ರಾಚ್ಯದಲ್ಲಿರುವ ತನ್ನ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಕೂಡ ಬಲಪಡಿಸಿದ್ದು, ಯುದ್ಧದ ಭೀತಿ ಹೆಚ್ಚಿಸುತ್ತಿದೆ.

ಸ್ನೇಹಿತ ದೇಶಗಳು ಯುದ್ಧಕ್ಕೆ ಕೈಜೋಡಿಸುತ್ತವಾ?
ಇರಾನ್ ಮೇಲೆ ಅಮೆರಿಕ ಸೇನೆ ದಾಳಿ ಮಾಡಿದರೆ ಮಧ್ಯಪ್ರಾಚ್ಯ ಭಾಗದಲ್ಲಿ ಇರುವ ಅಮೆರಿಕ ಮತ್ತು ಇಸ್ರೇಲ್ ಸ್ನೇಹಿತ ದೇಶಗಳು ಈ ಯುದ್ಧಕ್ಕೆ ಬೆಂಬಲ ನೀಡುತ್ತವಾ? ಎಂಬ ಪ್ರಶ್ನೆ ಕೂಡ ಮೂಡುತ್ತಿದೆ. ಏಕೆಂದರೆ ಕೆಲವು ದಿನಗಳ ಹಿಂದೆ ಇರಾನ್ ಮೇಲೆ ಅಮೆರಿಕ ದಾಳಿ ಮಾಡಲು ಸಜ್ಜಾಗಿದ್ದ ಸಮಯಕ್ಕೆ ಸರಿಯಾಗಿ ಅರಬ್ ದೇಶಗಳು ಮುಂದೆ ಬಂದು ಸಂಧಾನ ಮಾಡಿದ್ದವು. ಅಲ್ಲದೆ ಯುದ್ಧ ಬೇಡ ಎಂಬ ಸಲಹೆ ನೀಡಿದ್ದವು. ಆದರೆ ಈಗ ಏಕಾಏಕಿ ಯುದ್ಧ ನಡೆಯುವ ಆತಂಕ ಆವರಿಸಿದ್ದು, ಮುಂದೆ ಸ್ಥಿತಿ ಏನು? ಎಂಬ ಚರ್ಚೆ ನಡೆಯುತ್ತಿದೆ.
6,000 ಜನರು ಹಿಂಸಾಚಾರಕ್ಕೆ ಬಲಿ ಆರೋಪ
ಇರಾನ್ ವಿರುದ್ಧ ಒಂದು ಕಡೆ ಅಮೆರಿಕ ಯುದ್ಧ ಮಾಡಲು ತಯಾರಿ ನಡೆಸಿರುವ ಸಮಯದಲ್ಲಿ, ಆ ಕಡೆ ಇರಾನ್ ವಿರುದ್ಧ ಗಂಭೀರ ಆರೋಪ ಒಂದು ಕೇಳಿಬಂದಿದೆ. ಕಳೆದ ತಿಂಗಳು ಇರಾನ್ ನೆಲದಲ್ಲಿ ಆರಂಭ ಆಗಿದ್ದ ಪ್ರತಿಭಟನೆ ಹಾಗೂ ಆಂತರಿಕ ದಂಗೆ ಜೊತೆಗೆ ಹಿಂಸಾಚಾರದಲ್ಲಿ 6,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ಪೈಕಿ ಬಹುತೇಕರನ್ನು ಇರಾನ್ ಸರ್ಕಾರ ಹಾಗೂ ಇರಾನ್ ಭದ್ರತಾ ಅಧಿಕಾರಿಗಳು ಹತ್ಯೆ ಮಾಡಿದ್ದಾರೆ ಎಂಬುದು ಇರಾನ್ ವಿರುದ್ಧ ಇರುವ ದೇಶಗಳ ಆರೋಪ.
ಭೀಕರ ಕುಸಿತ ಕಂಡ ಇರಾನ್ ಕರೆನ್ಸಿ
ಇದು ಒಂದುಕಡೆ ತಲೆನೋವು ತಂದಿರುವಾಗ, ಇರಾನ್ ದೇಶದ ಕರೆನ್ಸಿ ರಿಯಾಲ್ ಭಾರಿ ದೊಡ್ಡದಾಗಿ ಕುಸಿದಿದೆ. ಈಗ ಅಮೆರಿಕದ 1 ಡಾಲರ್ ಎದುರು ಇರಾನ್ ದೇಶದ ಕರೆನ್ಸಿ ರಿಯಾಲ್ ಬರೋಬ್ಬರಿ 1.5 ಮಿಲಿಯನ್‌ಗೆ ಕುಸಿತ ಕಂಡಿದೆ. ಇರಾನ್ ಆರ್ಥಿಕ ಪರಿಸ್ಥಿತಿ ಮೊದಲೇ ಪಾತಾಳಕ್ಕೆ ಕುಸಿದ ಸಮಯಕ್ಕೆ ಸರಿಯಾಗಿ ಈಗ ಕರೆನ್ಸಿ ಬೆಲೆ ಕೂಡ ಪಾತಾಳ ಸೇರುತ್ತಿದೆ. ಇರಾನ್ ಜನರು ದೈನಂದಿನ ವಸ್ತುಗಳನ್ನು ಖರೀದಿ ಮಾಡಲು ಕೂಡ ಒದ್ದಾಡುವಂತೆ ಆಗಿದೆ. ಹಾಗೇ ಇರಾನ್ ಸರ್ವಾಧಿಕಾರಿ ಖಮೇನಿ ವಿರುದ್ಧ ಅಮೆರಿಕ ಗರಂ ಆಗಿದ್ದು, ಇಲ್ಲಿ ಯುದ್ಧ ಶುರುವಾದರೆ ಮೊದಲು ಖಮೇನಿಯೇ ಟಾರ್ಗೆಟ್ ಆಗೋದು ಗ್ಯಾರಂಟಿನಾ? ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications