ಭಾರತದ ನಿಲುವು ಬದಲಾಗಲ್ಲ: ಪ್ರಧಾನಿ ಮೋದಿ ಅಮೆರಿಕ ಭೇಟಿಯಲ್ಲಿ ಗೊಂದಲ ಇಲ್ಲ?
ವಾಷಿಂಗ್ಟನ್: ಪ್ರಧಾನಿ ಮೋದಿ ಅವರ ಅಮೆರಿಕ ಪ್ರವಾಸಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಭೇಟಿ ಭಾರತ ಹಾಗೂ ಅಮೆರಿಕದ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಲಿದೆ. ಆದರೆ ರಷ್ಯಾ & ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ಯಾವ ನಿಲುವು ಕೈಗೊಳ್ಳುತ್ತೆ? ಅಮೆರಿಕ ಪರ ನಿಲುವು ಕೈಗೊಂಡು ರಷ್ಯಾಗೆ ಕೈಕೊಡುತ್ತಾ? ಎಂಬ ಪ್ರಶ್ನೆ ಇಡೀ ಜಗತ್ತನ್ನು ಕಾಡುತ್ತಿದೆ. ಆದರೆ ಈ ಪ್ರಶ್ನೆಗೆ ಉತ್ತರ ಈಗ ಸಿಕ್ಕೇಬಿಟ್ಟಿದೆ!
ಭಾರತ ಎಂದಿಗೂ ಜಗತ್ತಿನಲ್ಲಿ ತನ್ನ ಹೆಸರನ್ನ ಕೆಡಿಸಿಕೊಂಡಿಲ್ಲ. ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳು ಹಾಗೂ ರಷ್ಯಾ & ಚೀನಾ ಮಧ್ಯೆ ನಡೆಯುತ್ತಿರುವ ಕಿತ್ತಾಟದಲ್ಲಿ ತಲೆ ಹಾಕಲು ಹೋಗಿಲ್ಲ. ಆದರೆ ಆಧುನಿಕ ಜಗತ್ತಿನಲ್ಲಿ ಭಾರತ ಬಲಿಷ್ಠವಾಗಿ ಬೆಳೆದಿರುವುದನ್ನು ನೋಡಿ, ಅಮೆರಿಕ ಮತ್ತು ನ್ಯಾಟೋ ಪಡೆಗಳ ಗಮನ ಸೆಳೆಯುತ್ತಿದೆ. ಅದರಲ್ಲೂ ರಷ್ಯಾದ ಸ್ನೇಹಿತ ಎಂಬ ಪಟ್ಟ ಕಟ್ಟಿಕೊಂಡಿರುವ ಭಾರತವನ್ನ ತಮ್ಮ ಕಡೆ ಸೆಳೆಯಲು ಅಮೆರಿಕ, ನ್ಯಾಟೋ ಪಡೆಯ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಹೀಗಾಗಿ ಪ್ರಧಾನಿ ಮೋದಿ ಅವರ ಭೇಟಿ ಸಾಕಷ್ಟು ಗಮನ ಸೆಳೆದಿದ್ದು (PM Modi America Visit), ಭಾರತ ಕೂಡ ತನ್ನ ರಷ್ಯಾ ಪರವಾದ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾ? ಎಂಬ ಪ್ರಶ್ನೆ ಭುಗಿಲೆದ್ದಿದೆ.

