ಪಾಕಿಸ್ತಾನವನ್ನು ಭಿಕ್ಷುಕ ದೇಶ ಮಾಡಿದ ಇಮ್ರಾನ್ ಖಾನ್ ಗೆ ಮೋದಿ ಗೌರವ ನೀಡಲ್ಲ: ಮರ್ಯಾಮ್
ಲಾಹೋರ್ (ಪಾಕಿಸ್ತಾನ), ಮೇ 29: ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸದ್ಯಕ್ಕೆ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ರ ಮಗಳು ಮರ್ಯಾಮ್ ಹಿಗ್ಗಾಮುಗ್ಗಾ ಛೇಡಿಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಿಮಗೆ ಯಾವ ಮರ್ಯಾದೆಯನ್ನೂ ನೀಡುವುದಿಲ್ಲ. ಕಳೆದ ಫೆಬ್ರವರಿಯಲ್ಲಿ ಎರಡು ದೇಶಗಳ ಮಧ್ಯೆ ಅಂಥ ಉದ್ವಿಗ್ನ ಸನ್ನಿವೇಶದಲ್ಲೂ ನಿಮ್ಮ ಫೋನ್ ಕರೆ ಕೂಡ ಸ್ವೀಕರಿಸಲಿಲ್ಲ ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಆಯ್ಕೆಯಾಗಿರುವ ಹಾಗೂ ಅಸಮರ್ಥ ಪ್ರಧಾನಿಯಾದ (ಇಮ್ರಾನ್) ಅವರಿಗೆ ಹೇಳಿದ್ದೇನೆ: ಮೋದಿ ಹಾಗೂ ವಿಶ್ವದ ಇತರ ನಾಯಕರು ಅವರಿಗೆ ಏಕೆ ಗೌರವ ನೀಡುವುದಿಲ್ಲ? ಏಕೆಂದರೆ, ಅವರಿಗೆ ಗೊತ್ತಿದೆ; ಇತರರ ಸಹಾಯದಿಂದ, ಜನರ ಮತಗಳನ್ನು ಅಪಹರಿಸಿ ಅಧಿಕಾರಕ್ಕೆ ಬಂದವರು ಇಮ್ರಾನ್. ಯಾರದೋ ತಾಳಕ್ಕೆ ನೀವು ಕುಣಿಯುತ್ತೀರಿ ಎಂದು ಸೈನ್ಯದ ಬಗ್ಗೆ ಪರೋಕ್ಷವಾಗಿ ಕುಟುಕಿದ್ದಾರೆ.
ಒಂದು ಬೊಂಬೆಗಿಂತ ಹೆಚ್ಚಿನ ಸ್ಥಾನ ಮಾನ ಇಮ್ರಾನ್ ಗೆ ಇಲ್ಲ. ಸ್ವಂತ ಕಾಲ ಮೇಲೆ ನಿಂತಿಲ್ಲ. ಅದಕ್ಕೆ ಜಗತ್ತಿನ ಇತರ ನಾಯಕರಿಗೆ ಇಮ್ರಾನ್ ಖಾನ್ ಬಗ್ಗೆ ಗೌರವವಿಲ್ಲ. ಷರೀಫ್ ನ ಗೆಳೆಯ ಮೋದಿ ಎನ್ನುತ್ತಿರುತ್ತಾರೆ ಇಮ್ರಾನ್ ಖಾನ್. ನವಾಜ್ ಷರೀಫ್ ರನ್ನು ಭೇಟಿ ಆಗಲು ಮೋದಿ ಪಾಕಿಸ್ತಾನಕ್ಕೆ ಬಂದರು. ವಾಜಪೇಯಿ ಬಂದರು. ಏಕೆಂದರೆ, ಷರೀಫ್ ಚುನಾಯಿತ ಪ್ರಧಾನಿ. ಇಡೀ ಜಗತ್ತು ಗೌರವ ನೀಡುತ್ತಿತ್ತು. ಆದರೆ ನೀವು ಹಾಗಲ್ಲ. ನಿಮ್ಮ ಕರೆ ಸ್ವೀಕರಿಸಲು ಸಹ ಮೋದಿ ಸಿದ್ಧರಿಲ್ಲ. ನೀವು ನಕಲಿ ಪ್ರಧಾನಿ ಎಂದಿದ್ದಾರೆ.

ನಾನು ನಿಮ್ಮನ್ನು ಮೋದಿಯವರ ಗೆಳೆಯ ಅಂತ ಕರೆಯಲ್ಲ. ನಮಗೆ ಭಾರತದ ಜತೆ ಶಾಂತಿ ಬೇಕು. ಎರಡು ದೇಶಗಳು ಎದುರಿಸುತ್ತಿರುವ ಸಮಸ್ಯೆಗೆ ಯುದ್ಧ ಪರಿಹಾರವಲ್ಲ. ಅಸಮರ್ಥ ಇಮ್ರಾನ್ ಖಾನ್ ಆಡಳಿತಾವಧಿಯಲ್ಲಿ ಪಾಕಿಸ್ತಾನ ಭಿಕ್ಷುಕ ದೇಶದಂತೆ ಆಗಿದೆ. ಇಂತಿಷ್ಟು ಡಾಲರ್ ಗೆ ದೇಶವನ್ನು ಐಎಂಎಫ್ ಗೆ ನೀಡಿದ್ದಾರೆ ಎಂದು ಮರ್ಯಾಮ್ ಆರೋಪ ಮಾಡಿದ್ದಾರೆ.

ದುರಂತ ಏನೆಂದರೆ, ಈ ದೇಶವನ್ನು ಅಣುಶಕ್ತಿ ಹೊಂದುವಂತೆ ಮಾಡಿದ ವ್ಯಕ್ತಿ (ನವಾಜ್ ಷರೀಫ್) ಲಾಹೋರ್ ನ ಕೋಟ್ ಲಖ್ ಪತ್ ನಲ್ಲಿ ಇದ್ದಾರೆ ಮತ್ತು ಯಾರು ಅಣ್ವಸ್ತ್ರ ಕಾರ್ಯಕ್ರಮಕ್ಕೆ ಅಡಿಗಲ್ಲು ಹಾಕಿದರೋ (ಝುಲ್ಫೀಕರ್ ಅಲಿ ಭುಟ್ಟೋ) ಅಂಥವರನ್ನು ನೇಣಿಗೆ ಏರಿಸಲಾಯಿತು ಎಂದು ಹೇಳಿದ್ದಾರೆ.












Click it and Unblock the Notifications