ಡಬ್ಲಿನ್ ನಲ್ಲಿ ಸೆಲ್ಫಿ ಹುಚ್ಚಿಗೆ ಭಾರತದ ವಿದ್ಯಾರ್ಥಿ ಬಲಿ
ಡಬ್ಲಿನ್ (ಐರ್ಲೆಂಡ್), ಜನವರಿ 05 : ಐರ್ಲೆಂಡ್ ನಲ್ಲಿರುವ ಬೆಟ್ಟದ ತುದಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಬಿದ್ದು ಭಾರತದ ವಿದ್ಯಾರ್ಥಿಯೊಬ್ಬ ಬಿದ್ದು ಅಸುನೀಗಿದ್ದಾನೆ ಎಂದು ಡಬ್ಲಿನ್ ಪೊಲೀಸರು ತಿಳಿಸಿದ್ದಾರೆ.
ಇಪ್ಪತ್ತರ ಆಸುಪಾಸಿನಲ್ಲಿರುವ ಯುವಕನ ವಿವರಗಳು ಇನ್ನೂ ಪತ್ತೆಯಾಗಿಲ್ಲ. ಆದರೆ, ಆತ ಡಬ್ಲಿನ್ ವಿಶ್ವವಿದ್ಯಾಲಯವೊಂದರಲ್ಲಿ ಅಧ್ಯಯನ ಮಾಡುತ್ತಿದ್ದ ಎಂದು ಮಾತ್ರ ತಿಳಿದುಬಂದಿದೆ.
ಶುಕ್ರವಾರ ಮಧ್ಯಾಹ್ನ ಈ ಘಟನೆ ಜರುಗಿದೆ. ಕಂಟ್ರಿ ಕ್ಲೇರ್ ನಲ್ಲಿರುವ ಅತ್ಯಂತ ಜನಪ್ರಿಯ ತಾಣವಾಗಿರುವ ಮೋಹರ್ ಬೆಟ್ಟದ ತುದಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಈ ದುರ್ಘಟನೆ ನಡೆದಿದೆ. ನೂರಾರು ಜನರು ಅಲ್ಲಿ ಇದ್ದಾಗಲೇ ಈ ಘಟನೆ ಜರುಗಿದೆ.

ದುರ್ಷಟನೆಯ ಅಲಾರ್ಮ್ ಮೊಳಗಿದ ಕೂಡಲೆ ಆತನ ದೇಹದ ಹುಡುಕಾಟಕ್ಕೆ ಹೆಲಿಕಾಪ್ಟರ್, ತುರ್ತು ಸೇವೆ ಕರೆಸಿಕೊಳ್ಳಲಾಯಿತು. ಸಮುದ್ರ ತಟದಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಹತ್ತಿರದ ಡೂಲಿನ್ ಗೆ ಕರೆದೊಯ್ಯಲಾಯಿತಾದರೂ ಅಲ್ಲಿಗೆ ಕರೆದುಕೊಂಡು ಹೋಗುವಾಗಲೇ ಕೊನೆಯುಸಿರೆಳೆದಿದ್ದ.
2007ರಲ್ಲಿ ಇದೇ ಸ್ಥಳದಲ್ಲಿ ಇಂಥದೇ ದುರ್ಘಟನೆ ನಡೆದಿತ್ತು. ಹಂಗರಿಯ ವ್ಯಕ್ತಿಯೊಬ್ಬರು ಇಲ್ಲಿ ಫೋಟೋ ತೆಗೆದುಕೊಳ್ಳುವಾಗ ಆಯತಪ್ಪಿ ಬಿದ್ದು ಅಸುನೀಗಿದ್ದರು. ಪೊಲೀಸರು ವಿದ್ಯಾರ್ಥಿಯ ಭಾರತದಲ್ಲಿರುವ ಪೋಷಕರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ.
ಈ ಸೆಲ್ಫಿ ಹುಚ್ಚು ಎಂದು ಮಾಯವಾಗುವುದೋ? ಸೆಲ್ಫಿ ಎನ್ನುವುದು ಒಂದು ಮಾನಸಿಕ ಅಸ್ವಸ್ಥತೆಯಂತಾಗಿದೆ. ಹಲವರು ಸಮುದ್ರದ ಅಲೆಗಳಿಗೆ, ರೈಲಿನ ಹಳಿಗೆ ಸಿಲುಗಿ ಪ್ರಾಣ ನೀಗಿಕೊಂಡಿದ್ದಾರೆ. ಇಂಥದೇ ಘಟನೆ ಕ್ಯಾಲಿಫೋರ್ನಿಯಾದಲ್ಲಿ ಕೂಡ ಕಳೆದ ಅಕ್ಟೋಬರ್ ನಲ್ಲಿ ನಡೆದಿತ್ತು.
ಕ್ಯಾಲಿಫೋರ್ನಿಯಾದ ಯೂಸೆಮೈಟ್ ನ್ಯಾಷನಲ್ ಪಾರ್ಕ್ ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ, ಪ್ರವಾಸವನ್ನು ತುಂಬಾ ಇಷ್ಟಪಡುತ್ತಿದ್ದ ಭಾರತದ ದಂಪತಿಗಳಾದ ಮೀನಾಕ್ಷಿ ಮೂರ್ತಿ ಮತ್ತು ವಿಷ್ಣು ವಿಶ್ವನಾಥ್ ಅವರು ಪ್ರಪಾತಕ್ಕೆ ಬಿದ್ದು ದುರಂತ ಸಾವಿಗೀಡಾಗಿದ್ದರು.












Click it and Unblock the Notifications