Drone camera: ಡ್ರೋನ್ ಕ್ಯಾಮೆರಾ ಬಳಸಿ ಪತ್ನಿಯ ಲವ್ವಿಡವ್ವಿ ಪತ್ತೆ ಹಚ್ಚಿದ ಪತಿ
ಡ್ರೋನ್ ಕ್ಯಾಮೆರಾ ಬಳಸಿ ಪತ್ನಿಯ ರಾಸಲೀಲೆಯನ್ನು ಪತಿಯೊಬ್ಬ ಪತ್ತೆ ಮಾಡಿರುವ ಘಟನೆ ನಡೆದಿದೆ. ಪತಿಯೊಬ್ಬ ಪತ್ನಿ ಗುಡ್ಡಗಾಡು ಪ್ರದೇಶದ ಮೇಲಿರುವ ಗುಡಿಸಲಿಗೆ ಹೋದಾಗ ಡ್ರೋನ್ ಅನ್ನು ಆಕೆಯ ಹಿಂದೆ ಬಿಟ್ಟು ರಹಸ್ಯ ಬಯಲು ಮಾಡಿದ್ದಾನೆ. ಅಲ್ಲದೇ ಇದೇ ವಿಡಿಯೋ ಸಾಕ್ಷಿಯಾಗಿ ಇಟ್ಟುಕೊಂಡು ವಿಚ್ಚೇದನಕ್ಕೆ ಮುಂದಾಗಿದ್ದಾನೆ.
ಹೌದು... ಚೀನಾದ ಹುಬೈ ಪ್ರಾಂತ್ಯದ ಶಿಯಾನ್ ಎಂಬಲ್ಲಿ ಜಿಂಗ್ ಎಂಬ 33 ವರ್ಷದ ವ್ಯಕ್ತಿ ಕಳೆದ ಒಂದು ವರ್ಷದಿಂದ ತನ್ನ ಪತ್ನಿ ವೂ ಬದಲಾಗುತ್ತಿರುವ ವರ್ತನೆಯನ್ನು ಗಮನಿಸಿದ್ದರು. ಅವಳು ಉದ್ದೇಶಪೂರ್ವಕವಾಗಿ ಅನೇಕ ಬಾರಿ ಅವನನ್ನು ನಿರ್ಲಕ್ಷಿಸುತ್ತಿರುವುದು ಬೇಸರ ತಂದಿತ್ತು. ಹೀಗಾಗಿ ಜಿಂಗ್‌ಗೆ ತನ್ನ ಹೆಂಡತಿಯ ನಿಷ್ಠೆಯ ಮೇಲೆ ಅನುಮಾನ ಮೂಡಿದೆ. ಬಳಿಕ ಆತ ತನ್ನ ಹೆಂಡತಿ ಮೇಲೆ ಕಣ್ಣಿಡಲು ಪ್ರಾರಂಭಿಸಿದ್ದಾನೆ.

ಅನೇಕ ಬಾರಿ ಗೆಳೆಯ-ಗೆಳತಿ ಅಥವಾ ಗಂಡ-ಹೆಂಡತಿ ಪರಸ್ಪರ ನಿಷ್ಠೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಯಾರೇ ಆಗಲಿ ಈ ಅನುಮಾನವನ್ನು ತೆಗೆದುಹಾಕಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಹೀಗೆ ಚೀನಾದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಬಗ್ಗೆ ಸತ್ಯವನ್ನು ಕಂಡುಕೊಳ್ಳಲು ತುಂಬಾ ಪ್ರಯತ್ನಿಸಿದನು. ಆದರೆ ಪತ್ನಿಯನ್ನು ಅನುಮಾನಿಸುವುದಕ್ಕೆ ಯಾವುದೇ ಬಲವಾದ ಸಾಕ್ಷಿಗಳು ಇರಲಿಲ್ಲ. ಆದರೂ ತನ್ನ ಪತ್ನಿ ತನ್ನನ್ನು ಕಡೆಗಣಿಸುವುದು ಜಿಂಗ್‌ಗೆ ಅನುಮಾನ ಜಾಸ್ತಿ ಮಾಡಿತ್ತು.