ರಷ್ಯಾ ಬೇಕಾ, ಇಲ್ಲ ಅಮೆರಿಕ ಬೇಕಾ?
ಇಡೀ ಜಗತ್ತಿಗೆ ತಟಸ್ಥ ನಿಲುವಿನ ಪಾಠ ಹೇಳಿಕೊಟ್ಟಿದ್ದೇ ಭಾರತ ಎನ್ನಬಹುದು. ಏಕೆಂದರೆ ಬಲಿಷ್ಠ ರಾಷ್ಟ್ರಗಳ ಜಗಳದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಹೋಗಬಾರದೆಂಬ ಸಂದೇಶ ನೀಡಿದ್ದೇ ಭಾರತ. ಭಾರತದ ರೀತಿ ಇನ್ನೂ ಅಭಿವೃದ್ಧಿ ಆಗುತ್ತಿರುವ ದೇಶಗಳು ಬಲಿಷ್ಠ ರಾಷ್ಟ್ರಗಳ ನಡುವಿನ ಕಿತ್ತಾಟದಲ್ಲಿ ಮಧ್ಯಪ್ರವೇಶ ಮಾಡಿದರೆ ಪೆಟ್ಟು ಬೀಳುವುದು ಬಡ ರಾಷ್ಟ್ರಗಳಿಗೆ. ಹೀಗಾಗಿ ಎಲ್ಲ ದೇಶಗಳ ಜೊತೆಗೂ ಉತ್ತಮ ಸಂಬಂಧ ಬೆಳೆಸಿಕೊಂಡು ಬಂದಿದೆ ಭಾರತ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಮೆರಿಕ ಬೇರೆಯ ಆಟ ಶುರು ಮಾಡಿದೆ. ತಮ್ಮ ಕಡೆಗೆ ಭಾರತವನ್ನ ಎಳೆದುಕೊಳ್ಳಲು ಪ್ರಯತ್ನಿಸುತ್ತಿದೆ.
ಭಾರತದ ನಿಲುವಿನಲ್ಲಿ ಬದಲಾವಣೆ ಇಲ್ಲ!
ಹೌದು, ಈ ಮಾತು ಸತ್ಯ ಎನ್ನಬಹುದು. ಏಕೆಂದರೆ ಪ್ರಧಾನಿ ಮೋದಿ ಅವರ ಅಮೆರಿಕದ ಪ್ರವಾಸ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಪ್ರಮುಖವಾಗಿ ಈ ಭೇಟಿ ವೇಳೆ ರಷ್ಯಾ, ಉಕ್ರೇನ್ ಕದನ ವಿಚಾರ ಕೂಡ ಪ್ರಸ್ತಾಪ ಆಗಲಿದೆ. ಹೀಗಾಗಿ ಭಾರತ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಅದರಲ್ಲೂ ಪ್ರಧಾನಿ ಮೋದಿ ಅವರು ಈ ಹಿಂದೆ ಕೂಡ ರಷ್ಯಾ & ಉಕ್ರೇನ್ ಯುದ್ಧದ ಬಗ್ಗೆ ಸ್ಪಷ್ಟನೆ ನಿಡಿದ್ದಾರೆ. ಇದು ಯುದ್ಧ ಮಾಡುವ ಕಾಲಘಟ್ಟ ಅಲ್ಲ ಎಂಬುದನ್ನೂ ಪ್ರಧಾನಿ ಮೋದಿ ಅವರು ಹೇಳಿದ್ದರು. ಹೀಗಾಗಿ ಅಮೆರಿಕ ಅಧ್ಯಕ್ಷರು ಭಾರತಕ್ಕೆ ನ್ಯಾಟೋ ಸೇರುವ ಆಫರ್ ಕೊಟ್ಟರೂ ಅದನ್ನ ಭಾರತ ಒಪ್ಪುವ ಸಾಧ್ಯತೆ ಇಲ್ಲ.
ಅಮೆರಿಕ ನಾಯಕರು ಈಗಲಾದರೂ ಬದಲಾಗುತ್ತಾರಾ?
ಭಾರತದ ವಿಚಾರದಲ್ಲಿ ಅಮೆರಿಕ ಯಾವಾಗಲೂ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬರುತ್ತೆ. ಅದ್ರಲ್ಲೂ ಅಮೆರಿಕ & ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಜೊತೆ ತಂತ್ರಜ್ಞಾನ ಹಂಚಿಕೊಳ್ಳುತ್ತಿಲ್ಲ. ಮಿಲಿಟರಿ ಹಾರ್ಡ್‌ವೇರ್ ಸೇರಿದಂತೆ ನಿರ್ಣಾಯಕ ತಂತ್ರಜ್ಞಾನ ನೀಡುತ್ತಿಲ್ಲ ಎಂಬ ಆರೋಪ ಮೊದಲಿಂದಲೂ ಇತ್ತು. ಹಾಗೇ ಭಾರತ ಕೂಡ ಈ ಕಾರಣಕ್ಕೆ ರಷ್ಯಾ ದೇಶವನ್ನ ಅವಲಂಬಿಸುವ ಸ್ಥಿತಿ ಸೃಷ್ಟಿಯಾಗಿತ್ತು. ಭಾರತ ಸರ್ಕಾರ ಕೂಡ ಸಮಯ ಬಂದಾಗೆಲ್ಲಾ ಅಮೆರಿಕಗೆ ಈ ವಿಚಾರ ತಿಳಿಸುತ್ತಿದೆ. ಹೀಗಾಗಿ ಅಮೆರಿಕದ ಬೈಡನ್ ಆಡಳಿತ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿ, ಭಾರತಕ್ಕೆ ಬೇಕಾದ ಮಿಲಿಟರಿ ತಂತ್ರಜ್ಞಾನ ಕೊಡುವ ನಿರೀಕ್ಷೆ ಇದೆ.

ಇನ್ನು ಪ್ರಧಾನಿ ಮೋದಿ ಅವರ ಭೇಟಿ ಸಂದರ್ಭದಲ್ಲಿ ಹಲವು ತಂತ್ರಜ್ಞಾನದ ವಿನಿಮಯ ಕುರಿತು ಭಾರತ ಮತ್ತು ಅಮೆರಿಕ ನಡುವೆ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ. ರಕ್ಷಣಾ ಕ್ಷೇತ್ರ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಸೆಮಿಕಂಡಕ್ಟರ್‌ಗಳು ಮತ್ತು ದೂರಸಂಪರ್ಕ ಕ್ಷೇತ್ರ ಸೇರಿ ಸುಧಾರಿತ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಭಾರತದೊಂದಿಗೆ ಸಹಕಾರ ವಿಸ್ತರಿಸುವ ಅನೇಕ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಇದೆ. ಹೀಗೆ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತೊಂದು ಹಂತ ತಲುಪುವುದು ಪಕ್ಕಾ.












Click it and Unblock the Notifications