ಕಾಸು ಕೊಡಲ್ಲ ಸರ್ಕಾರ: ಯುಎಸ್ ನೆಲದಲ್ಲಿ ಮಕ್ಕಳ ಆಹಾರಕ್ಕೂ ಹಾಹಾಕಾರ!
ವಾಶಿಂಗ್ಟನ್, ಡಿಸೆಂಬರ್ 23: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ತತ್ತರಿಸಿದ ವಿಶ್ವದ ದೊಡ್ಡಣ್ಣನ ನೆಲದಲ್ಲಿ ಹಸಿವಿನ ನೋವು ಹೆಚ್ಚಾಗಿದೆ. ಡಿಸೆಂಬರ್ ತಿಂಗಳ ರಜಾದಿನಗಳಲ್ಲಿ ಪುಟ್ಟ ಮಕ್ಕಳ ಆದಿಯಾಗಿ ಜನರು ಆಹಾರವಿಲ್ಲದೇ ಹಸಿವಿನ ನೋವು ಅನುಭವಿಸುತ್ತಿದ್ದಾರೆ ಎಂದು ಯುಎಸ್ ಸೆನ್ಸಸ್ ಬ್ಯೂರೋ ಅಂದಾಜಿಸಿದೆ.
ಸಾಂಕ್ರಾಮಿಕ ಪರಿಹಾರಗಳು ಖಾರಿ ಆಗಿದ್ದು, ದಿನಸಿ ಬೆಲೆಗಳು ಗಗನಮುಖಿಯಾಗಿ ಏರಿಕೆಯಾಗಿವೆ. ಇದರಿಂದಾಗಿ ಡಿಸೆಂಬರ್ ಆರಂಭದಲ್ಲಿ 21 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ತಿನ್ನುವುದಕ್ಕೆ ಆಹಾರವಿಲ್ಲದೇ ಪರಿತಪಿಸುವಂತಾ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಕಡಿಮೆ-ಆದಾಯವನ್ನು ಹೊಂದಿರುವ ಕುಟುಂಬಗಳು ಮಾಸಿಕ ಮಕ್ಕಳ ತೆರಿಗೆ ಕ್ರೆಡಿಟ್ ಪಾವತಿ(ಮಕ್ಕಳಿಗೆ ಆಹಾರ ಒದಗಿಸುವುದಕ್ಕಾಗಿ ನೀಡುವ ಆರ್ಥಿಕ ನೆರವು) ಕೊನೆಗೊಳ್ಳುವುದರ ಹಿನ್ನೆಲೆ ಶೀಘ್ರದಲ್ಲೇ ಹೆಚ್ಚಿನ ಒತ್ತಡ ಎದುರಿಸಬಹುದು. ಈ ಹಿನ್ನೆಲೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ಕಾರ್ಯಕ್ರಮದ ಅವಧಿ ವಿಸ್ತರಿಸಲು ಶಾಸನಕ್ಕೆ ಬೆಂಬಲಿಸಿದ್ದಾರೆ. ಇದರ ಮಧ್ಯೆ ಯೋಜನೆಯನ್ನು ವಿಸ್ತರಿಸಬೇಕೇ ಬೇಡವೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಯುಎಸ್ ನೆಲದಲ್ಲಿ ಆಹಾರ ಸಿಗುತ್ತಿಲ್ಲ
ಯುಎಸ್ ಸೆನ್ಸಸ್ ಬ್ಯೂರೋದ ಹೌಸ್‌ಹೋಲ್ಡ್ ಪಲ್ಸ್ ಸಮೀಕ್ಷೆಗಾಗಿ ಡಿಸೆಂಬರ್ 1 ಮತ್ತು 13 ರ ನಡುವೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಈ ತಿಂಗಳಿನಲ್ಲಿ ಕೆಲವೊಮ್ಮೆ ಆಹಾರ ಸಿಗದೇ ಇರುವ ಕುಟುಂಬಗಳ ಸಂಖ್ಯೆ ಶೇ.9.7ರಷ್ಟಿದೆ. ಇದು ಐದು ತಿಂಗಳಿನಲ್ಲೇ ಗರಿಷ್ಠ ಪ್ರಮಾಣವಾಗಿದೆ. ಮೊದಲ ಮಕ್ಕಳ ತೆರಿಗೆ ಕ್ರೆಡಿಟ್ ಮಾಸಿಕ ಪಾವತಿಯ ನಂತರದಲ್ಲಿ ಮಕ್ಕಳಿರುವ ಕುಟುಂಬಗಳಲ್ಲಿನ ಅಂಕಿ-ಅಂಶವು ಆಗಸ್ಟ್‌ನಲ್ಲಿ ಶೇ.11 ರಿಂದ ಶೇ.7.8ಕ್ಕೆ ಕುಸಿದಿದೆ.