ಕೆಲವೊಮ್ಮೆ ಅವರ ಹೆಂಡತಿ ಆಫೀಸ್‌ನಲ್ಲಿ ಹೆಚ್ಚು ಕೆಲಸ ಎಂದು ಹೇಳಿ ಮನೆಯಿಂದ ಹೊರಗುಳಿಯುತ್ತಿದ್ದಳು. ಕೆಲವೊಮ್ಮೆ ಅವಳು ತನ್ನ ಹೆತ್ತವರ ಮನೆಗೆ ಹೋಗುವುದಾಗಿ ಹೇಳುತ್ತಿದ್ದಳು. ಅನುಮಾನದಿಂದ ಜಿಂಗ್ ತನ್ನ ಹೆಂಡತಿ ಹೋದ ಕಡೆ ಡ್ರೋನ್ ಅನ್ನು ಬಳಸಲು ನಿರ್ಧರಿಸುತ್ತಾರೆ.
ಪತ್ನಿ ಹಿಂದೆ ಡ್ರೋನ್ ಕ್ಯಾಮರಾ ಬಿಟ್ಟು ಪತ್ನಿ ಎಲ್ಲಿಗೆ ಹೋಗುತ್ತಾಳೆಂದು ಜಿಂಗ್ ದೃಶ್ಯದಲ್ಲಿ ಲೈವ್ ಆಗಿ ಗಮನಿಸಿದ್ದಾರೆ. ಕ್ಯಾಮರಾದಲ್ಲಿ ಅವರ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಕೈಕೈ ಹಿಡಿದುಕೊಂಡು ಸುತ್ತಮುತ್ತಲು ಯಾರೂ ಇಲ್ಲದ ಹಳೆಯ ಮನೆಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ.

ಸುಮಾರು 20 ನಿಮಿಷಗಳ ನಂತರ ಅವರು ಮನೆಯಿಂದ ಹೊರಬರುತ್ತಾರೆ. ಬಳಿಕ ವೂ ಕೆಲಸ ಮಾಡುವ ಕಾರ್ಖಾನೆಯ ಕಡೆಗೆ ಹೊರಡುತ್ತಾರೆ. ಈ ಇನ್ನೊಬ್ಬ ವ್ಯಕ್ತಿ ಅವಳ ಬಾಸ್ ಎಂದು ಹೇಳಲಾಗುತ್ತದೆ. ವೂ ಅವನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಜಿಂಗ್ ಹೇಳಿದ್ದಾರೆ.
ವಿಶ್ವಾಸದ್ರೋಹಿ ಪತ್ನಿಯ ರಾಸಲೀಲೆಯನ್ನು ಪತಿ ಡ್ರೋನ್ ಸಹಾಯದಿಂದ ಬಯಲು ಮಾಡಿದ್ದಾರೆ. ಡ್ರೋನ್‌ನಿಂದ ಸಂಗ್ರಹಿಸಿದ ಸಾಕ್ಷ್ಯವನ್ನು ವಿಚ್ಛೇದನಕ್ಕೆ ಬಳಸುವುದಾಗಿ ಜಿಂಗ್ ಹೇಳಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋಗೆ ಹಲವು ಕಾಮೆಂಟ್‌ಗಳು ಬಂದಿವೆ. ಪೋಸ್ಟ್‌ನಲ್ಲಿ ಕಾಮೆಂಟ್ ಮಾಡುತ್ತಾ ನೆಟ್ಟಿಗರೊಬ್ಬರು ಹೀಗೆ ಬರೆದಿದ್ದಾರೆ- ''ಡ್ರೋನ್ ಖರೀದಿಸುವುದು ಒಳ್ಳೆಯದು. ಇದು ಇಲ್ಲದೆ ಇದ್ದರೆ ಜಿಂಗ್ ತಾನು ಮೋಸ ಹೋಗುತ್ತಿದ್ದೇನೆ ಎಂದು ಎಂದಿಗೂ ತಿಳಿಯುತ್ತಿರಲಿಲ್ಲ. ಇದು ತಂತ್ರಜ್ಞಾನದ ಮಾಂತ್ರಿಕ ಕೆಲಸ'' ಎಂದಿದ್ದಾರೆ. ಮತ್ತೊಬ್ಬರು ಬರೆದರು, 'ಈ ಹೈಟೆಕ್ ಯುಗದಲ್ಲಿ, ಯಾವುದೇ ಸುಳ್ಳು ಹೇಳಿದರೂ ದಂಪತಿಗಳು ಮಾತ್ರ ನಿಷ್ಠರಾಗಿ ಇರಬೇಕು' ಎಂದಿದ್ದಾರೆ.
