ಸುಡಾನ್‌ನಿಂದ ಭಾರತೀಯರ ರಕ್ಷಣೆಗೆ ‘ಆಪರೇಷನ್ ಕಾವೇರಿ’

ಖರ್ಟೋಮ್, ಸುಡಾನ್: ಹೊತ್ತಿ ಉರಿಯುತ್ತಿರುವ ಆಫ್ರಿಕಾ ದೇಶ ಸುಡಾನ್ ನೆಲದಿಂದ ಭಾರತೀಯರನ್ನ ರಕ್ಷಣೆ ಮಾಡಿ ತಾಯ್ನಾಡಿಗೆ ಕರೆತರಬೇಕು ಎಂಬ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಭಾರತೀಯ ನೌಕಾಪಡೆ ಮುಂದಾಳತ್ವದಲ್ಲಿ ಕಾರ್ಯಾಚರಣೆ ಆರಂಭವಾಗಿದೆ. ಸುಡಾನ್ (Sudan) ಸಂಘರ್ಷದಲ್ಲಿ ಸಿಲುಕಿ ನರಳುತ್ತಿರುವ ಭಾರತೀಯರ ರಕ್ಷಣೆಗೆ 'ಆಪರೇಷನ್ ಕಾವೇರಿ' ಆರಂಭವಾಗಿದೆ.

ಸುಡಾನ್ ಸೇನೆ ಹಾಗೂ ಅರೆ ಸೇನಾಪಡೆ ನಡುವೆ ಹಿಂಸಾಚಾರ ಭುಗಿಲೆದ್ದ ಪರಿಣಾಮ ಸುಮಾರು 500ಕ್ಕೂ ಹೆಚ್ಚು ಜನ ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೇ 3700ಕ್ಕೂ ಹೆಚ್ಚು ಗಾಯಾಳುಗಳು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಹೀಗಾಗಿ ಸುಡಾನ್ ಸಂಘರ್ಷದಲ್ಲಿ ಸಿಲುಕಿ ನರಳುತ್ತಿರುವ ಸಾವಿರಾರು ಭಾರತೀಯರ ರಕ್ಷಣೆಗೆ ಮನವಿ ಕೇಳಿಬಂದಿತ್ತು. ಇದೀಗ ಈ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ, ಭಾರತೀಯ ನೌಕಾಪಡೆಯ ಹಡಗುಗಳನ್ನ ಸುಡಾನ್‌ಗೆ ಕಳಿಸಿ ಭಾರತೀಯರ ರಕ್ಷಣೆಗೆ ಮುಂದಾಗಿದೆ. ಮೊದಲ ಬ್ಯಾಚ್‌ನಲ್ಲಿ ಸುಮಾರು 500 ಭಾರತೀಯರು ತಾಯ್ನಾಡಿಗೆ ಮರಳುವ ನಿರೀಕ್ಷೆ ಇದೆ.

India started citizens evacuation operation in Sudan

ಭಾರತೀಯ ಪ್ರಜೆಗಳು ತಾಯ್ನಾಡಿಗೆ

ಸುಡಾನ್ ಕಾರ್ಯಾಚರಣೆ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು, ಸುಡಾನ್‌ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನ ಕರೆತರಲು ಆಪರೇಷನ್ ಕಾವೇರಿ ನಡೆಯುತ್ತಿದೆ. 500 ಭಾರತೀಯರು ಸುಡಾನ್ ಬಂದರು ತಲುಪಿದ್ದಾರೆ. ಮತ್ತಷ್ಟು ಹಡಗು ಹಾಗೂ ವಿಮಾನಗಳು ಅವರನ್ನು ಕರೆತರಲು ಸಜ್ಜಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಬಗ್ಗೆ ಮಹತ್ವದ ಸಭೆ ನಡೆಸಲಾಗಿತ್ತು. ಸುಡಾನ್‌ನಿಂದ ಭಾರತೀಯರ ರಕ್ಷಣೆಗೆ ಪ್ರಧಾನಿ ಮೋದಿ ಆದೇಶ ನೀಡಿದ್ದರು.

ಮನೆಯಿಂದ ಹೊರ ಬಂದರೆ ಸಾವು

ತಿನ್ನಲು ಅನ್ನವಿಲ್ಲದೆ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ಸುಡಾನ್ ನೆಲದಲ್ಲಿ ಹಿಂಸೆ ಶುರುವಾಗಿದೆ. ಮಿಲಿಟರಿ, ಮುಖ್ಯ ಪ್ಯಾರಾ ಮಿಲಿಟರಿ ಪಡೆ ನಡುವೆ ಉಂಟಾದ ಸಂಘರ್ಷದಲ್ಲಿ ಸಿಲುಕಿ ಲಕ್ಷಾಂತರ ಅಮಾಯಕರು ಪರದಾಡುತ್ತಿದ್ದಾರೆ. ಮನೆಯಿಂದ ಹೊರ ಬಂದರೆ ಹೆಣಗಳು ಬೀಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿವಿಧ ಕಾರಣಕ್ಕೆ ಸುಡಾನ್‌ಗೆ ತೆರಳಿದ್ದ ಭಾರತೀಯರು ಕೂಡ ಸಂಕಷ್ಟಕ್ಕೆ ಸಿಲುಕಿ ಜೀವಭಯದಲ್ಲಿ ನರಳುತ್ತಿದ್ದಾರೆ. ಈ ಹೊತ್ತಲ್ಲೇ ಅಂತಾರಾಷ್ಟ್ರೀಯ ಸಮುದಾಯ ಕೂಡ ಭಾರತೀಯರಿಗೆ ನೆರವು ನೀಡಲು ಮುಂದಾಗಿದೆ.

