ಇರಾನ್ & ಅಮೆರಿಕ ನಡುವೆ ಮಹತ್ವದ ಪರಮಾಣು ಮಾತುಕತೆ ಆರಂಭ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಇರಾನ್ ಜೊತೆಯಲ್ಲಿ ಕಿರಿಕ್ ಜೋರಾಗಿತ್ತು. ಇದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಇರಾನ್ & ಅಮೆರಿಕದ ನಡುವೆ ಯುದ್ಧ ಶುರುವಾಗುತ್ತಾ? ಎಂಬ ಆತಂಕ ಮೂಡಿತ್ತು. ಆದರೆ ಕೆಲವು ತಿಂಗಳ ನಂತರ ಖುದ್ದು ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗೆ ಮಾತುಕತೆ ನಡೆಸುವ ಬಗ್ಗೆ ಆಸಕ್ತಿ ತೋರಿಸಿ, ಒಪ್ಪಂದಕ್ಕೆ ಬರಲು ಕರೆದಿದ್ದರು. ಆದರೆ ಒಂದು ಸಣ್ಣ ಕಿರಿಕ್ ನಂತರ ಇದೀಗ ಪರಮಾಣು ಚರ್ಚೆ ಮುಂದುವರಿದಿದೆ.
ಹೌದು, ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನಕ್ಕೆ ಮರಳಿದ ನಂತರ ಪರಮಾಣು ಯೋಜನೆ ಬಗ್ಗೆ ಇರಾನ್ ಮತ್ತು ಅಮೆರಿಕ ನಡುವೆ ಮಹತ್ವದ ಮಾತುಕತೆ ಒಮಾನ್ ನೆಲದಲ್ಲಿ ಆರಂಭ ಆಗಿದೆ. ಇರಾನ್ ಮತ್ತು ಅಮೆರಿಕ ರಾಯಭಾರಿಗಳು ಒಮಾನ್‌ನಲ್ಲಿ ಮಾತುಕತೆ ಶುರು ಮಾಡಿ, ಚರ್ಚೆ ನಡೆಸುತ್ತಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಭೇಟಿಗೆ ತೆರಳಿದ್ದ ಪಶ್ಚಿಮ ಏಷ್ಯಾದ ಅಮೆರಿಕ ರಾಯಭಾರಿ ಸ್ಟೀವ್ ವಿಟ್ಕಾಫ್, ಆ ನಂತರ ನೇರವಾಗಿ ಬಂದು ಒಮಾನ್‌ನಲ್ಲಿ ಇದೀಗ ಇರಾನ್ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಮೂಲಕ ಅಮೆರಿಕ & ಇರಾನ್‌ನ ನಡುವೆ ಸುಮಾರು ಅರ್ಧ ಶತಮಾನ ಕಾಲದಿಂದ ನಡೆಯುತ್ತಿರುವ ತಿಕ್ಕಾಟ ಕೊನೆಯಾಗುವ ನಿರೀಕ್ಷೆ ಮೂಡಿದೆ.

ಮಾತುಕತೆ ಬಗ್ಗೆ ಇರಾನ್ ಹೇಳಿದ್ದೇನು?
ಅಂದಹಾಗೆ ಅಮೆರಿಕದ ರಾಯಭಾರಿಗಳ ಜೊತೆಗೆ ಶುರುವಾಗಿರುವ ಚರ್ಚೆ ಬಗ್ಗೆ ಮಾತನಾಡಿ ಇರಾನ್ ರಿಯಾಕ್ಷನ್ ಕೊಟ್ಟಿದೆ. ಪರೋಕ್ಷ ಮಾತುಕತೆ ಇದೀಗ ಪ್ರಾರಂಭವಾಗಿದ್ದು, ಒಮಾನ್ ನಿಗದಿ ಮಾಡಿರುವ ಸ್ಥಳದಲ್ಲೇ ಚರ್ಚೆ ನಡೆಯುತ್ತಿದೆ. ಪರಸ್ಪರ ಎರಡೂ ದೇಶಗಳು ತಮ್ಮ ತಮ್ಮ ಅಭಿಪ್ರಾಯ ತಿಳಿಸಿವೆ ಅಂತ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಾಫೈ ಮಾಹಿತಿ ನೀಡಿದ್ದಾರೆ. ಈ ಮೂಲಕ ಇರಾನ್ & ಅಮೆರಿಕ ರಾಜತಾಂತ್ರಿ ಸಂಬಂಧಕ್ಕೆ ಹೊಸ ತಿರುವು ನೀಡಿದಂತೆ ಕಾಣುತ್ತಿದೆ.
ಅಮೆರಿಕ ಎಂಟ್ರಿಯಿಂದ ಇಸ್ರೇಲ್‌ಗೆ ಲಾಭ?
ಪರಮಾಣು ಒಪ್ಪಂದ ವಿಚಾರದಲ್ಲಿ ಅಮೆರಿಕ & ಇರಾನ್ ಮಾತುಕತೆ ಇಸ್ರೇಲ್‌ಗೆ ಲಾಭ ತರಲಿದೆ. ಇಸ್ರೇಲ್ & ಇರಾನ್ ನಡುವೆ ನಡೆಯುತ್ತಿರುವ ತಿಕ್ಕಾಟ ದೊಡ್ಡದಾಗುತ್ತಿತ್ತು. ಯಾಕಂದ್ರೆ ಒಂದು ಕಡೆ ಇಸ್ರೇಲ್ ಹಠ ಬಿಟ್ಟು ಶಾಂತಿ ಮಾತುಕತೆಗೆ ಮುಂದಾಗುತ್ತಿಲ್ಲ, ಇನ್ನೊಂದು ಕಡೆ ಇರಾನ್ ತನ್ನ ಬಳಿ ಇರುವ ವಿನಾಶಕಾರಿ ಪರಮಾಣು ಅಸ್ತ್ರಗಳನ್ನು ಹೊರಗೆ ತೆಗೆದು ಇಸ್ರೇಲ್‌ಗೆ ಬೆದರಿಕೆ ಹಾಕುವುದನ್ನ ನಿಲ್ಲಿಸಲೇ ಇಲ್ಲ.
ಹೀಗಾಗಿ ಇಸ್ರೇಲ್ ಮತ್ತು ಇರಾನ್ ನಡುವೆ ಘೋರ ಯುದ್ಧ ನಡೆದು, ಪರಮಾಣು ಅಸ್ತ್ರಗಳನ್ನ ಬಳಸಿ ಎಲ್ಲಾ ನಾಶ ಮಾಡುವ ಅತಂಕ ಕಾಡುತ್ತಿತ್ತು. ಆದರೆ ಈ ಸಮಯದಲ್ಲೇ ಅಮೆರಿಕ & ಇರಾನ್ ನಡುವೆ ನಡೆಯುತ್ತಿರುವ ಚರ್ಚೆ ಹೊಸ ಭರವಸೆ ಮೂಡಿಸಿದೆ. ಮತ್ತೊಂದು ಕಡೆ, ಇಸ್ರೇಲ್ ಜೊತೆಯಲ್ಲೂ ಇರಾನ್ ಅಧಿಕಾರಿಗಳು ಮಾತುಕತೆ ನಡೆಸುವ ನಿರೀಕ್ಷೆ ಇದೆ.












Click it and Unblock the Notifications