ಅಮೆರಿಕ ಚುನಾವಣೆ ಹೇಗೆ ನಡೆಯುತ್ತೆ, ಹೆಂಗಿರುತ್ತೆ ಅಧ್ಯಕ್ಷರ ಆಯ್ಕೆ ?
us elections 2024: ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಗಳಿಸಿರುವ ಅಮೆರಿಕದ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಅಮೆರಿಕದಲ್ಲಿ ನಡೆಯುವ ಚುನಾವಣೆ ಇಡೀ ವಿಶ್ವಕ್ಕೆ ಮುಖ್ಯ. ಭಾರತಕ್ಕೂ ಅಮೆರಿಕಾದ ಚುನಾವಣೆ ಅತ್ಯಂತ ಮುಖ್ಯವಾಗುತ್ತದೆ. ಏಕೆಂದರೆ ಅಮೆರಿಕದಲ್ಲಿ ಯಾರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೋ ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಭಾರತದ ಹಲವು ವಿಷಯಗಳು ಅವಲಂಬನೆಯಗಿವೆ. ಹಾಗಾದರೆ, ಅಮೆರಿಕಾದ ಚುನಾವಣೆ ಹೆಂಗೆ ನಡೆಯುತ್ತೆ ಹಾಗೂ ಅಲ್ಲಿನ ಅಧ್ಯಕ್ಷರನ್ನು ಯಾರು ಆಯ್ಕೆ ಮಾಡ್ತಾರೆ ಎನ್ನುವ ನಿಮ್ಮ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ಇದೆ.
ಭಾರತದಲ್ಲಿ ನಡೆಯುವ ಲೋಕಸಭೆ ಚುನಾವಣೆ ಮಾದರಿಯಲ್ಲೇ ಅಮೆರಿಕದ ಚುನಾವಣೆ ನಡೆಯುತ್ತದೆ. ಆದರೆ, ಭಾರತದ ಚುನಾವಣೆಗೂ ಅಲ್ಲಿನ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಯಾಕೆಂದರೆ ಇಲ್ಲಿ ನಡೆಯುವ ಚುನಾವಣೆ ಹಾಗೂ ಚುನಾವಣೆ ಅವಧಿಯೂ ಬೇರೆ ಬೇರೆಯಾಗಿದೆ. ಅಮೆರಿಕದ ಅಧ್ಯಕ್ಷರ ಚುನಾವಣೆ ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆಯಾಗುತ್ತದೆ. ಆದರೆ, ಅಲ್ಲಿನ ಅಧ್ಯಕ್ಷರನ್ನು ಜನ ನೇರವಾಗಿ ಆಯ್ಕೆ ಮಾಡುವುದಿಲ್ಲ.

2024ನೇ ಸಾಲಿನ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ರಿಪಬ್ಲಿಕ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರೆಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಅಖಾಡದಲ್ಲಿ ಇದ್ದಾರೆ. ಯಾರು ಗೆದ್ದರೆ ಭಾರತಕ್ಕೆ ಲಾಭ ಎನ್ನುವ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿದೆ. ಇನ್ನು ಡೊನಾಲ್ಡ್ ಟ್ರಂಪ್ ಇದ್ದ ಅವಧಿಯಲ್ಲಿ ವಿವಿಧ ದೇಶಗಳ ಆಂತರಿಕ ವಿಚಾರದಲ್ಲಿ ಅಮೆರಿಕ ಮೂಗು ತೂರಿಸಿರಲಿಲ್ಲ ಎನ್ನುವ ವಾದವೂ ಇದೆ. ಅದು ತಕ್ಕಮಟ್ಟಿಗೆ ನಿಜವೂ ಹೌದು. ಆದರೆ, ಅವರ ಅವಧಿಯಲ್ಲಿ ಹಲವು ವಿಷಮ ವಿಷಯಗಳು ನಡೆದಿದ್ದವು. ಇದೀಗ ಅವರು ಮತ್ತೊಮ್ಮೆ ಚುನಾವಣಾ ಕಣದಲ್ಲಿ ಇದ್ದಾರೆ. ಒಬ್ಬ ವ್ಯಕ್ತಿ ಅಥವಾ ರಾಜಕಾರಣಿ ಅಮೆರಿಕದ ಅಧ್ಯಕ್ಷರಾಗಿ ಎರಡು ಬಾರಿ ಮಾತ್ರ ಆಯ್ಕೆಯಾಗುವುದಕ್ಕೆ ಅವಕಾಶ ಇದೆ.