ಅನುಮಾನಾಸ್ಪದ ಸ್ಥಳಗಳಲ್ಲಿ ಡ್ರೋನ್ ಬಳಸಲು ಚಿಂತನೆ
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸುಳ್ಳು ಹೇಳುವವರನ್ನು ಪತ್ತೆ ಮಾಡಲು ಡ್ರೋನ್ ಕ್ಯಾಮರಾ ಬಳಸಬಹುದು ಎನ್ನುವ ವಿಚಾರ ಎಲ್ಲರ ತಲೆಗೆ ಬರಲಾರಂಭಿಸಿದೆ. ಹೀಗಾಗಿ ಡ್ರೋನ್ ಬಗ್ಗೆ ಆಸಕ್ತಿ ಕೂಡ ಹೆಚ್ಚಾಗುತ್ತಿದೆ.
ಅನುಮಾನಾಸ್ಪದ ಸ್ಥಳಗಳಲ್ಲಿ ನಡೆಯುವ ಕೆಟ್ಟ ಕೆಲಸಗಳನ್ನು ತಡೆಯಲು ಕೂಡ ಡ್ರೋನ್ ಬಳಸಬಹುದು ಎಂದು ಜನ ಯೋಚಿಸುತ್ತಿದ್ದಾರೆ. ಚೀನಾದ ಈ ಸುದ್ದಿಯಿಂದ ಕಳ್ಳತನ ಹಾಗೂ ಇನ್ನಿತರ ಕೆಟ್ಟ ಕೆಲಸಗಳು ನಡೆಯುವ ಸ್ಥಳಗಳ ಬಗ್ಗೆ ಪರಿಶೀಲನೆ ಮಾಡಲು ಡ್ರೋನ್ ಬಳಕೆ ಉಪಯುಕ್ತಕಾರಿಯಾಗಿದೆ ಎನ್ನಲಾಗುತ್ತಿದೆ.
ಅಲ್ಲದೆ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತಿಳಿಯಲು ಇದು ಪ್ರಯೋಜನಕಾರಿಯಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ರಸ್ತೆ ಬದಿಯಲ್ಲಿ ಕಳ್ಳತನವಾದ ಕರೆ ಬಂದರೆ ಹತ್ತಿರದ ಠಾಣೆಯ ಪೊಲೀಸರು ತಾವಿದ್ದ ಸ್ಥಳದಿಂದಲೇ ಡ್ರೋನ್ ಕ್ಯಾಮರಾದ ಮೂಲಕ ಸ್ಥಳ ಮಾತ್ರವಲ್ಲದೆ ಕಳ್ಳರನ್ನೂ ಪತ್ತೆ ಮಾಡಬಹುದು. ಯಾವುದಾದರು ಮಾದಕ ವಸ್ತುಗಳ ಬಳಕೆ ಬಗ್ಗೆ ಅನುಮಾನವಿದ್ದರೆ ಅಲ್ಲೂ ಕೂಡ ಇದನ್ನು ಬಳಸಬಹುದು ಎನ್ನುವ ಚಿಂತನೆ ಮಾಡಲಾಗುತ್ತಿದೆ.












Click it and Unblock the Notifications