ಅಮೆರಿಕದಲ್ಲಿ ಅಣ್ಣಾಮಲೈ ಸ್ವಾಮೀಜಿಗೆ 27 ವರ್ಷ ಶಿಕ್ಷೆ
ಜಾರ್ಜಿಯಾ, ಏ.15: ವಂಚನೆ ಆರೋಪ ಹೊತ್ತಿರುವ ತಮಿಳುನಾಡು ಮೂಲದ ಹಿಂದೂ ಅರ್ಚಕ ಕಮ್ ಸ್ವಾಮೀಜಿ ಅಣ್ಣಾಮಲೈ ಎಂಬುವರಿಗೆ 27 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಸ್ವಾಮೀಜಿ ಸೆಲ್ವಂ ಸಿದ್ಧಾರ್ ಅಲಿಯಾಸ್ ಅಣ್ಣಾಮಲೈ ಮೇಲೆ ಬ್ಯಾಂಕುಗಳಿಗೆ ಮೋಸ, ತೆರಿಗೆ ವಂಚನೆ, ಮನಿಲಾಂಡ್ರಿಂಗ್ ಸೇರಿದಂತೆ ಹಲವಾರು ಅರೋಪಗಳನ್ನು ಹೊರೆಸಲಾಗಿದೆ.
ಆಗಸ್ಟ್ 2014ರಲ್ಲಿ ಸ್ವಾಮೀಜಿ ಇದ್ದ ದೇಗುಲದಲ್ಲಿ ಅವ್ಯವಹಾರ ನಡೆಸಿದ ಆರೋಪ ಹೊರೆಸಲಾಗಿತ್ತು.ಪವಿತ್ರ ಸ್ಥಳವನ್ನು ಅಪವಿತ್ರ ಮಾಡಿದ್ದಲ್ಲದೆ, ಅವ್ಯವಹಾರ ಮಾಡಿ ಜನರ ಮುಂದೆ ತಲೆ ತಗ್ಗಿಸುವ ಕೆಲಸ ಮಾಡಿದ ಅಣ್ಣಾಮಲೈಗೆ 27 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಟರ್ನಿ ಜಾನ್ ಎ ಹಾರ್ನ್ ವಾದಿಸಿದ್ದರು.

ಅಣ್ಣಾಮಲೈ ತನ್ನ ಅನುಯಾಯಿಗಳ ಕ್ರೆಡಿಟ್ ಕಾರ್ಡ್ ದುರ್ಬಳಕೆ ಮಾಡಿರುವುದು ಸಾಬೀತಾಗಿದೆ. ದೇಗುಲಕ್ಕೆ ಸಿಕ್ಕ ದಾನ ದತ್ತಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ಅಣ್ಣಾಮಲೈ ಹಾಗೂ ಆತನ ಕುಟುಂಬ ಐಷಾರಾಮಿ ಜೀವನ ಸಾಗಿಸುತ್ತಿದ್ದು, ಬಂಗಲೆ, ಕಾರು, ವಿದೇಶಿ ಬ್ಯಾಂಕುಗಳಲ್ಲಿ ಭಾರಿ ಮೊತ್ತದ ಹಣ ಹೊಂದಿರುವುದು ಪತ್ತೆಯಾಗಿದೆ. ಇದೆಲ್ಲವೂ ದೇಗುಲದಿಂದ ಬಂದ ಹಣವಾಗಿದೆ ಎಂದು ಯುಎಸ್ ಡಿಸ್ಟ್ರಿಕ್ ಕೋರ್ಟ್ ಜಡ್ಜ್ ತಿಮೋತಿ ಬ್ಯಾಟನ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಅಣ್ಣಾಮಲೈ ಅವರನ್ನು ಪ್ರತ್ಯೇಕ ಸೆಲ್ ನಲ್ಲಿ ಇರಿಸಲು ಸೂಚಿಸಲಾಗಿದ್ದು, ಅವರ ಪ್ರತಿ ಟೆಲಿಫೋನ್ ಸಂಭಾಷಣೆ, ಎಲೆಕ್ಟ್ರಾನಿಕ್ ಸಂವಹನ ಚಟುವಟಿಕೆಗಳ ಮೇಲೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶಿಸಿದೆ.(ಪಿಟಿಐ)












Click it and Unblock the Notifications