ಬಿಬಿಸಿಯ ಹಿರಿಯ ಕಾರ್ಯನಿರ್ವಾಹಕರನ್ನು ನೇಮಕ ಮಾಡಿಕೊಂಡ ಇಂಡಿಯಾ ಗ್ಲೋಬಲ್ ಫೋರಮ್
ಇಂಡಿಯಾ ಗ್ಲೋಬಲ್ ಫೋರಮ್ (IGF) ಸಂಸ್ಥೆಯು ಬಿಬಿಸಿಯ ಪ್ರಭಾವಿ ಹಾಗೂ ಅನುಭವಿ ನಾಯಕನನ್ನು ಸಂಸ್ಥೆಯ ಉನ್ನತ ಹುದ್ದೆಗೆ ನೇಮಕಾತಿ ಮಾಡಿಕೊಂಡಿದೆ. ಇಂಡಿಯಾ ಗ್ಲೋಬಲ್ ಫೋರಮ್ ಸಂಸ್ಥೆಯು ಭಾರತದ ಪ್ರಸಕ್ತ ವಿಶೇಷತೆಗಳನ್ನು ಜಗತ್ತಿಗೆ ತಿಳಿಸುತ್ತಿದ್ದು, ಜಾಗತಿಕ ಪಾಲುದಾರಿಕೆಗೆ ಪ್ರಮುಖ ವೇದಿಕೆಯಾಗಿದೆ.
ಉದಯ್ ಕರಣ್‌ವರ್ಮಾ ಅವರು, ಬಿಬಿಸಿ ಇಂಡಿಯಾದ ಮಾಜಿ ಹಿರಿಯ ಕಾರ್ಯನಿರ್ವಹಕರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಇಂಡಿಯಾ ಗ್ಲೋಬಲ್ ಫೋರಮ್‌ನಲ್ಲಿ ವ್ಯಾಪಾರ ಸಂಬಂಧಗಳ (Business Relations ) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ವರ್ಮಾ ಅವರು ಬಿಬಿಸಿ ಇಂಡಿಯಾದಲ್ಲಿ ಏಳು ವರ್ಷ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಈಚೆಗೆ ಅವರು ಬಿಬಿಸಿ ಇಂಡಿಯಾದಲ್ಲಿ ಕಂಟ್ರಿ ಮ್ಯಾನೇಜರ್ (ಸಂಸ್ಥೆಯ ವ್ಯವಸ್ಥಾಪಕ) ಆಗಿದ್ದರು. ವರ್ಮಾ ಅವರು, ವ್ಯವಸ್ಥಾಪಕರಾಗಿ ವ್ಯಾಪರ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದರು. ವರ್ಮಾ ಅವರ ನೇಮಕಾತಿಯು ಐಜಿಎಫ್‌ನ ಅಭಿವೃದ್ಧಿ ಹಾಗೂ ವಿಸ್ತರಣೆಯ ಭಾಗವಾಗಿದೆ. ಅಲ್ಲದೇ ಸಂಸ್ಥೆಯ ಜಾಗತಿಕ ಪ್ರಭಾವವನ್ನು ವೃದ್ಧಿಸುವುದು ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಒಳಗೊಂಡಿದೆ.

ಇಂಡಿಯಾ ಗ್ಲೋಬಲ್ ಫೋರಮ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಮನೋಜ್ ಲಾಡ್ವಾ ಅವರು, ಉದಯ್ ಕರಣ್‌ವರ್ಮಾ ಅವರು ಐಜಿಎಫ್‌ಗೆ ಸೇರ್ಪಡೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ವರ್ಮಾ ಅವರು ಐಜಿಎಫ್‌ಗೆ ಸೇರ್ಪಡೆಯಾಗಿರುವುದು ಭಾರತ ಮತ್ತು ಐಜಿಎಫ್ ಎರಡಕ್ಕೂ ಸಹಕಾರಿ ಹಾಗೂ ಉತ್ತೇಜನಕಾರಿಯಾಗಿದೆ ಎಂದಿದ್ದಾರೆ.
