34 ಲಕ್ಷ ಜನರನ್ನು ಕತ್ತಲೆಗೆ ತಳ್ಳಿದ ಭೀಕರ ಚಂಡಮಾರುತ!
ಅಮೆರಿಕದ ಕರಾವಳಿ ಇದೀಗ ಭೀಕರ ಚಂಡಮಾರುತ ಅಬ್ಬರಕ್ಕೆ ಬೆಚ್ಚಿಬಿದ್ದು ನಲುಗಿ ಹೋಗಿದೆ. 'ಮಿಲ್ಟನ್' ಮಹಾ ಚಂಡಮಾರುತದ ಹೊಡೆತಕ್ಕೆ ತತ್ತರಿಸಿ ಹೋಗಿರುವ ಅಮೆರಿಕದ ಕರಾವಳಿ ಪ್ರದೇಶ ಫ್ಲೊರಿಡಾ ಸಾಕಷ್ಟು ದೊಡ್ಡ ಮಟ್ಟದ ನಷ್ಟಕ್ಕೆ ಸಾಕ್ಷಿಯಾಗಿದೆ. ನೂರಾರು ಕಿಲೋ ಮೀಟರ್ ವೇಗದಲ್ಲಿ ಬಂದು ಬಡಿದ ಗಾಳಿಯ ಅಬ್ಬರಕ್ಕೆ ಸಾವಿರಾರು ಮನೆಗಳು ನಾಶವಾಗಿ ಹೋಗಿದ್ದರೆ, ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಿದೆ. ಅದರಲ್ಲೂ 34 ಲಕ್ಷ ಜನರನ್ನು ಕತ್ತಲೆಗೆ ತಳ್ಳಿದ ಭೀಕರ ಚಂಡಮಾರುತಕ್ಕೆ ಜನರು ಹಿಡಿಶಾಪ ಹಾಕಿದ್ದಾರೆ!
'ಮಿಲ್ಟನ್' ಮಹಾ ಚಂಡಮಾರುತ ಫ್ಲೊರಿಡಾ ರಾಜ್ಯಕ್ಕೆ ಅಪ್ಪಳಿಸುವ ಬಗ್ಗೆ ಅಮೆರಿಕದಲ್ಲಿ ಭಾರಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಅಮೆರಿಕದ ಸರ್ಕಾರ ಹಾಗೂ ಫ್ಲೊರಿಡಾ ರಾಜ್ಯದ ಆಡಳಿತ ಕ್ರಮ ಕೈಗೊಂಡಿದ್ದರೂ ಈವರೆಗೂ ಸುಮಾರು 8 ಜನರನ್ನು ಬಲಿ ಪಡೆದಿದೆ ಈ 'ಮಿಲ್ಟನ್' ಮಹಾ ಚಂಡಮಾರುತ. ಅತ್ಯಂತ ಸೂಕ್ಷ್ಮ ಪ್ರದೇಶದಿಂದ ಜಾಗ ಖಾಲಿ ಮಾಡಿ ಎಂದು ಜನರು ಹಾಗೂ ಜಾನುವಾರುಗಳನ್ನು ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ, ಫ್ಲೊರಿಡಾದ ಕರಾವಳಿ ಭಾಗದ ಜನ ಹಾಗೂ ಫ್ಲೊರಿಡಾ ರಾಜ್ಯದ ಮಧ್ಯ ಭಾಗದಲ್ಲಿ ಜೀವನ ಕಟ್ಟಿಕೊಂಡಿದ್ದ ಜನರು ಎದ್ದು ಬಿದ್ದು ಮನೆ ಖಾಲಿ ಮಾಡಿಕೊಂಡು ಓಡಿದ್ದರು. ಇಷ್ಟೆಲ್ಲಾ ಕ್ರಮ ಕೈಗೊಂಡಿದ್ದರೂ ಭಾರಿ ವಿನಾಶ ಸೃಷ್ಟಿ ಮಾಡಿದೆ ಈ 'ಮಿಲ್ಟನ್' ಚಂಡಮಾರುತ.

34 ಲಕ್ಷ ಜನರನ್ನು ಕತ್ತಲೆಗೆ...
