ಭಾರತ ಇಲ್ಲದೆ ವ್ಯಾಕ್ಸಿನ್ ಸಿಗಲ್ಲ, ರಷ್ಯಾದಿಂದ 100 ಮಿಲಿಯನ್ ಡೋಸ್ ಆರ್ಡರ್
ಭಾರತದ ಮಿತ್ರ ಹಾಗೂ ಅಮೆರಿಕದ ಶತ್ರು ರಷ್ಯಾ ಭಾರತದ ಮುಂದೆ ವ್ಯಾಕ್ಸಿನ್ ತಯಾರಿಕೆಗೆ ಬೇಡಿಕೆ ಇಟ್ಟಿದೆ. ಸುಮಾರು 100 ಮಿಲಿಯನ್ ಡೋಸ್ ಉತ್ಪಾದನೆಗೆ ರಷ್ಯಾ ಮನವಿ ಮಾಡಿದೆ. ಅಷ್ಟಕ್ಕೂ ಭಾರತ ಐಟಿ ಹಬ್ ಮಾತ್ರವಲ್ಲ, ಫಾರ್ಮಾ ಇಂಡಸ್ಟ್ರೀ ವಿಚಾರದಲ್ಲೂ ಕಿಂಗ್. ಭಾರತದಲ್ಲಿ ಉತ್ಪಾದನೆಯಾಗದ ಔಷಧಗಳೇ ಇಲ್ಲ ಎನ್ನಬಹುದು.
ಅಷ್ಟರಮಟ್ಟಿಗೆ ಫಾರ್ಮಾ ಇಂಡಸ್ಟ್ರಿ ಭಾರತವನ್ನೇ ಅವಲಂಬಿಸಿದೆ. ಡೆಡ್ಲಿ ಕ್ಯಾನ್ಸರ್ ರೋಗದಿಂದ ಹಿಡಿದು, ಜ್ವರದ ಮಾತ್ರೆವರೆಗೂ ಭಾರತದಲ್ಲೇ ಔಷಧಗಳು ತಯಾರಾಗುತ್ತವೆ. ಇದೀಗ ಕೊರೊನಾ ವ್ಯಾಕ್ಸಿನ್‌ನ ಉತ್ಪಾದನೆಗೂ ಭಾರತದ ಸಹಾಯ ಅತ್ಯಗತ್ಯವಾಗಿದೆ. ಈಗಾಗಲೇ ಬ್ರಿಟನ್ ಆಕ್ಸಫರ್ಡ್ ವಿವಿ ಸಂಶೋಧಿಸಿದ ಲಸಿಕೆ ಹಾಗೂ ಅಮೆರಿಕದ ಲಸಿಕೆಗಳನ್ನು ಭಾರತದಲ್ಲಿ ಉತ್ಪಾದನೆ ಮಾಡಲು ಒಪ್ಪಂದವಾಗಿದೆ.
ಜಗತ್ತಿನಾದ್ಯಂತ ಸಿದ್ಧವಾಗುತ್ತಿವೆ 200ಕ್ಕೂ ಹೆಚ್ಚು ಕೋವಿಡ್ ಲಸಿಕೆಗಳು
ಈ ಲಸಿಕೆಗಳ ಜೊತೆಗೆ ರಷ್ಯಾದ 'ಸ್ಪುಟ್ನಿಕ್-ವಿ' ತಯಾರಿಕೆಗೂ ಭಾರತದ ಜೊತೆ ಒಪ್ಪಂದ ಏರ್ಪಟ್ಟಿದೆ. ಜಗತ್ತಿನ ಮೊದಲ ಕೊರೊನಾ ಲಸಿಕೆ ಎಂಬ ಹೆಗ್ಗಳಿಕೆ 'ಸ್ಪುಟ್ನಿಕ್-ವಿ'ಗೆ ಸಲ್ಲುತ್ತದೆ. ಎಲ್ಲರಿಗಿಂತಲೂ ಮೊದಲೇ ರಷ್ಯಾ ಸ್ಪುಟ್ನಿಕ್ ಲಸಿಕೆಗೆ ಅಸ್ತು ಎಂದಿತ್ತು. ಕಳೆದ ಆಗಸ್ಟ್‌ನಲ್ಲೇ 'ಸ್ಪುಟ್ನಿಕ್-ವಿ' ಲಸಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಅಂದಿನಿಂದ ರಷ್ಯಾ ಭಾರತದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಲಸಿಕೆ ತಯಾರಿಕೆಗೆ ಬೇಕಾದ ಸಿದ್ಧತೆ ಮಾಡಿಕೊಂಡಿತ್ತು

