India vs Canada: ಹಿಂದೂಗಳಿಗೆ ಯಾವಾಗಲೂ ಸ್ವಾಗತವಿದೆ- ಭಾರತೀಯರ ಕೊಡುಗೆ ಸ್ಮರಿಸಿದ ಕೆನಡಾ ವಿರೋಧ ಪಕ್ಷದ ನಾಯಕ
ಕೆನಡಾ ದೇಶಕ್ಕೆ ಹಿಂದೂಗಳು ಅಪಾರ ಕೊಡುಗೆ ನೀಡಿದ್ದಾರೆ. ಅವರಿಗೆ ಯಾವಾಗಲೂ ಸ್ವಾಗತವಿದೆ ಎಂದು ಕೆನಡಾ ವಿರೋಧ ಪಕ್ಷದ ನಾಯಕ ಪಿಯರೆ ಪೊಯಿಲಿವ್ರೆ ಹೇಳಿದ್ದಾರೆ. ಈ ಮೂಲಕ ಭಾರತದ ಹಿಂದೂಗಳಿಗೆ ಬೆದರಿಕೆ ಹಾಕಿರುವ ಖಲಿಸ್ತಾನಿ ಉಗ್ರರ ಕ್ರಮವನ್ನು ಅವರು ಖಂಡಿಸಿದ್ದಾರೆ.
ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ್ದಾರೆ. ಇದು ಎರಡೂ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

ಕೆನಡಾದಲ್ಲಿ ಹಿಂದೂಗಳ ವಿರುದ್ಧ ದ್ವೇಷಪೂರಿತ ಹೇಳಿಕೆಗಳನ್ನು ಖಲಿಸ್ತಾನಿ ಉಗ್ರರು ನೀಡುತ್ತಿದ್ದಾರೆ. ಭಾರತದ ಹಿಂದೂಗಳಿಗೆ ದೇಶ ತೊರೆಯುವಂತೆ ಬೆದರಿಕೆ ಹಾಕಿದ್ದಾರೆ.
ಈ ಕುರಿತು ಮಾತನಾಡಿರುವ ಕೆನಡಾ ವಿರೋಧ ಪಕ್ಷದ ನಾಯಕ ಪಿಯರೆ ಪೊಯಿಲಿವ್ರೆ, ಖಲಿಸ್ತಾನಿ ಉಗ್ರರ ಉಪಟಳವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು 'ಕೆನಡಾದಲ್ಲಿರುವ ಪ್ರತಿಯೊಬ್ಬ ನಾಗರಿಕನೂ ಭಯವಿಲ್ಲದೇ ಬದುಕಲು ಅರ್ಹನಾಗಿದ್ದಾನೆ' ಎಂದು ಪ್ರತಿಪಾದಿಸಿದ್ದಾರೆ.
ದೇಶದ ಪ್ರತಿಯೊಂದು ಕ್ಷೇತ್ರಕ್ಕೂ ಹಿಂದೂಗಳು ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರಿಗೆ ಇಲ್ಲಿ ಯಾವಾಗಲೂ ಸ್ವಾಗತವಿದೆ ಎಂದು ಪಿಯರೆ ಪೊಯಿಲಿವ್ರೆ ಹೇಳಿದ್ದಾರೆ.

'ಪ್ರತಿಯೊಬ್ಬ ಕೆನಡಿಯನ್ ಭಯವಿಲ್ಲದೆ ಬದುಕಲು ಅರ್ಹನಾಗಿರುತ್ತಾನೆ. ಎಲ್ಲ ಸಮುದಾಯಗಳಿಂದಲೂ ಮನ್ನಣೆ ಪಡೆದಿರುತ್ತಾನೆ. ಇತ್ತೀಚಿನ ದಿನಗಳಲ್ಲಿ ಕೆನಡಾದಲ್ಲಿರುವ ಹಿಂದೂಗಳನ್ನು ಗುರಿಯಾಗಿಸಿಕೊಂಡು ದ್ವೇಷಪೂರಿತ ಹೇಳಿಕೆ ನೀಡುತ್ತಿರುವುದನ್ನು ನಾವು ನೋಡಿದ್ದೇವೆ. ನಮ್ಮ ಹಿಂದೂ ಸ್ನೇಹಿತರ ವಿರುದ್ಧದ ಈ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ. ನಮ್ಮ ದೇಶದ ಪ್ರತಿಯೊಂದು ಕ್ಷೇತ್ರಕ್ಕೂ ಹಿಂದೂಗಳು ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರಿಗೆ ಇಲ್ಲಿ ಯಾವಾಗಲೂ ಸ್ವಾಗತವಿರುತ್ತದೆ' ಎಂದು ಪೊಯಿಲಿವ್ರೆ ಹೇಳಿದ್ದಾರೆ.
ಖಲಿಸ್ತಾನಿ ಪರ ಸಂಘಟನೆಯಾದ ಎಸ್‌ಎಫ್‌ಜೆ ಸಂಸ್ಥಾಪಕ ಗುರುಪತ್‌ವಂತ್ ಸಿಂಗ್ ಪನ್ನುನ್ ದ್ವೇಷದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾನೆ. ಕೆನಡಾವನ್ನು ತೊರೆಯುವಂತೆ ಭಾರತ ಹಿಂದೂಗಳಿಗೆ ಹೇಳಿದ್ದಾರೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೊಯಿಲಿವ್ರೆ ಹೇಳಿಕೆ ಪ್ರಾಮುಖ್ಯತೆಯನ್ನು ಪಡೆದಿದೆ.
ಖಲಿಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತೀಯ ಅಧಿಕಾರಿಗಳೇ ಹೊಣೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಎರಡೂ ದೇಶಗಳ ನಡುವೆ ಬಿಕ್ಕಟ್ಟನ್ನು ಹುಟ್ಟುಹಾಕಿದೆ.
ಭಾರತದ ವಿರುದ್ಧ ಇಂತಹ ಆರೋಪಗಳನ್ನು ಮಾಡುವ ಮೂಲಕ ಕೆನಡಾ ದೊಡ್ಡ ತಪ್ಪು ಮಾಡಿದೆ ಎಂದು ಅಮೆರಿಕದ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನ ಮಾಜಿ ಪೆಂಟಗನ್ ಅಧಿಕಾರಿ ಮೈಕೆಲ್ ರೂಬಿನ್ ಹೇಳಿದ್ದಾರೆ.












Click it and Unblock the Notifications