ಸಾಮಾನ್ಯರ ಕೈಗೆ ಸಿಗದೇ ಏರಿಕೆಯಾದ ದಿನಸಿ ಬೆಲೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಯುನೈಟೆಡ್ ಸ್ಟೇಟ್ಸ್ ನಲ್ಲಿ ದಿನಸಿ ಬೆಲೆಯು ಶೇ.6.4ರಷ್ಟು ಏರಿಕೆಯಾಗಿದೆ. ಫುಡ್ ಬ್ಯಾಂಕ್‌ಗಳ ಬೇಡಿಕೆಯಲ್ಲೂ ಏರಿಕೆ ಕಾಣುತ್ತಿವೆ. ಪುಟ್ಟ ಮಕ್ಕಳ ಆದಿಯಾಗಿ ಸಾರ್ವಜನಿಕರಿಗೆ ಆಹಾರ ಸಿಗದಂತಾ ದುಸ್ಥಿತಿ ನಿರ್ಮಾಣವಾಗಿದೆ. ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿರುವ ಮಕ್ಕಳಿಗೆ ಈ ಹಿಂದೆ ಸಿಗುತ್ತಿರುವ ಆಹಾರ ಸೌಲಭ್ಯವೂ ಕೂಡ ಮುಂದೆ ಸಿಗುವುದು ಅನುಮಾನವಾಗಿದೆ. ಅಪೌಷ್ಟಿಕತೆ ಮತ್ತು ಕಡಿಮೆ ಆಹಾರದಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಮಕ್ಕಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯು ಹೆಚ್ಚಾಗುತ್ತಿದೆ.

ವಯಸ್ಸಿನ ಆಧಾರದಲ್ಲಿ ಪ್ರತಿ ತಿಂಗಳು ಆರ್ಥಿಕ ತೆರವು
ಇಬ್ಬರು ಪೋಷಕರನ್ನು ಹೊಂದಿರುವ ಕುಟುಂಬಕ್ಕೆ ನೀಡುವ ಮಕ್ಕಳ ತೆರಿಗೆ ಪಾವತಿ ಹಣವು ಒಂದು ವರ್ಷದಲ್ಲಿ 150,000 ಡಾಲರ್ ಗಿಂತ ಕಡಿಮೆ ಆಗಿರುತ್ತದೆ. 6 ವರ್ಷದೊಳಗಿನ ಪ್ರತಿ ಮಗುವಿಗೆ ಪ್ರತಿ ತಿಂಗಳಿಗೆ 300 ಡಾಲರ್ ಮತ್ತು 18 ವರ್ಷದೊಳಗಿನ ಪ್ರತಿ ಮಗುವಿಗೆ ತಿಂಗಳಿಗೆ 250 ಡಾಲರ್ ಅನ್ನು ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚಿನದನ್ನು ಮಾಡುವ ಕುಟುಂಬಗಳು ಸಣ್ಣ ಕ್ರೆಡಿಟ್ ಅನ್ನು ಪಡೆಯುತ್ತಾರೆ. ಜುಲೈ ಮತ್ತು ಸೆಪ್ಟೆಂಬರ್ ನಡುವಿನ ಜನಗಣತಿ ಬ್ಯೂರೋ ಸಮೀಕ್ಷೆಗಳ ಪ್ರಕಾರ, ಹೆಚ್ಚಿನ ಪೋಷಕರು ಆಹಾರಕ್ಕಾಗಿ ಮಧ್ಯ-ತಿಂಗಳ ನಗದು ಹಣವನ್ನು ಬಳಸುತ್ತಿದ್ದಾರೆಂದು ವರದಿಯಾಗಿದೆ. ಶಾಶ್ವತವಾಗಿ ಪಾವತಿ ಮಾಡಿದರೆ ಬಾಲ್ಯದ ಬಡತನವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ತಿಳಿಸಿವೆ.

ಕೊನೆಯದಾಗಿ ಆರ್ಥಿಕ ನೆರವು ನೀಡಿದ್ದು ಯಾವಾಗ?
ಡಿಸೆಂಬರ್ 15ರಂದು ಕೊನೆಯದಾಗಿ ಮಕ್ಕಳ ಆಹಾರಕ್ಕಾಗಿ ಹಣವನ್ನು ಪಾವತಿ ಮಾಡಲಾಗಿದೆ. ಬಿಲ್ಡ್ ಬ್ಯಾಕ್ ಬೆಟರ್ ಆಕ್ಟ್ 2022ರ ತನಕ ಪಾವತಿಗಳನ್ನು ವಿಸ್ತರಿಸುವ ಉಲ್ಲೇಖವನ್ನು ಒಳಗೊಂಡಿದೆ. ಆದಾಗ್ಯೂ, ವೆಸ್ಟ್ ವರ್ಜೀನಿಯಾದ ಡೆಮೋಕ್ರಾಟ್ ಸೆನೆಟರ್ ಜೋ ಮ್ಯಾಂಚಿನ್ ಅವರು ಭಾನುವಾರದಂದು ತಾನು ಅದಕ್ಕೆ ಮತ ಹಾಕುವುದಿಲ್ಲ ಎಂದು ಹೇಳಿದ ನಂತರ ಬಿಲ್‌ನ ಸ್ಥಿತಿ ಡೋಲಾಯಮಾನವಾಗಿದೆ.












Click it and Unblock the Notifications