ಉದಯ್ ಕರಣ್‌ವರ್ಮಾ ಅವರನ್ನು ನಮ್ಮ ತಂಡಕ್ಕೆ ಸ್ವಾಗತಿಸಲು ನಾನು ಅತ್ಯಂತ ಸಂತೋಷಿತನಾಗಿದ್ದೇನೆ. ವ್ಯಾಪಾರ ಸಂಬಂಧಗಳನ್ನು ಬೆಳೆಸುವಲ್ಲಿ ಅವರ ಅಪಾರ ಅನುಭವ ಸಹಕಾರಿಯಾಗಲಿದೆ. ಮತ್ತಷ್ಟು ವ್ಯಾಪಾರ ಸಂಬಂಧಗಳನ್ನು ವೃದ್ಧಿಸಲು ಹಾಗೂ ದೂರದೃಷ್ಟಿಯ ಯೋಜನೆಗಳನ್ನು ಅನುಷ್ಠಾನ ಮಾಡುವುದಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
ವರ್ಮಾ ಅವರು ತಮ್ಮ ವೃತ್ತಿ ಜೀವನದ ಸುದೀರ್ಘ ಅವಧಿಯನ್ನು ಅಂದರೆ, 20 ವರ್ಷಗಳ ಕಾಲ ಪ್ರತಿಷ್ಠಿತ ಬ್ರ್ಯಾಂಡ್ ಸಂಸ್ಥೆಗಳಾದ ಬಿಬಿಸಿ, ನೆಟ್‌ವರ್ಕ್ 18 ಹಾಗೂ ಇಎಸ್‌ಪಿಎನ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ವರ್ಮಾ ಅವರು ಬಿಬಿಸಿಯಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದಾರೆ. ಬಿಬಿಸಿ ಸ್ಟೋರಿ ವರ್ಕ್ ಪ್ರಾರಂಭಿಸುವಲ್ಲಿಯೂ ಇವರ ಪಾತ್ರ ಪ್ರಮುಖವಾಗಿತ್ತು. ಬಿಬಿಸಿ ಗಾಲ್ಫ್ ಕನೆಕ್ಟ್ ಮತ್ತು ಬಿಬಿಸಿ ಸ್ಪೋರ್ಟ್ಸ್ ವುಮೆನ್ ಆಫ್ ದಿ ಇಯರ್ ಕಾರ್ಯಕ್ರಮಗಳನ್ನು ಪರಿಚಯಿಸಿದ್ದರು. ಅಲ್ಲದೇ ಆದಾಯ ಮೂಲ ಹೆಚ್ಚಿಸುವುದು, ಕಂಟೆಂಟ್ ಕ್ರಿಯೇಷನ್ ಕಾರ್ಯತಂತ್ರ ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ಅವರು ವಹಿಸಿದ್ದರು.
ಉದಯ್ ಕರಣ್‌ವರ್ಮಾ ಅವರು ಮಾತನಾಡಿ, ಭಾರತದ ವಿಶೇಷತೆಗಳನ್ನು ಜಗತ್ತಿಗೆ ತಿಳಿಸುವ ಹಾಗೂ ಜಾಗತಿಕ ಪಾಲುದಾರಿಕೆಗೆ ವೇದಿಕೆಯಾಗಿರುವ ಐಜಿಎಫ್‌ಗೆ ಸೇರಲು ನಾನು ಉತ್ಸುಕನಾಗಿದ್ದೇನೆ. ಭಾರತದ ಅಗಾಧ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಐಜಿಎಫ್‌ನ ಉದ್ದೇಶವು ಅರ್ಥಪೂರ್ಣವಾಗಿದೆ. ಈ ತಂಡದ ಸದಸ್ಯನಾಗಿ ಪ್ರಭಾವಶಾಲಿ ಜಾಗತಿಕ ಸಂವಾದ ಮತ್ತು ಚರ್ಚೆಗೆ ವೇದಿಕೆ ರೂಪಿಸಲು, ಮಾರುಕಟ್ಟೆ ಮತ್ತು ಕೈಗಾರಿಕೆಗಳಲ್ಲಿ ಹೊಸ ಹಾಗೂ ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸಲು ಈ ಅವಕಾಶ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಐಜಿಎಫ್ ಜಾಗತಿಕ ವ್ಯವಹಾರಗಳ ಸಂಸ್ಥೆಯಾಗಿದ್ದು, ಸಮಕಾಲೀನ ಭಾರತದ ಅಭಿವೃದ್ಧಿಯನ್ನು ಉತ್ತೇಜಿಸುತ್ತಿದೆ. ದೇಶದ ತ್ವರಿತ ಬೆಳವಣಿಗೆಯು ಜಗತ್ತಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ ಎನ್ನುವುದು ಸಂಸ್ಥೆಯ ಆಶಯವಾಗಿದೆ. ಐಜಿಎಫ್ ಸಂಸ್ಥೆಯು ಅಭಿವೃದ್ಧಿಯನ್ನು ವೇಗಗೊಳಿಸುವುದು. ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಜಗತ್ತಿಗೆ ಪರಿಚಯಿಸುವುದು, ಹವಾಮಾನ ಬದಲಾವಣೆಯ ಬಗ್ಗೆ, ವ್ಯವಹಾರದಲ್ಲಿ ವೈವಿಧ್ಯತೆಯನ್ನು ಉತ್ತೇಜಿಸುವುದು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಸೃಜನಶೀಲತೆಯನ್ನು ತರುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳ ಮೇಲೆ ಕೆಲಸ ಮಾಡುತ್ತಿದೆ.












Click it and Unblock the Notifications