India vs Pakistan: ಪಾಕಿಸ್ತಾನದ ವಾಯುನೆಲೆಗಳ ಮೇಲೆ ಭಾರತ ದಾಳಿ
ಭಾರತ ಹಾಗೂ ಪಾಕಿಸ್ತಾನದ ನಡುವೆ ಸಂಘರ್ಷ ಮುಂದುವರಿದಿದೆ. ಶುಕ್ರವಾರ ರಾತ್ರಿ ಪಾಕ್‌ಗೆ ತಕ್ಕ ಉತ್ತರ ನೀಡಿರುವ ಭಾರತ ಶನಿವಾರ ಬೆಳಗಿನ ಜಾವ ಪಾಕಿಸ್ತಾನದ ಕನಿಷ್ಠ ನಾಲ್ಕು ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಲೇ ಇದೆ.
ಪಾಕಿಸ್ತಾನವು ಭಾರತದಾದ್ಯಂತ 26 ಸ್ಥಳಗಳ ಮೇಲೆ ದಾಳಿ ಮಾಡಿದ ತಕ್ಷಣ ಭಾರತ ಪ್ರತೀಕಾರದ ದಾಳಿ ನಡೆಸಿದೆ ಎಂದು ಎಎನ್‌ಐ ವರದಿ ಮಾಡಿದೆ. ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಹಲವಾರು ಸ್ಥಳಗಳಲ್ಲಿ ಇನ್ನೂ ಮಧ್ಯಂತರ ಗುಂಡಿನ ದಾಳಿ ನಡೆಯುತ್ತಿದೆ. ಪಾಕಿಸ್ತಾನದೊಂದಿಗಿನ ಅಂತರರಾಷ್ಟ್ರೀಯ ಗಡಿ ಮತ್ತು ಎಲ್‌ಒಸಿಯಲ್ಲಿ 26 ಸ್ಥಳಗಳಲ್ಲಿ ಡ್ರೋನ್‌ಗಳು ಕಾಣಿಸಿಕೊಂಡಿವೆ. ಇವುಗಳಲ್ಲಿ ಶಂಕಿತ ಸಶಸ್ತ್ರ ಡ್ರೋನ್‌ಗಳು ಕೂಡ ಸೇರಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಬಾರಾಮುಲ್ಲಾ, ಶ್ರೀನಗರ, ಅವಂತಿಪೋರಾ, ನಾಗ್ರೋಟಾ, ಜಮ್ಮು, ಫಿರೋಜ್‌ಪುರ, ಪಠಾಣ್‌ಕೋಟ್, ಫಜಿಲ್ಕಾ, ಲಾಲ್‌ಗಢ್ ಜಟ್ಟಾ, ಜೈಸಲ್ಮೇರ್, ಬಾರ್ಮರ್, ಭುಜ್, ಕುವಾರ್ಬೆಟ್ ಮತ್ತು ಲಖಿ ನಲಾಗಳಲ್ಲಿ ಈ ಕೃತ್ಯ ಕಂಡುಬಂದಿದೆ. ಫಿರೋಜ್‌ಪುರದ ನಾಗರಿಕ ಪ್ರದೇಶವನ್ನು ಗುರಿಯಾಗಿಸಿಕೊಂಡು ಸಶಸ್ತ್ರ ಡ್ರೋನ್ ದಾಳಿ ನಡೆಸಿದ್ದು, ಸ್ಥಳೀಯ ಕುಟುಂಬದ ಸದಸ್ಯರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲಾಗಿದೆ ಎಂದು ಹೇಳಿದೆ.
