ಶಾಂತಿಯಿಲ್ಲದಿದ್ದರೆ ಸಮೃದ್ಧಿ ಇರಲು ಸಾಧ್ಯವಿಲ್ಲ: ನ್ಯೂಯಾರ್ಕ್‌ನ ಸೆಮಾಫೋರ್ ಶೃಂಗಸಭೆಯಲ್ಲಿ ಶ್ರೀ ರವಿ ಶಂಕರ್
ನ್ಯೂಯಾರ್ಕ್: ಎಷ್ಟೇ ಸಿರಿವಂತನಾದರೂ ಜೀವನದಲ್ಲಿ ಶಾಂತಿ ನೆಲೆಸಿರಬೇಕು. ಆಗ ಮಾತ್ರ ಸಿರಿವಂತಿಕೆಗೊಂದು ಅರ್ಥ. ಶಾಂತಿ ತರುವ ಸಮೃದ್ಧತೆ ಯಾವುದಕ್ಕೂ ಸಮವಲ್ಲವೆಂದು ಆರ್ಟ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿ ಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನ್ಯೂಯಾರ್ಕ್‌ನಲ್ಲಿ ನಡೆದ ಸೆಮಾಫೋರ್‌ನ 'The Next 3 Billion' ಶೃಂಗಸಭೆಯಲ್ಲಿ ಮಾತನಾಡಿದರು ಗುರೂಜಿ. ತಂತ್ರಜ್ಞಾನ, ಡಿಜಿಟಲ್ ಮೂಲ ಸೌಕರ್ಯ ಮತ್ತು ಆರ್ಥಿಕ ಅವಕಾಶಗಳ ವಿಸ್ತರಣೆ ಕುರಿತು ಕೀನ್ಯಾ ಅಧ್ಯಕ್ಷ ವಿಲಿಯಂ ಸಮೋಯಿ ರುಟೊ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಪ್ರಧಾನಿ ಜುಡಿತ್ ಸುಮಿನ್ವಾ, WTO ಮಹಾನಿರ್ದೇಶಕಿ ಡಾ. ಎನ್‌ಗೋಜಿ ಒಕೊಂಜೊ-ಇವೆಲಾ ಹಾಗೂ IMF ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜೀವಾ ಸೇರಿ ಈ ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಚರ್ಚಿಸಿದರು.

ಸೆಮಾಫೋರ್ ಸಹ-ಸಂಸ್ಥಾಪಕ ಹಾಗೂ ಸಿಇಒ ಜಸ್ಟಿನ್ ಬಿ. ಸ್ಮಿತ್ ಅವರೊಂದಿಗೆ ಸಂವಾದ ನಡೆಸಿದ ಗುರುದೇವರು, "ಶಾಂತಿಯೊಂದಿಗೆ ಸಮೃದ್ಧಿ ಬರುತ್ತದೆ. ಶಾಂತಿಯೇ ಇಲ್ಲದಿದ್ದರೆ, ಸಮೃದ್ಧಿಯೂ ಇರಲು ಸಾಧ್ಯವಿಲ್ಲ. ಸಂಪನ್ಮೂಲ ಹೊಂದಿರುವವರು ಮತ್ತು ವಂಚಿತರ ನಡುವಿನ ಅಂತರವನ್ನು ಕಡಿಮೆ ಮಾಡಲು ಎರಡೂ ಕಡೆಯಿಂದ ಪ್ರಯತ್ನ ಅಗತ್ಯ. ಉದ್ಯಮಶೀಲತೆಯ ಮನೋಭಾವ ಬೆಳೆಸುವ ಮೂಲಕ ಗ್ರಾಮೀಣ ಭಾರತದ 500 ನಿರುದ್ಯೋಗಿ ಯುವಕರಲ್ಲಿ ಬದಲಾವಣೆ ತಂದ ಕಾರ್ಯಕ್ರಮವನ್ನು ಕೀನ್ಯಾ, ಘಾನಾ, ನೈಜೀರಿಯಾ, ಬೋಟ್ಸ್‌ವಾನಾ ಮತ್ತು ದಕ್ಷಿಣ ಆಫ್ರಿಕಾದಲ್ಲೂ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.
ಜಸ್ಟಿನ್ ಬಿ. ಸ್ಮಿತ್ ಅವರು ಗುರುದೇವ್ ಅವರನ್ನು ಕೃತಕ ಬುದ್ಧಿಮತ್ತೆ (AI) ಕುರಿತು ತಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ, ಅವರು ಹಾಸ್ಯಮಿಶ್ರಿತವಾಗಿ, "ಕೃತಕ ಬುದ್ಧಿಮತ್ತೆ ಜೊತೆಗೆ "ಪರಮ ಬುದ್ಧಿಮತ್ತೆ (Absolute Intelligence)" ಅಗತ್ಯದ ಬಗ್ಗೆ ಹಾಸ್ಯಮಿಶ್ರಿತವಾಗಿ ಉತ್ತರಿಸಿದರು. ಪ್ರಜ್ಞೆಯ ಕ್ಷೇತ್ರದಲ್ಲಿ ವೈಜ್ಞಾನಿಕ ಅಧ್ಯಯನವನ್ನು ಮುಂದುವರಿಸುವ ಉದ್ದೇಶದಿಂದ ಗುರುದೇವರು Institute of Absolute Intelligence ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ.
