ಹಾಂಕಾಂಗ್‌ನಲ್ಲಿ ಅಲ್ಲೋಲಕಲ್ಲೋಲ: ವಿಮಾನ ಹಾರಾಟ ಬಂದ್
ಹಾಂಕಾಂಗ್, ಆಗಸ್ಟ್ 12: ಪ್ರವಾಸಿಗರ ನೆಚ್ಚಿನ ದೇಶಗಳಲ್ಲಿ ಒಂದಾದ ಹಾಂಕಾಂಗ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಮಂದಿ ಪ್ರಜಾಪ್ರಭುತ್ವ ಪರ ಹೋರಾಟಗಾರರು ವಿಮಾನನಿಲ್ದಾಣಕ್ಕೆ ನುಗ್ಗಿ ಪ್ರತಿಭಟನೆ ನಡೆಸುತ್ತಿರುವುದರಿಂದ ಸೋಮವಾರ ಮಧ್ಯಾಹ್ನದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣ ಸ್ಥಗಿತಗೊಂಡಿದೆ.
ಹಾಂಕಾಂಗ್‌ಗೆ ಬರಬೇಕಿದ್ದ ಮತ್ತು ಹೊರಹೋಗಬೇಕಿದ್ದ ಸುಮಾರು 200 ವಿಮಾನಗಳ ಹಾರಾಟ ಬಂದ್ ಆಗಿದೆ. ಕಳೆದ ಮೂರು ದಿನಗಳಿಂದ ಇಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಸೋಮವಾರ ಇನ್ನಷ್ಟು ತೀವ್ರಗೊಂಡಿದೆ. ಹಾಂಕಾಂಗ್‌ನಿಂದ ಹೊರಡಬೇಕಿದ್ದ ಎಲ್ಲ ವಿಮಾನಗಳ ಸಂಚಾರ ರದ್ದಾಗಿದೆ. ನಗರಕ್ಕೆ ಬರಬೇಕಿದ್ದ 70 ವಿಮಾನಗಳನ್ನು ಕೂಡ ರದ್ದುಗೊಳಿಸಲಾಗಿದೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಸೇರಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸೇರಿರುವ ಪ್ರತಿಭಟನಾಕಾರರು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಸಂಘರ್ಷಗಳ ಚಿತ್ರಗಳನ್ನು ಪ್ರದರ್ಶಿಸಿ, 'ಪೊಲೀಸರನ್ನು ನಂಬಬೇಡಿ' ಎಂದು ಪ್ರಯಾಣಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ಪ್ರತಿಭಟನೆಯಿಂದ ಆಗುತ್ತಿರುವ ತೊಂದರೆಗೆ ಕ್ಷಮೆ ಕೋರುತ್ತೇವೆ. ಆದರೆ, ತಮಗೆ ಅನ್ಯ ಮಾರ್ಗವಿಲ್ಲ ಎಂದು ಹೇಳುತ್ತಿದ್ದಾರೆ.

ಪ್ರತಿಭಟನೆ ಏಕೆ?
ಶುಕ್ರವಾರದಿಂದಲೇ ವಿಮಾನ ನಿಲ್ದಾಣದ ಬಳಿಕ ಪ್ರತಿಭಟನೆ ಆರಂಭವಾಗಿದೆ. ವಿಮಾನ ನಿಲ್ದಾಣಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಬೆಂಬಲ ತಮಗೆ ಸಿಗಲಿ ಎಂಬ ಉದ್ದೇಶದಿಂದ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಹಾಂಕಾಂಗ್‌ನಲ್ಲಿರುವ ಅಪರಾಧಿಗಳನ್ನು ಮತ್ತು ಶಂಕಾಸ್ಪದ ವ್ಯಕ್ತಿಗಳನ್ನು ಮಾತೃಭೂಮಿ ಚೀನಾಕ್ಕೆ ಗಡಿಪಾರು ಮಾಡಿ ವಿಚಾರಣೆಗೆ ಒಳಪಡಿಸಬಹುದು ಎಂದು ಅವಕಾಶ ನೀಡುವ ಮಸೂದೆಯನ್ನು ಅಂಗೀಕರಿಸಿರುವುದು ಹಾಂಕಾಂಗ್‌ನಲ್ಲಿ ಪ್ರತಿಭಟನೆ ಭುಗಿಲೇಳಲು ಕಾರಣ. ಇದರಿಂದ ತಮ್ಮ ಮೇಲೆ ಚೀನಾದ ಹಿಡಿತ ಇನ್ನಷ್ಟು ಬಲಗೊಳ್ಳಲಿದೆ ಎನ್ನುವುದು ಹಾಕಾಂಗ್ ಪ್ರಜೆಗಳ ಕಳವಳ.
1997ರವರೆಗೂ ಹಾಂಕಾಂಗ್ ಬ್ರಿಟಿಷ್ ವಸಾಹತು ಆಗಿತ್ತು. ಬಳಿಕ ಚೀನಾ ಅದನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಅಂದಿನಿಂದಲೂ ಹಾಕಾಂಗ್, ಒಂದು ದೇಶ, ಎರಡು ವ್ಯವಸ್ಥೆಗಳ ಅಡಿ ನಡೆಯುತ್ತಿದೆ.












Click it and Unblock the Notifications