ಭಾರತೀಯ ಸಶಸ್ತ್ರ ಪಡೆಗಳು ಹೆಚ್ಚಿನ ಜಾಗರೂಕತೆಯನ್ನು ಕಾಯ್ದುಕೊಂಡಿವೆ. ಎಲ್ಲ ವೈಮಾನಿಕ ಬೆದರಿಕೆಗಳನ್ನು ಪ್ರತಿ-ಡ್ರೋನ್ ವ್ಯವಸ್ಥೆಗಳನ್ನು ಬಳಸಿಕೊಂಡು ಪತ್ತೆಹಚ್ಚಲಾಗುತ್ತಿದೆ. ನಿರಂತರ ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ನಾಗರಿಕರು ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಮನೆಯಿಂದ ಒಳಗೇ ಇರುವಂತೆ, ಅನಗತ್ಯ ಚಲನೆ ಕಡಿಮೆ ಮಾಡುವಂತೆ ಸೂಚನೆ ನೀಡಲಾಗಿದೆ. ಯಾವುದೇ ಭಯ ಬೀಳುವ ಅಗತ್ಯವಿಲ್ಲದಿದ್ದರೂ ಹೆಚ್ಚಿನ ಜಾಗರೂಕತೆ ಮತ್ತು ಮುನ್ನೆಚ್ಚರಿಕೆ ಅತ್ಯಗತ್ಯ ಎಂದು ತಿಳಿಸಿದೆ.

ಭಾರತವು ಪಾಕಿಸ್ತಾನದ ಬ್ಯಾಲಿಸ್ಟಿಕ್ ಕ್ಷಿಪಣಿ "ಫತಾಹ್"ವನ್ನು ಹೊಡೆದುರುಳಿಸಿದೆ. ಅದು ಭಾರತದ ಕಾರ್ಯತಂತ್ರದ ಪಶ್ಚಿಮ ವಲಯವನ್ನು ಗುರಿಯಾಗಿರಿಸಿಕೊಂಡಿತ್ತು ಎನ್ನಲಾಗಿದೆ. ಸಿರ್ಸಾದ ಮೇಲೆ ಪಾಕಿಸ್ತಾನದ ಫತಾಹ್-II ಕ್ಷಿಪಣಿಯನ್ನು ಭಾರತೀಯ ಪಡೆಗಳು ತಡೆಹಿಡಿದು, ಜಮ್ಮು ವಾಯುನೆಲೆಯ ಮೇಲಿನ ದಾಳಿಯನ್ನು ವಿಫಲಗೊಳಿಸಿವೆ. ಸುಮಾರು 400 ಕಿ.ಮೀ. ದಾಳಿ ವ್ಯಾಪ್ತಿಯನ್ನು ಹೊಂದಿರುವ ದೀರ್ಘ ವ್ಯಾಪ್ತಿಯ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯನ್ನು ಪಾಕಿಸ್ತಾನ ಹಾರಿಸಿತು. ಆದರೆ ಅದನ್ನು ಹರಿಯಾಣದಲ್ಲಿ ಆಕಾಶದಲ್ಲಿಯೇ ಭಾರತ ಹೊಡೆದುರುಳಿಸಿತು.
ಭಾರತವು ಪಾಕಿಸ್ತಾನದ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಆದರೆ ಪಾಕಿಸ್ತಾನದ ಸೇನಾ ವಕ್ತಾರ ಅಹ್ಮದ್ ಷರೀಫ್ ಪಾಕಿಸ್ತಾನದ ಎಲ್ಲಾ ವಾಯುಪಡೆಯ ಸ್ವತ್ತುಗಳು ಸುರಕ್ಷಿತವಾಗಿವೆ ಎಂದು ಹೇಳಿಕೊಂಡಿದ್ದಾರೆ. ರಾವಲ್ಪಿಂಡಿಯ ಗ್ಯಾರಿಸನ್ ನಗರದಲ್ಲಿರುವ ನೂರ್ ಖಾನ್ ವಾಯುನೆಲೆ, ಚಕ್ವಾಲ್ ನಗರದ ಮುರಿದ್ ವಾಯುನೆಲೆ ಮತ್ತು ಪೂರ್ವ ಪಂಜಾಬ್ ಪ್ರಾಂತ್ಯದ ಜಾಂಗ್ ಜಿಲ್ಲೆಯ ರಫೀಕಿ ವಾಯುನೆಲೆಯನ್ನು ಭಾರತ ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ. ಭಾರತ ಹಾರಿಸಿದ ಕೆಲವು ಕ್ಷಿಪಣಿಗಳು ಅಫ್ಘಾನಿಸ್ತಾನಕ್ಕೂ ಹೋದವು ಎಂದಿದ್ದಾರೆ.












Click it and Unblock the Notifications