ಸಿರಿವಂತರು-ಬಡವರ ನಡುವೆ ಇದೆ ವ್ಯತ್ಯಾಸ
ಅಮೆರಿಕ ಸೇರಿ ಬಹುತೇಕ ಎಲ್ಲ ದೇಶಗಳಲ್ಲೂ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಇದೆ. ಈ ಅಂತರವನ್ನು ಕಡಿಮೆ ಮಾಡಲು ಎರಡೂ ಕಡೆಯಿಂದ ಪ್ರಯತ್ನ ಅಗತ್ಯ ಎಂದು ಅವರು ಹೇಳಿದರು. ಜನರು "ಬಲಿಪಶು ಮನಸ್ಥಿತಿ"ಯಿಂದ ಹೊರಬಂದು, ತಮ್ಮ ಪ್ರಗತಿಯ ಹೊಣೆಗಾರಿಕೆಯನ್ನು ತಾವೇ ತೆಗೆದುಕೊಳ್ಳಬೇಕು. ಅಲ್ಲದೇ ಸಂಪನ್ಮೂಲಗಳನ್ನು ಹೊಂದಿರುವವರು ಸಹಾನುಭೂತಿ ಮತ್ತು ಹಂಚಿಕೊಳ್ಳುವಿಕೆ ಮಹತ್ವವನ್ನು ಮತ್ತೆ ಅರಿತುಕೊಳ್ಳಬೇಕು. ಜಾಗತಿಕ ದಕ್ಷಿಣ ಭಾಗದ ದೇಶಗಳಲ್ಲಿ ಸಂಪನ್ಮೂಲಗಳು ತಳಮಟ್ಟದ ಜನರನ್ನು ತಲುಪಲು ವಿಫಲವಾಗುತ್ತಿರುವುದಕ್ಕೆ ಭ್ರಷ್ಟಾಚಾರವೂ ಪ್ರಮುಖ ಕಾರಣವೆಂದರು.
ಗ್ರಾಮೀಣ ಭಾರತದ ಆರ್ಟ್ ಆಫ್ ಲಿವಿಂಗ್ ಕೇಂದ್ರವೊಂದರ ಸಮೀಪವಿದ್ದ ಉದ್ಯೋಗವಿಲ್ಲದ 500 ಯುವಕರು, ಸರ್ಕಾರ ನೀಡಿದ್ದ 200 ಯೋಜನೆಗಳನ್ನು ತಿರಸ್ಕರಿಸಿದ್ದ ಘಟನೆಯನ್ನು ಗುರುದೇವ್ ನೆನಪಿಸಿಕೊಂಡರು. ಯಾವುದೇ ಕೆಲಸವೂ ಯಶಸ್ವಿಯಾಗುವುದಿಲ್ಲ ಎಂಬ ಮನಸ್ಥಿತಿಯಲ್ಲಿ ಅವರು ಈ ಯೋಜನೆಗಳನ್ನು ನಿರಾಕರಿಸಿದ್ದರು. ಆದರೆ, ಉದ್ಯಮಶೀಲ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ನಡೆಸಿದ ಎರಡು ತಿಂಗಳ ಕಾರ್ಯಕ್ರಮ ಅವರ ಆಲೋಚನಾ ಕ್ರಮವನ್ನೇ ಬದಲಿಸಿತು. ನಂತರ ಇದೇ ಮಾದರಿಯನ್ನು ಕೀನ್ಯಾ, ಘಾನಾ, ನೈಜೀರಿಯಾ, ಬೋಟ್ಸ್‌ವಾನಾ, ದಕ್ಷಿಣ ಆಫ್ರಿಕಾ ಸೇರಿ ಹಲವು ಆಫ್ರಿಕನ್ ದೇಶಗಳಿಗೂ ಕೊಂಡೊಯ್ಯಲಾಗಿದೆ ಎಂದು ಗುರುದೇವ್ ಹೇಳಿದರು.
ಒತ್ತಡದಿಂದ ಸಂವಹನ ವ್ಯವಸ್ಥೆಯೇ ಹಾಳು
ಕೆಲಸದ ಸ್ಥಳದ ಕುರಿತು ಮಾತನಾಡಿದ ಅವರು, ಒತ್ತಡವು ಸಂವಹನ ವ್ಯವಸ್ಥೆಯನ್ನು ಹಾಳುಮಾಡುವುದರ ಜೊತೆಗೆ ವ್ಯವಹಾರಗಳ ಮೇಲೂ ಪರಿಣಾಮ ಬೀರುತ್ತದೆ. ಅನಿಶ್ಚಿತತೆಯ ಸಮಯದಲ್ಲಿ ಜನರು ಉತ್ತಮವಾಗಿ ಕಾರ್ಯನಿರ್ವಹಿಸಲು ತಾವು ಒಂದು ಸಮುದಾಯದ ಭಾಗ ಎಂಬ ಭಾವನೆ ಮತ್ತು ಭದ್ರತೆಯ ಅನುಭವ ಅಗತ್ಯ ಎಂದು ಅವರು ಒತ್ತಿ ಹೇಳಿದರು.


Click it and Unblock the Notifications