‘ಸ್ಪುಟ್ನಿಕ್-ವಿ’ ಮೇಲೆ ಸಿಕ್ಕಾಪಟ್ಟೆ ಅನುಮಾನ
ರಷ್ಯಾ ವಿರೋಧಿ ರಾಷ್ಟ್ರಗಳು, ಅದರಲ್ಲೂ ಯುರೋಪ್ ಹಾಗೂ ಅಮೆರಿಕ ‘ಸ್ಪುಟ್ನಿಕ್-ವಿ' ಲಸಿಕೆಯ ಮೇಲೆ ಕೆಂಗಣ್ಣು ಬೀರಿವೆ. ಏಕೆಂದರೆ ಸ್ಪುಟ್ನಿಕ್-ವಿ ಲಸಿಕೆಗೆ ಅನುಮತಿ ನೀಡುವ ಮೊದಲು ಅನುಸರಿಸಬೇಕಾದ ಕ್ರಮ ಹಾಗೂ ನಡೆಸಬೇಕಾದ ಪರೀಕ್ಷೆಗಳನ್ನು ಸೂಕ್ತವಾಗಿ ನಡೆಸಿಲ್ಲ ಎಂಬ ಆರೋಪವಿದೆ. ಸೋಂಕಿತರಿಗೆ ಇದರಿಂದ ಅಪಾಯ ಎದುರಾಗಬಹುದು ಎಂಬುದು ಯುರೋಪ್ ಹಾಗೂ ಅಮೆರಿಕದ ವ್ಯಾಕ್ಸಿನ್ ತಜ್ಞರ ಅಭಿಪ್ರಾಯ. ಆದರೆ ಪುಟಿನ್ ಸರ್ಕಾರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಸ್ಪುಟ್ನಿಕ್-ವಿ ಲಸಿಕೆ ಬಳಕೆಗೆ ಅನುಮತಿ ನೀಡಿ ಉತ್ಪಾದನೆಯನ್ನೂ ಆರಂಭಿಸಿದೆ. ಈಗ ಭಾರತದಲ್ಲೂ 100 ಮಿಲಿಯನ್ ಸ್ಪುಟ್ನಿಕ್-ವಿ ಡೋಸ್ ಉತ್ಪಾದನೆ ಆಗುವುದು ಕನ್ಫರ್ಮ್ ಆಗಿದೆ.

ಬ್ರೆಜಿಲ್, ಚೀನಾ, ಕೊರಿಯಾ ಸಾಥ್
‘ಸ್ಪುಟ್ನಿಕ್-ವಿ' ಉತ್ಪಾದನೆಗೆ ರಷ್ಯಾ ಭಾರತವನ್ನು ಮಾತ್ರ ಅವಲಂಬಿಸಿಲ್ಲ. ಭಾರತದ ಜೊತೆ ಬ್ರೆಜಿಲ್, ಚೀನಾ ಹಾಗೂ ದಕ್ಷಿಣ ಕೊರಿಯಾ ದೇಶಗಳು ಕೂಡ ಸಾಥ್ ನೀಡಲಿವೆ. ಭಾರತದ ಜೊತೆಯಲ್ಲೇ ಈ 3 ದೇಶಗಳು ‘ಸ್ಪುಟ್ನಿಕ್-ವಿ' ವ್ಯಾಕ್ಸಿನ್ ಉತ್ಪಾದನೆ ಮಾಡಲಿವೆ. ಭಾರತದಂತೆ ಬ್ರೆಜಿಲ್, ಚೀನಾ ಹಾಗೂ ದಕ್ಷಿಣ ಕೊರಿಯಾ ದೇಶಗಳ ಔಷಧ ಉತ್ಪಾದನಾ ವಲಯ ಸಾಕಷ್ಟು ಪ್ರಗತಿ ಕಂಡಿದೆ. ಹೀಗಾಗಿ ಇಲ್ಲೂ ವ್ಯಾಕ್ಸಿನ್ ಉತ್ಪಾದಿಸುವ ಪ್ಲಾನ್ ರಷ್ಯಾ ಸರ್ಕಾರದ್ದು. ಹೀಗೆ ಉತ್ಪಾದನೆಯಾಗುವ ಲಸಿಕೆಯನ್ನ ಅಗತ್ಯಕ್ಕೆ ತಕ್ಕಂತೆ ಜಗತ್ತಿನ ಇತರೆಡೆಗೆ ಸರಬರಾಜು ಮಾಡಲು ರಷ್ಯಾ ಸಿದ್ಧತೆ ನಡೆಸಿದೆ.