ಸುಡಾನ್ ಸಂಘರ್ಷದ ಹಿಂದೆ ರಷ್ಯಾ?

ಅಂದಹಾಗೆ ಸುಡಾನ್ ಮತ್ತು ರಷ್ಯಾ ನಡುವೆ ಉತ್ತಮ ಸಂಬಂಧ ಇದ್ದು, ಎರಡೂ ರಾಷ್ಟ್ರಗಳು ವ್ಯಾವಹಾರಿಕವಾಗಿ ಸಾಕಷ್ಟು ಒಪ್ಪಂದ ಮಾಡಿಕೊಂಡಿವೆ. ಆದರೆ ಸುಡಾನ್ ಸೇನಾಧಿಕಾರಿಗಳ ಜೊತೆ ಸಂಪರ್ಕದಲ್ಲಿ ಇರುವ ರಷ್ಯಾದ ಖಾಸಗಿ ಸೈನಿಕ ಪಡೆ ಅಥವಾ ವ್ಯಾಗ್ನರ್ ಗುಂಪು ಈ ಘರ್ಷಣೆಗೆ ಕಾರಣ ಎಂಬ ಆರೋಪವನ್ನು ಅಮೆರಿಕದ ರಹಸ್ಯ ದಾಖಲೆಗಳಲ್ಲಿ ಮಾಡಲಾಗಿದೆ. ಈ ಬಗ್ಗೆ ಫ್ರಾನ್ಸ್ ಎಚ್ಚರಿಕೆ ಸಂದೇಶ ನೀಡಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಭೀಕರ ಯುದ್ಧದ ಸಂದರ್ಭದಲ್ಲೇ ಈ ಮಾಹಿತಿ ಹೊರಬಿದ್ದಿರುವುದು ಸಂಚಲನ ಸೃಷ್ಟಿಸಿದೆ.

India started citizens evacuation operation in Sudan

ಆಫ್ರಿಕಾದಲ್ಲೂ ರಷ್ಯಾ ಮೇಲುಗೈ

ಯುರೋಪ್ ಭಾಗದಲ್ಲಿ ತನ್ನ ಶಕ್ತಿ ಏನೆಂದು ತೋರಿಸಿರುವ ರಷ್ಯಾ ಇದೀಗ ಆಫ್ರಿಕಾ ದೇಶಗಳಲ್ಲೂ ತನ್ನ ಹಿಡಿತ ಬಿಗಿ ಮಾಡಿದೆ. ಇದು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳ ನೆಮ್ಮದಿ ಕೆಡಿಸಿದೆ. ಹೀಗಾಗಿ ರಷ್ಯಾ ಹಿಡಿತ ತಪ್ಪಿಸಲು ಅಮೆರಿಕ ಮತ್ತು ಅದರ ಸ್ನೇಹಿತ ರಾಷ್ಟ್ರಗಳು ಒಗ್ಗೂಡಿವೆ. ಸುಡಾನ್ ಸಂಘರ್ಷದ ವಿಚಾರದಲ್ಲೂ ಇಂತಹದ್ದೇ ಅಸ್ತ್ರ ಬಳಸಿದ್ದರೂ ಅಚ್ಚರಿ ಪಡಬೇಕಿಲ್ಲ. ಆದರೆ ಈ ಆರೋಪವನ್ನು ವ್ಯಾಗ್ನರ್ ಗುಂಪು ಅಲ್ಲಗಳೆದಿದೆ. ಇಷ್ಟೆಲ್ಲದರ ಮಧ್ಯೆ ರಷ್ಯಾ ವಿರುದ್ಧ ಪಾಶ್ಚಿಮಾತ್ಯ ದೇಶಗಳು ಆರೋಪ ಮಾಡುವುದನ್ನ ನಿಲ್ಲಿಸುತ್ತಿಲ್ಲ.

ಒಟ್ನಲ್ಲಿ ಸುಡಾನ್ ಕಿತ್ತಾಟ ಮತ್ತು ಹಿಂಸಾಚಾರ ಆಫ್ರಿಕಾ ದೇಶಗಳ ನಿದ್ದೆಗೆಡಿಸಿದೆ. ದಿಢೀರ್ ಶುರುವಾಗಿರುವ ಸಂಘರ್ಷ ಅನೇಕರನ್ನ ಬಲಿ ಪಡೆದಿದೆ. ಹಾಗೇ ಹೊಟ್ಟೆಪಾಡಿಗೆ ದೂರದ ದೇಶಕ್ಕೆ ಹೋದವರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಹೊತ್ತಲ್ಲೇ ಭಾರತ ಸರ್ಕಾರ 'ಆಪರೇಷನ್ ಕಾವೇರಿ' ಭಾರತೀಯ ಪ್ರಜೆಗಳ ರಕ್ಷಣೆಗೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+