Greenland Future: ಗ್ರೀನ್‌ಲ್ಯಾಂಡ್ ಕಾಪಾಡಲು ಹೊಸ ತಂತ್ರ, ಕಣ್ಗಾವಲು ಮತ್ತು ಭದ್ರತೆ ವಿಚಾರದಲ್ಲಿ ಕ್ರಾಂತಿ?
ಗ್ರೀನ್‌ಲ್ಯಾಂಡ್ ಸುದ್ದಿ ಇಡೀ ಜಗತ್ತಿನಾದ್ಯಂತ ಆವರಿಸಿದೆ, ಈ ರೀತಿ ಗ್ರೀನ್‌ಲ್ಯಾಂಡ್ ವಿಚಾರ ಭರ್ಜರಿ ಚರ್ಚೆಗೆ ಕಾರಣ ಆಗಿದ್ದೇ ಡೊನಾಲ್ಡ್ ಟ್ರಂಪ್ ಅವರು. ನೇರವಾಗಿ ಜಗತ್ತಿನ ಬೃಹತ್ ದ್ವೀಪ ಆಗಿರುವ ಗ್ರೀನ್‌ಲ್ಯಾಂಡ್ ಅನ್ನೇ ತಮ್ಮ ವಶಕ್ಕೆ ಪಡೆಯುವುದಾಗಿ ಟ್ರಂಪ್ ಘೋಷಿಸಿದ್ದರು. ಆದರೆ ಆ ನಂತರ, ಯುರೋಪ್ ಒಕ್ಕೂಟ ಮತ್ತು ನ್ಯಾಟೋ ಒಕ್ಕೂಟದ ನಾಯಕರ ಒತ್ತಡದ ಪರಿಣಾಮ ಟ್ರಂಪ್ ಅವರು ಸೈಲೆಂಟ್ ಆಗಿದ್ದಾರೆ. ಹೀಗಿದ್ದಾಗ ಗ್ರೀನ್‌ಲ್ಯಾಂಡ್ ರಕ್ಷಣೆ ಹಾಗೂ ಭವಿಷ್ಯದ ಬಗ್ಗೆ ಹೊಸ ಆಲೋಚನೆ ಕೂಡ ಶುರುವಾಗಿದೆ. ಈ ಬಗ್ಗೆ ಗ್ರೀನ್‌ಲ್ಯಾಂಡ್ ನಾಯಕರು ಮಹತ್ವದ ಪ್ಲಾನಿಂಗ್ ಮಾಡಿಕೊಂಡಿದ್ದಾರೆ.
ಯುರೋಪ್ ದೇಶಗಳ ಪಾಲಿಗೆ ಗ್ರೀನ್‌ಲ್ಯಾಂಡ್ ಒಂದು ಅದ್ಭುತ ಸ್ಥಳ, ಈ ಜಾಗ ಇರುವ ಕಾರಣದಿಂದ ಭವಿಷ್ಯದ ಬಗ್ಗೆ ಭರವಸೆ ಇಟ್ಟುಕೊಂಡಿವೆ ಯುರೋಪ್ ಒಕ್ಕೂಟದ ದೇಶಗಳು. ಹಾಗೇ ಡೆನ್ಮಾರ್ಕ್ ಈ ಗ್ರೀನ್‌ಲ್ಯಾಂಡ್ ಮೇಲೆ ಸಾರ್ವಭೌಮತ್ವ ಹೊಂದಿದೆ. ಹೀಗಿದ್ದಾಗ ಅಮೆರಿಕ ಅಡ್ಡ ಬಂದು ಕಿರಿಕ್ ಮಾಡಿ ಏನೇನೋ ಮಾಡಲು ಹೋಗಿ ಮುಖಭಂಗ ಅನುಭವಿಸಿತ್ತು. ಅಲ್ಲದೆ ಗ್ರೀನ್‌ಲ್ಯಾಂಡ್‌ಗೆ ನಾವೇ ಭದ್ರತೆ ಕೊಡ್ತೀವಿ ಅಂತೆಲ್ಲಾ ಅಮೆರಿಕ ಹೇಳಿತ್ತು. ಆದರೆ ಇದನ್ನೆಲ್ಲಾ ಮೀರಿ ಇದೀಗ ಹೊಸ ಐಡಿಯಾ ಮಾಡಿ ಅದನ್ನ ತಮ್ಮ ಆಪ್ತ ದೇಶಗಳ ಎದುರು ಇಡಲು ಗ್ರೀನ್‌ಲ್ಯಾಂಡ್ ನಾಯಕರು ಮುಂದಾಗಿದ್ದಾರೆ.

