Myanmar Earthquake: ಮ್ಯಾನ್ಮಾರ್ ನೆರವಿಗೆ ನಿಂತು 442 ಟನ್ ಪರಿಹಾರ ವಸ್ತು ರವಾನೆ ಮಾಡಿದ ಭಾರತ
ಮ್ಯಾನ್ಮಾರ್ ಭಾರಿ ಘೋರ ಭೂಕಂಪನಕ್ಕೆ ಸಿಲುಕಿ ನರಳಿ ಹೋಗಿದ್ದು, ಸಾವಿನ ಸಂಖ್ಯೆಯು 3,500ರ ಗಡಿ ದಾಟಿ ಭಯ ಹುಟ್ಟಿಸಿದೆ. ರಿಕ್ಟರ್ ಮಾಪಕದಲ್ಲಿ 7.7ರ ತೀವ್ರತೆಯಲ್ಲಿ ಭೂಮಿ ಕಂಪಿಸಿದ ನಂತರ ಮ್ಯಾನ್ಮಾರ್ ದೇಶ ನರಳಾಡಿ ಹೋಗಿದೆ. ಇಂತಹ ಸಮಯದಲ್ಲಿ ನೆರವಿಗೆ ನಿಲ್ಲಬೇಕಾದ ಸ್ನೇಹಿತ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿ ಇದ್ದು, ಮತ್ತೊಂದು ಸುತ್ತು ನೆರವಿನ ವಸ್ತುಗಳನ್ನು ರವಾನೆ ಮಾಡಿದೆ. ಈ ಮೂಲಕ, ಮ್ಯಾನ್ಮಾರ್ ನೆರವಿಗೆ ನಿಂತಿರುವ ಭಾರತ, ಕಷ್ಟದ ಸಮಯದಲ್ಲಿ ಕೈಹಿಡಿದಿದೆ.
ಮ್ಯಾನ್ಮಾರ್ ಮೊದಲೇ ಬಡತನ ಎದುರಿಸುತ್ತಿರುವ ದೇಶವಾಗಿದ್ದು, ಇದೀಗ ಭೂಕಂಪನವೂ ಅಟ್ಟಹಾಸ ತೋರಿದೆ. ಸಾವಿನ ಸಂಖ್ಯೆ ಜೊತೆ ಗಾಯಾಳುಗಳ ಸ್ಥಿತಿ ಕೂಡ ಬಿಗಡಾಯಿಸುತ್ತಿದ್ದು, ಈಗಿನ ಪರಿಸ್ಥಿತಿ ನೋಡಿದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಭಯ ಇದೆ. ಮ್ಯಾನ್ಮಾರ್ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಭೂಕಂಪನದ ಪರಿಣಾಮ ಜನರಿಗೆ ಅನ್ನ & ನೀರು ಸಿಗದಿರುವ ಪರಿಸ್ಥಿತಿ ಎದುರಾಗಿದೆ. ಕುಸಿದು ಬಿದ್ದ ಕಟ್ಟಡ & ಮನೆಗಳ ಬಳಿ ಜನರು ಗೋಳಾಡುತ್ತಿದ್ದು, ಈ ರೀತಿಯ ಸಂಷಕ್ಟ ಎದುರಾದಾಗ ಭಾರತ ಕೈಹಿಡಿದಿದೆ.

ಒಂದೇ ದಿನ 31 ಟನ್ ಸಾಮಗ್ರಿ ರವಾನೆ!
ಅಂದಹಾಗೆ, ಭೂಕಂಪ ಪೀಡಿತ ಮ್ಯಾನ್ಮಾರ್‌ಗೆ ಭಾರತ ಒಂದೇ ದಿನ ಬರೋಬ್ಬರಿ 31 ಟನ್ ಪರಿಹಾರ ಸಾಮಗ್ರಿ ರವಾನೆ ಮಾಡಿದೆ. ಮ್ಯಾನ್ಮಾರ್ ದೇಶಕ್ಕೆ ಶೋಧ ಮತ್ತು ರಕ್ಷಣೆ ಸೇರಿದಂತೆ ವೈದ್ಯಕೀಯ ನೆರವು ಕೂಡ ನೀಡಲಾಗಿದೆ. ಹಾಗೇ ಜನರಿಗೆ ಅಗತ್ಯ ಇರುವ ವಸ್ತುಗಳನ್ನ ಕೂಡ ಪೂರೈಕೆ ಮಾಡಲಾಗಿದೆ. ಮತ್ತೊಂದು ಕಡೆ ಥಾಯ್ಲೆಂಡ್ ದೇಶಕ್ಕೆ ಕೂಡ ಅಗತ್ಯ ಮಾನವೀಯ ನೆರವು ನೀಡಲು ಭಾರತ ಮುಂದಾಗಿದೆ. ಈ ಕಾರ್ಯಾಚರಣೆಗೆ 'ಆಪರೇಷನ್ ಬ್ರಹ್ಮ' ಎಂಬ ಹೆಸರು ಇಡಲಾಗಿದೆ. ಭಾರತದ ಈ ಸಹಾಯಕ್ಕೆ ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ ದೇಶಗಳು ಕೃತಜ್ಞತೆ ಅರ್ಪಿಸಿವೆ.
ಏನೆಲ್ಲಾ ವಸ್ತುಗಳನ್ನು ತಲುಪಿಸಿದೆ ಭಾರತ?
ಭಾರತೀಯ ಸೇನೆಯ ಸಿ-17 ಗ್ಲೋಬ್ ಮಾಸ್ಟರ್ ವಿಮಾನದಲ್ಲಿ ಇದೀಗ ನೆರವು ಸಾಮಗ್ರಿಗಳನ್ನ ರವಾನೆ ಮಾಡಲಾಗುತ್ತಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಕೂಡ ಈ ಕುರಿತು ಮಾಹಿತಿ ನೀಡಿದ್ದು, ಕಾರ್ಯಾಚರಣೆ ಬಗ್ಗೆ ತಿಳಿಸಿದ್ದಾರೆ. ಮಾರ್ಚ್ 28ರ ಶುಕ್ರವಾರ ಭೀಕರ ಭೂಕಂಪನ ಸಂಭವಿಸಿ, ಈಗಾಗಲೇ 3,500ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಹೀಗಾಗಿ ಈವರೆಗೂ ಭಾರತದ ಕಡೆಯಿಂದ 442 ಮೆಟ್ರಿಕ್ ಟನ್ ಆಹಾರ ಸಾಮಗ್ರಿ ರವಾನೆ ಮಾಡಲಾಗಿದೆ. ಅಕ್ಕಿ, ಅಡುಗೆ ಎಣ್ಣೆ, ನೂಡಲ್ಸ್... ಹೀಗೆ ಭೂಕಂಪನ ಪ್ರದೇಶದಲ್ಲಿ ನರಳಿರುವ ಜನರಿಗಾಗಿ ಏನೆಲ್ಲಾ ಬೇಕೋ ಅದನ್ನ ನೀಡಿ ಸಹಾಯ ಮಾಡಲಾಗುತ್ತಿದೆ.












Click it and Unblock the Notifications