ಭಾರತದ ಇತಿಹಾಸಕ್ಕೆ ಹೋಲಿಕೆ ಮಾಡಿದರೆ, ಅಮೆರಿಕಾದ ಇತಿಹಾಸ ತುಂಬಾನೇ ಕಡಿಮೆ. ಆದರೆ, ವಿಶ್ವದಲ್ಲಿ ದೊಡ್ಡಣ, ಸೂಪರ್ ಪವರ್ ನೇಷನ್ ಎನ್ನುವ ಹೆಗ್ಗಳಿಕೆ ಅಮೆರಿಕಗೆ ಇದೆ. ಇದೇ ಕಾರಣಕ್ಕೆ ಅಮೆರಿಕದ ಚುನಾವಣೆಯನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಅತ್ಯಂತ ಕುತೂಹಲದಿಂದ ನೋಡುತ್ತವೆ.
ಅಮೆರಿಕ ಪ್ರಜಾಪ್ರಭುತ್ವ ದೇಶವಾಗಿದೆ. ಆದರೆ, ಇಲ್ಲಿ ಆಯ್ಕೆ ಪ್ರಕ್ರಿಯೆಗಳು ತುಂಬಾ ಭಿನ್ನವಾಗಿವೆ. ಇಲ್ಲಿನ ಮತದಾರರು ನೇರವಾಗಿ ಅಧ್ಯಕ್ಷರ ಆಯ್ಕೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಪರೋಕ್ಷವಾಗಿ ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿನ ಅಧ್ಯಕ್ಷರನ್ನು ಎಲೆಕ್ಟೊರೋಲ್ ಕಾಲೇಜುಗಳ ಮೂಲಕ ಆಯ್ಕೆ ಮಾಡುವುದು ರೂಢಿಯಲ್ಲಿದೆ.
ಅಂದರೆ ಅಮೆರಿಕದ ಮತದಾರರು ಎಲೆಕ್ಟೋರಾಲ್ ಕಾಲೇಜುಗಳ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಮತ ಚಲಾಯಿಸುತ್ತಾರೆ. ಈ ರೀತಿ ಮತದಾರರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳು ಅಮೆರಿಕದ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಇನ್ನು ಅಮೆರಿಕದಲ್ಲಿ ದ್ವಿಪಕ್ಷ (ಎರಡು ಪ್ರಮುಖ ಪಕ್ಷಗಳು) ಪದ್ಧತಿ ಜಾರಿಯಲ್ಲಿದೆ.
ವಿಶ್ವದಲ್ಲಿಯೇ ಸುದೀರ್ಘ ಚುನಾವಣೆ ಪ್ರಕ್ರಿಯೆ ನಡೆಯುವ ದೇಶಗಳಲ್ಲಿ ಅಮೆರಿಕ ಸಹ ಒಂದಾಗಿದೆ. ಅಮೆರಿಕದ ಚುನಾವಣೆಯಲ್ಲಿ ಕೆಲವು ರಾಜ್ಯಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದೇ ಕಾರಣಕ್ಕೆ ಈ ರಾಜ್ಯಗಳಲ್ಲಿ ಅತ್ಯಂತ ಹೆಚ್ಚು ಚುನಾವಣೆ ಪ್ರಚಾರಗಳು ನಡೆಯುತ್ತವೆ.
ಈ ಚುನಾವಣೆ ಪ್ರಚಾರದಲ್ಲಿ ಭಾರತದಂತೆ ಸ್ಪರ್ಧಿಗಳು ಒಬ್ಬರನ್ನೊಬ್ಬರು ಬೈದಾಡಿಕೊಳ್ಳುವುದಿಲ್ಲ. ಅಲ್ಲಿ ಚರ್ಚೆಯಾಗುವುದೆಲ್ಲ ಅಮೆರಿಕದ ಅಭಿವೃದ್ಧಿ ವಿಷಯಗಳು ಹಾಗೂ ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೀವಿ ಎನ್ನುವುದು ಮಾತ್ರ.












Click it and Unblock the Notifications