ಫ್ರೆಂಚ್ ಅಧ್ಯಕ್ಷರ ಜೊತೆಗೆ ಚರ್ಚೆ
ಗ್ರೀನ್‌ಲ್ಯಾಂಡ್‌ನ ಪ್ರಧಾನಿ ಇದೀಗ ದೇಶದ ಭವಿಷ್ಯದ ಬಗ್ಗೆ ಮಾತನಾಡಿದ್ದು, ರಷ್ಯಾ ಕುರಿತು ಆತಂಕ ಹೊರ ಹಾಕಿದ್ದಾರೆ. ಅಲ್ಲದೆ ಇದೇ ಕಾರಣಕ್ಕೆ ಈ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲು ಕೂಡ ಅವರು ಹಲವು ಪ್ರಸ್ತಾಪಗಳನ್ನು ಇದೀಗ ಮುಂದಿಟ್ಟಿದ್ದಾರೆ. ಶತಮಾನಗಳ ಕಾಲ ಡೆನ್ಮಾರ್ಕ್ ಅಡಿಯಲ್ಲೇ ಇರುವ ಈ ಗ್ರೀನ್‌ಲ್ಯಾಂಡ್ ಮೇಲೆ ಹಲವು ದೇಶಗಳು ಕಣ್ಣಿಟ್ಟು ಕೂತಿವೆ. ಹೀಗಾಗಿ ಈ ಭಾಗದಲ್ಲಿ ಭದ್ರತೆ ಹೆಚ್ಚಿಸಿ ಕಣ್ಗಾವಲು ಕೂಡ ಹೆಚ್ಚು ಮಾಡಬೇಕು ಎಂಬ ಸಲಹೆ ನೀಡಲಾಗಿದೆ. ಇದೇ ವಿಚಾರವಾಗಿ ಡೆನ್ಮಾರ್ಕ್ ಪ್ರಧಾನಿ ಹಾಗೂ ಗ್ರೀನ್‌ಲ್ಯಾಂಡ್ ಪ್ರಧಾನಿ ನೇರವಾಗಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರೋನ್ ಅವರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಗ್ರೀನ್‌ಲ್ಯಾಂಡ್ ನೆಲದಲ್ಲಿ ಹೊಸ ತಂತ್ರ
ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಅವರು ಇದೇ ಸಭೆಯಲ್ಲಿ ಆರ್ಕ್ಟಿಕ್ ಪ್ರದೇಶದಲ್ಲಿ ರಕ್ಷಣೆ ಇನ್ನೂ ಹೆಚ್ಚು ಬಲಪಡಿಸುವ ಅಗತ್ಯತೆ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಉತ್ತರದಲ್ಲಿ ರಷ್ಯಾ ನಿಲುವು, ಚೀನಾ ಆರ್ಥಿಕ ಉಪಸ್ಥಿತಿ ಮತ್ತು ಹೊಂದಾಣಿಕೆ ಕಾರ್ಯತಂತ್ರದ ಪರಿಣಾಮಗಳನ್ನ ಗಮನಿಸಿದರೆ ನಾವು ಇದೀಗ ಆರ್ಕ್ಟಿಕ್‌ನಲ್ಲಿ ನಮ್ಮ ರಕ್ಷಣಾ ನಿಲುವು ಬಲಪಡಿಸುವ ಅಗತ್ಯತೆ ಇದೆ ಎಂದಿದೆ ಫ್ರಾನ್ಸ್. ಈ ಮೂಲಕ ಗ್ರೀನ್‌ಲ್ಯಾಂಡ್ ನೆಲದ ಮೇಲೆ ಯುರೋಪ್ ದೇಶಗಳು ಇನ್ನಷ್ಟು ಹಿಡಿತ ಸಾಧಿಸಿ, ರಕ್ಷಣೆಗೆ ಮಹತ್ವದ ಕೊಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಗ್ರೀನ್‌ಲ್ಯಾಂಡ್ ಪ್ರಧಾನಿ ರಷ್ಯಾ ಬಗ್ಗೆ ಆತಂಕವನ್ನು ಹೊರ ಹಾಕಿದ್ದಾರೆ. ನಾವು ಒತ್ತಡದಲ್ಲಿದ್ದೇವೆ, ಗಂಭೀರ ಒತ್ತಡದಲ್ಲಿದ್ದೇವೆ ಎಂದು ಹೇಳಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ಯುರೋಪ್ ದೇಶಗಳು ಗ್ರೀನ್‌ಲ್ಯಾಂಡ್ ರಕ್ಷಣೆಗೆ ಹೊಸ ತಂತ್ರವನ್ನ ಹೂಡುವ ವಾತಾವರಣ ನಿರ್ಮಾಣ ಆಗುತ್ತಿದೆ.












Click it and Unblock the Notifications