ಪಾಕಿಸ್ತಾನಕ್ಕೆ ಮತ್ತೊಂದು ಶಾಕ್: ಭಾರತದ ಬಂದರುಗಳಿಗೆ ಪಾಕ್ ಹಡಗುಗಳ ಎಂಟ್ರಿ ಇಲ್ಲ
ಪೆಹಲ್ಗಾಮ್ ಭಯೋತ್ಪಾದಕ ದಾಳಿ ಮೂಲಕ ಭಾರತವನ್ನು ಕೆಣಕಿದ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುವ ಕೆಲಸ ಒಂದೊಂದಾಗಿ ನಡೆಯುತ್ತಿದೆ. ಪಾಕಿಸ್ತಾನದ ಜೊತೆಗಿನ ಎಲ್ಲ ಸಂಬಂಧವನ್ನು ಮುರಿದುಕೊಂಡಿರುವ ಭಾರತ ಪಾಕ್ ಪ್ರಜೆಗಳನ್ನು ಗಡಿಪಾರು ಮಾಡಿ, ಸಿಂಧೂ ನದಿ ನೀರು ಹರಿವು ನಿಲ್ಲಿಸಿ ತಕ್ಕ ತಿರುಗೇಟು ನೀಡಿತ್ತು. ಇದೀಗ ಪಾಕ್‌ಗೆ ಮತ್ತೊಂದು ಶಾಕ್ ನೀಡಿರುವ ಭಾರತ ಇಲ್ಲಿನ ಬಂದರುಗಳಿಗೆ ಪಾಕ್ ಹಡಗುಗಳ ಪ್ರವೇಶವನ್ನು ನಿಷೇಧಿಸಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಸುರಕ್ಷತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಉಲ್ಲೇಖಿಸಿ ಭಾರತವು ಪಾಕಿಸ್ತಾನಕ್ಕೆ ಹೋಗುವ ಹಾಗೂ ಪಾಕಿಸ್ತಾನದಿಂದ ಇಲ್ಲಿಗೆ ಬರುವ ಹಡಗುಗಳಿಗೆ ಎಲ್ಲಾ ಬಂದರು ಪ್ರವೇಶವನ್ನು ನಿರ್ಬಂಧಿಸಿದೆ. ಭಾರತೀಯ ಹಡಗುಗಳು ಕೂಡ ಪಾಕ್ ಬಂದರುಗಳಿಗೆ ಭೇಟಿ ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚನೆ ನೀಡಿದೆ.

ಪಾಕಿಸ್ತಾನದ ಧ್ವಜವನ್ನು ಹೊಂದಿರುವ ಯಾವುದೇ ಹಡಗು ಯಾವುದೇ ಭಾರತೀಯ ಬಂದರಿಗೆ ಭೇಟಿ ನೀಡಲು ಅವಕಾಶವಿಲ್ಲ ಎಂದು ಹಡಗು ನಿರ್ದೇಶನಾಲಯದ ಮತ್ತೊಂದು ಆದೇಶ ಹೊರಡಿಸಿದೆ. ಸಾರ್ವಜನಿಕ ಹಿತಾಸಕ್ತಿ ಮತ್ತು ಭಾರತೀಯ ಹಡಗು ಸಾಗಣೆಯ ಹಿತಾಸಕ್ತಿಗಾಗಿ, ಭಾರತೀಯ ಆಸ್ತಿಗಳು, ಸರಕು ಮತ್ತು ಸಂಪರ್ಕಿತ ಮೂಲಸೌಕರ್ಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದೆ.
ಎಲ್ಲ ಆಮದು-ರಫ್ತಿಗೆ ಬ್ರೇಕ್
ಇದಲ್ಲದೆ ಪಾಕಿಸ್ತಾನದಿಂದ ಆಮದು ಆಗುವ ಅಥವಾ ರಫ್ತು ಮಾಡುವ ಸರಕುಗಳ ಎಲ್ಲ ಆಮದು ಮತ್ತು ಸಾಗಣೆಯ ಮೇಲೆ ಭಾರತ ಸಂಪೂರ್ಣ ನಿಷೇಧ ಹೇರಿದೆ. ಪಾಕಿಸ್ತಾನ ರಫ್ತು ಮಾಡುವ, ಎಲ್ಲ ಸರಕುಗಳ ನೇರ ಅಥವಾ ಪರೋಕ್ಷ ಆಮದು ಅಥವಾ ಸಾಗಣೆಯನ್ನು, ಮುಕ್ತವಾಗಿ ಆಮದು ಮಾಡಿಕೊಳ್ಳಬಹುದಾದ ಅಥವಾ ಬೇರೆ ರೀತಿಯಲ್ಲಿ ಅನುಮತಿಸಿದ್ದರೂ, ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗುತ್ತದೆ ಎಂದು ಅಧಿಸೂಚನೆ ಹೊರಡಿಸಿದೆ.

ವಾಣಿಜ್ಯ ಸಚಿವಾಲಯದ ಅಧಿಸೂಚನೆಯ ಪ್ರಕಾರ ವಿದೇಶಿ ವ್ಯಾಪಾರ ನೀತಿಯಲ್ಲಿ (FTP) ಹೊಸದಾಗಿ ಸೇರಿಸಲಾದ ನಿಬಂಧನೆಯು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಪಾಕಿಸ್ತಾನದಲ್ಲಿ ತಯಾರಾಗುವ ಅಥವಾ ರಫ್ತು ಮಾಡುವ ಎಲ್ಲಾ ಸರಕುಗಳ ನೇರ ಅಥವಾ ಪರೋಕ್ಷ ಆಮದು ಅಥವಾ ಸಾಗಣೆಯನ್ನು ನಿಷೇಧಿಸಿದೆ ಎಂದು ಉಲ್ಲೇಖಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿಬಂಧನೆಯನ್ನು ವಿಧಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಮೊದಲಿಗೆ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರಕ್ಕೆ ಬ್ರೇಕ್ ಬಿದ್ದಿದೆ. ಈಗಾಗಲೇ ಅಟ್ಟಾರಿ-ವಾಘಾ ಗಡಿಯ ಮೂಲಕ ವ್ಯಾಪಾರವನ್ನು ಮುಚ್ಚುವುದಾಗಿ ಘೋಷಿಸಿದೆ. ಇದು ಎರಡೂ ದೇಶಗಳ ನಡುವಿನ ಏಕೈಕ ಭೂ ಗಡಿಯಾಗಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ಭಾರತದೊಂದಿಗೆ ಎಲ್ಲ ವ್ಯಾಪಾರ ಸ್ಥಗಿತಗೊಳಿಸಿದೆ.
2024-25ರ ಅವಧಿಯಲ್ಲಿ ನೆರೆಯ ದೇಶದಿಂದ ಆಮದು ಮಾಡಿಕೊಳ್ಳಲಾದ ಪ್ರಮುಖ ಆಮದುಗಳಲ್ಲಿ ಹಣ್ಣುಗಳು ಮತ್ತು ಬೀಜಗಳು, ಕೆಲವು ಎಣ್ಣೆ ಬೀಜಗಳು ಮತ್ತು ಔಷಧೀಯ ಸಸ್ಯಗಳು ಮತ್ತು ಸಾವಯವ ರಾಸಾಯನಿಕಗಳು ಸೇರಿವೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.












Click it and Unblock the Notifications