'ಮಿಲ್ಟನ್' ಚಂಡಮಾರುತದ ಬಗ್ಗೆ ಭಯ ಎಷ್ಟು ಇತ್ತು ಅಂದ್ರೆ, ಇಡೀ ಫ್ಲೊರಿಡಾ ರಾಜ್ಯ ಸರ್ವನಾಶ ಆಗಿ ಹೋಗಲಿದೆ ಎಂಬ ಭಯ ಕಾಡುತ್ತಿತ್ತು. ಅದರಲ್ಲೂ ಫ್ಲೊರಿಡಾ ರಾಜ್ಯದಲ್ಲಿ ಮಧ್ಯಭಾಗ ಹಾಗೂ ಅದರ ಸುತ್ತಮುತ್ತಲ ಪ್ರದೇಶದಲ್ಲಿ 'ಮಿಲ್ಟನ್' ಚಂಡಮಾರುತ ಭಾರಿ ದೊಡ್ಡ ಮಟ್ಟದಲ್ಲಿ ವಿನಾಶ ಸೃಷ್ಟಿ ಮಾಡುವ ಭಯ ಇತ್ತು. ಆದರೆ ಅದೃಷ್ಟ ಚನ್ನಾಗಿದ್ದ ಕಾರಣಕ್ಕೆ ಇದೀಗ ಅಂತಹ ವಾತಾವರಣ ಸೃಷ್ಟಿಯಾಗಿಲ್ಲ. ಸುಮಾರು 110 ಕಿಲೋ ಮೀಟರ್ ವೇಗದಲ್ಲಿ ಬಂದು ಭೂಮಿಗೆ ಅಪ್ಪಳಿಸಿರುವ 'ಮಿಲ್ಟನ್' ಚಂಡಮಾರುತ ಇದೀಗ ಒಂದಷ್ಟು ತಣ್ಣಗಾಗಿದೆ ಎನ್ನಲಾಗಿದೆ. ಮತ್ತೊಂದು ಕಡೆ 'ಮಿಲ್ಟನ್' ಚಂಡಮಾರುತ ಅಪ್ಪಳಿಸಿದ ಹಿನ್ನೆಲೆ ಸುಮಾರು 34 ಲಕ್ಷ ಜನರು ಕತ್ತಲೆಯಲ್ಲಿ ಪರದಾಡುತ್ತಿದ್ದಾರೆ.
ಫ್ಲೊರಿಡಾ ರಾಜ್ಯದಲ್ಲಿ ಮಳೆ ಆರ್ಭಟ!
ಒಂದು ಕಡೆ 34 ಲಕ್ಷ ಜನರು ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಪರದಾಡುತ್ತಿದ್ದರೆ, ಇನ್ನೊಂದು ಕಡೆ ಫ್ಲೊರಿಡಾ ರಾಜ್ಯದಲ್ಲಿ ಮಳೆ ಆರ್ಭಟ ಇನ್ನೂ ಕಡಿಮೆ ಆಗಿಲ್ಲ. ಸುಮಾರು 3 ತಿಂಗಳ ಕಾಲ ಸುರಿಯಬೇಕಿದ್ದ ಮಳೆ ಕೇವಲ ಒಂದೇ ದಿನದಲ್ಲಿ ಸುರಿದು ಹೋಗಿದೆ, ಈ ಕಾರಣಕ್ಕೆ ಈಗ ಫ್ಲೊರಿಡಾ ರಾಜ್ಯದಲ್ಲಿ ಪ್ರವಾಹ ಕೂಡ ಆವರಿಸಿದೆ. ಒಂದು ತಿಂಗಳ ಹಿಂದಷ್ಟೇ, ಅಮೆರಿಕದ ಫ್ಲೊರಿಡಾ ರಾಜ್ಯದಲ್ಲಿ ದೊಡ್ಡ ಚಂಡಮಾರುತ ಅಪ್ಪಳಿಸಿತ್ತು. ಸೆ. 26 ರಂದು ಫ್ಲೊರಿಡಾದಲ್ಲಿ ಈ ರೀತಿ ಸೈಕ್ಲೋನ್ ಅಪ್ಪಳಿಸಿತ್ತು. ಬಿಗ್ ಬೆಂಡ್ ಪ್ರದೇಶಕ್ಕೆ ಅಪ್ಪಳಿಸಿದ್ದ 'ಹೆಲೆನ್' 200 ಜನರ ಜೀವ ತೆಗೆದಿತ್ತು. ಆದರೆ ಇದೀಗ ಮುಂಜಾಗ್ರತೆ ತೆಗೆದುಕೊಂಡ ಕಾರಣ ಜೀವಹಾನಿ ಆಗಿಲ್ಲ.












Click it and Unblock the Notifications