ಪಾಕಿಸ್ತಾನದಲ್ಲಿ ಹಿಂದೂ ಉದ್ಯಮಿ ಗುಂಡಿಕ್ಕಿ ಹತ್ಯೆ, ಪ್ರತಿಭಟನೆ
ಇಸ್ಲಾಮಾಬಾದ್, ಫೆಬ್ರವರಿ 2: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ.
ಹಿಂದೂ ಉದ್ಯಮಿಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಪಾಕಿಸ್ತಾನದ ಸಿಂಧ್ ನ ಘೋಟ್ಕಿ ಜಿಲ್ಲೆಯ ದಹರ್ಕಿ ಟೌನ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಹತ್ಯೆಗೆ ಒಳಗಾದ ವ್ಯಕ್ತಿಯನ್ನು ಸೈತಾನ್ ಲಾಲ್ ಎಂದು ಗುರುತಿಸಲಾಗಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದೌರ್ಜನ್ಯ ಎಸಗಿದ ಇತ್ತೀಚಿನ ಘಟನೆ ಇದಾಗಿದೆ. ಜನವರಿ 4 ರಂದು, ಸಿಂಧ್ ಪ್ರಾಂತ್ಯದ ಅನಾಜ್ ಮಂಡಿಯಲ್ಲಿ ಇನ್ನೊಬ್ಬ ಹಿಂದೂ ಉದ್ಯಮಿ ಸುನೀಲ್ ಕುಮಾರ್ ಅವರನ್ನು ಅಪರಿಚಿತ ಜನರು ಗುಂಡಿಕ್ಕಿ ಕೊಂದರು. ಉದ್ಯಮಿಯ ಹತ್ಯೆಯಿಂದ ನಗರದಲ್ಲಿ ಬಂದ್ ಮಾಡಲಾಗಿತ್ತು.

ಜನವರಿ 30 ರಂದು, ಪಾಕಿಸ್ತಾನದ ವಾಯುವ್ಯ ಪೇಶಾವರ್ ನಗರದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಒಬ್ಬ ಕ್ರಿಶ್ಚಿಯನ್ ಪಾದ್ರಿಯನ್ನು ಗುಂಡಿಕ್ಕಿ ಕೊಂದಿದ್ದರು. ಇದೇ ವೇಳೆ ಜೊತೆಯಲ್ಲಿದ್ದ ಇನ್ನೊಬ್ಬರು ಗಾಯಗೊಂಡಿದ್ದರು.
ಉದ್ಯಮಿ ದಾಹರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ದಾಹರ್ಕಿಯಿಂದ ಎರಡು ಕಿ.ಮೀ ದೂರದಲ್ಲಿ ಅವರು ವಾಸಿಸುತ್ತಿದ್ದರು.
ಸೈತಾನ್‌ಲಾಲ್ ಜಮೀನಿನಲ್ಲಿ ಹತ್ತಿ ಕಾರ್ಖಾನೆ ಹಾಗೂ ಹಿಟ್ಟಿನ ಗಿರಣಿ ಉದ್ಘಾಟನಾ ಕಾರ್ಯಾಕ್ರಮ ನಡೆಯಿತು. ಕಾರ್ಯಕ್ರಮ ಸಂದರ್ಭದಲ್ಲಿ ಕೆಲ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
''ನಾನು ಪಾಕಿಸ್ತಾನ ತೊರೆಯದಿದ್ದರೆ, ನನ್ನ ಕೈಕಾಲುಗಳನ್ನು ಕತ್ತರಿಸಿ ಕೊಲೆ ಮಾಡುವುದಾಗಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ'' ಎಂದು ಕೆಲ ದಿನಗಳ ಹಿಂದಷ್ಟೇ ಸೈತಾನ್ ಲಾಲ್ ಹೇಳಿಕೊಂಡಿದ್ದರು. ಮಂಗಳವಾರ ಹಲವು ಮಂದಿ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.












Click it and Unblock the Notifications