ಈಗಿನ್ನೂ 3ನೇ ಹಂತ ಮುಗಿಯಬೇಕು..!
ಜಗತ್ತಿನ ಎಲ್ಲಾ ಲಸಿಕೆಗಳು 3ನೇ ಹಂತ ಮುಗಿಸಿ, ನಂತರ ಬಳಕೆಗೆ ಒಪ್ಪಿಗೆ ಪಡೆಯುತ್ತಿವೆ. ಆದರೆ ರಷ್ಯಾದ ‘ಸ್ಪುಟ್ನಿಕ್-ವಿ' ಲಸಿಕೆಗೆ ಮೊದಲ ಹಂತದಲ್ಲೇ ಅನುಮತಿ ನೀಡಲಾಗಿತ್ತು. ಪುಟಿನ್ ಸರ್ಕಾರದ ತೀರ್ಮಾನ ಜಗತ್ತಿನ ಕೆಂಗಣ್ಣಿಗೆ ಗುರಿಯಾಗುವ ಜೊತೆಗೆ ‘ಸ್ಪುಟ್ನಿಕ್-ವಿ' ವ್ಯಾಕ್ಸಿನ್ ಬಗ್ಗೆಯೇ ಹಲವು ಅನುಮಾನಗಳನ್ನ ಮೂಡಿಸಿತ್ತು. ಆದರೆ ಈ ಅನುಮಾನಗಳನ್ನು ಬಗೆಹರಿಸಲು ರಷ್ಯಾ ಸರ್ಕಾರ ಸಾಕಷ್ಟು ಪ್ರಯತ್ನಪಟ್ಟಿದೆ. ಈ ಮಧ್ಯೆ ‘ಸ್ಪುಟ್ನಿಕ್-ವಿ' ಲಸಿಕೆಯ 3ನೇ ಹಂತದ ಪರೀಕ್ಷೆ ಪ್ರಗತಿಯಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಇದರ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಸುಮಾರು 40 ಸಾವಿರ ಜನರು ಸ್ಪುಟ್ನಿಕ್-ವಿ ಲಸಿಕೆಯ 3ನೇ ಹಂತದ ಪ್ರಯೋಗದಲ್ಲಿ ಭಾಗಿಯಾಗಿದ್ದಾರೆ.

ಮೂರು ಲಸಿಕೆ ಕಂಪೆನಿಗಳು ಮೂರನೇ ಹಂತದಲ್ಲಿ ಲಸಿಕೆ
ಮೂರು ಲಸಿಕೆ ಕಂಪೆನಿಗಳು ಮೂರನೇ ಹಂತದ ಡೇಟಾಗಳನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಅನುಮೋದನೆಗೆ ಕೋರಿಕೆ ಸಲ್ಲಿಸಿವೆ. ಫೈಜರ್/ಬಯೋಎನ್‌ಟೆಕ್/ಫೋಸನ್ ಫಾರ್ಮಾದ ಲಸಿಕೆ ಶೇ 95ರಷ್ಟು ಪರಿಣಾಮಕಾರಿ ಎಂದಿವೆ. ಮಾಡೆರ್ನಾ/ಎನ್‌ಐಎಐಡಿ ಮೂಲದ ಸಂಸ್ಥೆ ಶೇ 95ರಷ್ಟು ಪರಿಣಾಮಕಾರಿ ಎಂದಿದೆ. ಆಕ್ಸ್‌ಫರ್ಡ್/ಆಸ್ಟ್ರಾಜೆನಿಕಾ ಲಸಿಕೆ ಶೇ 70ರಷ್ಟು ದಕ್ಷತೆಯನ್ನು ಪ್ರತಿಪಾದಿಸಿವೆ.